ಕಲಘಟಗಿ: ಕೇರಳದಲ್ಲಿ ಬುಧವಾರ ಮೃತಪಟ್ಟ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ನಿವೃತ್ತ ಯೋಧ ಯಲ್ಲಪ್ಪ ಮೂಲಿಮನಿ(53) ಅವರ ಅಂತ್ಯಕ್ರಿಯೆ ಸ್ವ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶುಕ್ರವಾರ ನೆರವೇರಿತು.
17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯಲ್ಲಪ್ಪ ಅವರು, ನಿವೃತ್ತಿ ನಂತರವೂ ಸ್ವಯಂಪ್ರೇರಣೆಯಿಂದ ಕೇರಳ ರಾಜ್ಯದ ಕಣ್ಣನ್ನೂರಿನಲ್ಲಿರುವ ಡಿಫೆನ್ಸ್ ಸೆಕ್ಯುರಿಟಿ ಕೋರ್‌ನಲ್ಲಿ ( ಡಿಎಸ್‌ಸಿ) ರೆಕಾರ್ಡ್ ಅಧಿಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬುಧವಾರ ಬೆಳಗಿನ ಜಾವ ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದರು. ಶುಕ್ರವಾರ ಬೆಳಗಿನ ಜಾವ 2:30ರ ಸುಮಾರಿಗೆ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು. ಸಾರ್ವಜನಿಕರ ದರ್ಶನಕ್ಕಾಗಿ ನಿವಾಸದ ಎದುರು ತಾಲೂಕಾಡಳಿತ ವ್ಯವಸ್ಥೆ ಮಾಡಿತ್ತು.
ನಂತರ ಗ್ರಾಮದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಮಾಜದ ಪ್ರಮುಖರ ಮಾರ್ಗದರ್ಶನದಲ್ಲಿ ಕುಟುಂಬ ವರ್ಗದವರಿಂದ ಅಂತ್ಯಕ್ರಿಯೆ ನೆರವೇರಿತು.
ತಹಶೀಲ್ದಾರ ಜೆ.ವಿ. ಜಕ್ಕನಗೌಡ್ರ, ತಾಪಂ ಇಒ ಅಧಿಕಾರಿ ಎಸ್.ಎಂ. ಕಾಂಬಳೆ, ಪಿಎಸ್‌ಐ ಪರಮೇಶ್ವರ ಕವಟಗಿ, ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಸೋಮಶೇಖರ ಬೆನ್ನೂರ, ತಾಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಶೆಟವಪ್ಪ ದೊಡಮನಿ, ಉಪಾಧ್ಯಕ್ಷೆ ಬಸವ್ವ ಹುಲ್ಲಂಬಿ ಮುಂತಾದವರಿದ್ದರು.