Advertisement

Leech: ಸದ್ದಿಲ್ಲದೇ ನೆತ್ತರು ಹೀರುವ ಮಹಾಶಯ

10:59 AM Feb 20, 2024 | Team Udayavani |

ಮನೆಯಲ್ಲಿ ಬೇಡದ ವಸ್ತುಗಳನ್ನು ಕಂಡಾಗ ಒಮ್ಮೆ ಅದನ್ನು ಸರಿಸಿ ಬಿಡುವ ಎಂದು ಅನೇಕ ಬಾರಿ ನಾವಂದುಕೊಂಡರು ನಾಳೆ ಮಾಡಿದರಾಯ್ತು, ನಾಡಿದ್ದು ಎಂದು ಉದಾಸೀನ ಪ್ರವೃತ್ತಿಯಿಂದ ಆ ಕೆಲಸ ಹಾಗೆ ಉಳಿದು ಬಿಡುತ್ತದೆ. ಅಂದೊಂಸು ದಿನ ಏನಾದರಾಗಲಿ ಬಾಕಿ ಇಟ್ಟ ಕೆಲಸ ಮಾಡಲೇಬೇಕೆಂದು ಖಜಾನೆ ತೆರೆದೆ. ಆದರೆ ನನ್ನ ಖಜಾನೆಯಲ್ಲಿ ರತ್ನ ವೈಡೂರ್ಯದ ಮೂಟೆ ಇರಲಿಲ್ಲ ಬದಲಿಗೆ ಬೇಡದ ಖಾಲಿಯಾದ ಟಾನಿಕ್‌ ಬಾಟಲ್‌, ಜ್ವರ ಬರಬಹುದೆಂದು ಮೊದಲೇ ಮುನ್ನೆಚ್ಚರಿಕೆಯಾಗಿ ತಂದಿಟ್ಟ ಶೀತ ಜ್ವರದ ಟ್ಯಾಬ್ಲೆಟ್‌ ಎಲ್ಲವೂ ಅವಧಿ ಪೂರ್ಣವಾಗಿ ಬಳಸಲು ಯೋಗ್ಯವಿರಲಿಲ್ಲ.

Advertisement

ಇವೆಲ್ಲದರ ಜತೆ ಒಂದು ಸಣ್ಣ ಡಬ್ಬಿಯಲ್ಲಿ ತೆಂಗಿನ ಎಣ್ಣೆ ಅರಶಿನ ಮಿಶ್ರಣ ಕಾಣುತ್ತಿತ್ತು. ಇದು ಯಾವಾಗ ಯಾಕೆ ಬಳಸಿರಬಹುದು ಎಂದು ಯೋಚಿಸುತ್ತಲೇ ಕೆಲ ತಿಂಗಳ ಹಿಂದೆ ಚಾರಣಕ್ಕೆ ಹೊರಟಿದ್ದ ಕ್ಷಣ ಒಮ್ಮೆಗೆ ನೆನಪಾಯಿತು. ಕೊಲ್ಲೂರಿನ ಸಮೀಪದ ಬೆಳ್ಕಲ್‌ ತೀರ್ಥ ಜಲಪಾತಕ್ಕೆ ಹೊರಟ ನಮ್ಮ ಚಾರಣಕ್ಕೆ ಕೇಳದೆ ಅತಿಥಿಯೊಬ್ಬರು ನಮ್ಮೆಲ್ಲರೊಡನೆ ಬೆರೆತಿದ್ದರು. ಇವರ್ಯಾರು? ಯಾಕೆ ಬಂದರು? ಎಂಬ ಗೊಡವೆಗೂ ನಾವು ಹೋಗಿರಲಿಲ್ಲ. ಒಂದು ಗಂಟೆಯಷ್ಟು ನಡೆಯಬೇಕಾದ ಕಾರಣ ಕಾಡು ಹರಟೆಯಲ್ಲಿ ಅನೇಕ ವಿಚಾರಗಳು ಬಂದು ಹೋಗಿದ್ದವು. ಇವೆಲ್ಲವನ್ನು ಆ ವಿಶೇಷ ಅತಿಥಿ ಮರೆಯಲ್ಲಿ ಕೂತು ಕೇಳುತ್ತಲೇ ಇದ್ದ.

ಅರ್ಧ ದೂರಕ್ಕೆ ಹೋದಾಗ ಗೆಳತಿಯೊಬ್ಬರು ಇದೆನೋ ವಿಚಿತ್ರವಾಗಿದೆ ಎಂದು ಹೇಳುತ್ತಲೇ ಈ ಅತಿಥಿ ಪರಿಚಯ ನಮಗೂ ಆಯ್ತು. ಮಿಸ್ಟರ್‌ ಜಿಗಣೆ ಅದಾಗಲೇ ಕಾಲಿನ ಮೇಲೆ ಹಾಯಾಗಿ ಕುಳಿತು ಅರ್ಧದಷ್ಟು ಹೊಟ್ಟೆ ತುಂಬಾ ರಕ್ತ ಕುಡಿದು ಯಾವುದರ ಪರಿವೇ ಇಲ್ಲದೇ ಚರ್ಮಕ್ಕೆ ಅಂಟಿಕೊಂಡಿತ್ತು. ಕಸ ಕಡ್ಡಿ ನೋಡಿದರೂ ಅದೇ ಇರಬಹುದಾ ಎಂದು ಭಯವಾಗುತ್ತಿತ್ತು. ಈಗಾಗಲೇ ಕಚ್ಚಿದ ಜಿಗಣೆ ಏನು ಮಾಡಿದರೂ ಜಗ್ಗುತ್ತಿಲ್ಲ. ಕೋಲಿನಲ್ಲಿ ಚರ್ಮಕ್ಕೆ ಒತ್ತಿ ಹೇಗೊ ಹೊರ ಹಾಕಿದೆ. ಶೂ ತೆಗೆದು ಇನ್ನೊಂದು ಕಾಲನ್ನು ನೋಡಿದೆ. ಹೆಬ್ಬೆರಳ ಹತ್ತಿರ ಒಣಗೆಲೆಯ ಸಣ್ಣ ಚೂರೊಂದು ಕಾಣುತ್ತಿತ್ತು ಕೈಯಲ್ಲಿ ಸರಿಸಲು ನೋಡಿದರೆ ಅದು ಮತ್ತೂಂದು ಜಿಗಣೆ ಎಂದು ಮನದಟ್ಟಾಯಿತು.

ಚಾರಣಕ್ಕೆ ಬಂದ ಅನೇಕರಿಗೆ ಜಿಗಣೆ ಮುತ್ತಿಕ್ಕಿ ನೆನಪಿನ ಗುರುತನ್ನು ನೀಡಿದ್ದು ತಿಳಿಯಿತು. ಪಾಪ ಎಲ್ಲೆಲ್ಲಿ ಕಚ್ಚಿದೆಯೋ ಏನೊ?, ತೊರಿಸಲಾದರೆ ಪರವಾಗಿಲ್ಲ ಇಲ್ಲವಾದರೆ ನಮಗ್ಯಾಕೆ ಎಂದು ಯಾರನ್ನು ಎಲ್ಲಿ ಕಚ್ಚಿದ್ದು ಎಂದು ಕೇಳುವ ಗೊಡವೆಗೆ ಹೋಗಲಿಲ್ಲ. ಚಾರಣದಿಂದ ವಾಪಾಸ್ಸಾದ ಬಳಿಕ ಜಿಗಣೆ ಕಚ್ಚಿ ಕಲೆ ಮಾಡಿದ್ದ ಜಾಗ ವಿಪರೀತ ತುರಿಕೆ ಕಾಣುತ್ತಿತ್ತು. ಏನು ಮಾಡಿದರೂ ತುರಿಕೆ ಮಾತ್ರ ಕಡಿಮೆ ಆಗುವಂತಿರಲಿಲ್ಲ. ರಕ್ತ ಹೀರಿದ್ದು ನಮಗೆ ಅರಿವಿಗೆ ಬಾರದಿದ್ದರೂ ಬಳಿಕ ಪಡುವ ಕಷ್ಟಕ್ಕೆ ಹಿಡಿಶಾಪ ಹಾಕುತ್ತಿದ್ದೆ.

ರಕ್ತಕಣ್ಣಿರು ಸಿನೆಮಾದ ಒಂದು ಡೈಲಾಗ್‌ ಕೂಡ ನೆನಪಾಗಿ ಕೆರೆಯೋದರಲ್ಲೂ ಅದೇನೋ ಖುಷಿ ಇದೆ ಎಂದು ಅನಿಸಿದರೂ ಕೆರೆತ ವಿಪರೀತವಾಗಿ ಸುಡು ನೋವು ಕಾಣುವಾಗ ಮತ್ತೆ ಸ್ವ ವೈದ್ಯೆಯಾದೆ. ಉಪದೇಶ ನೀಡುವ ಕೆಲ ಮಾತುಗಳನ್ನು ಕೇಳಿದ್ದು ಆಯ್ತು, ನಂಜಿನಂಶ ತಿನ್ನುವಂತಿಲ್ಲ, ಎಣ್ಣೆ ಅರಶಿನ ಮಿಶ್ರಣ ಮಾಡಿ ಹಾಕಿದರೂ ತುರಿಕೆ ಹಾಗೆಯೇ ಇತ್ತು.

Advertisement

ಮೆಡಿಕಲ್‌ನಲ್ಲಿ ತಿಗಣೆ ಕಚ್ಚಿದ್ದಕ್ಕೆ ಔಷಧ ಇದ್ಯಾ ಸರ್‌ಎಂದು ಕೇಳಿದರೆ ಅಲ್ಲಿನ ಸಿಬಂದಿ ಕೂಡ ಮುಗುಳ್ನಕ್ಕು ಬಳಿಕ ಅದಕ್ಕಾಗಿ ಯಾವ ಕ್ರೀಂ ಇಲ್ಲ. ನಂಜಿನ ನಿರೋಧಕ, ಚರ್ಮದ ಅಲರ್ಜಿ ಶಮನದ ಕ್ರೀಂ ಇದೆ ಎಂದರು. ಕ್ರೀಂ ಖರೀದಿ ಮಾಡಿ ಹಾಕಿದ್ದೂ ಆಯ್ತು ಆದರೂ ಕೆರೆಯೋದೆ ಪಾಡಾಗಿತ್ತು. ಅಯ್ಯೋ ಯಾರಿಗೆ ಬೇಡವಪ್ಪ ಈ ಪಾಡು ಎಂದು ಅಂದುಕೊಳ್ಳುತ್ತಲೇ ಹೇಗೋ ಒಂದಷ್ಟು ದಿನ ಇದೇ ಪಾಡು ಪಟ್ಟು ಅಂತೂ ವಾಸಿಯಾಯ್ತು.

ಜಿಗಣೆ ವೈದ್ಯ

ಜಿಗಣೆ ಕಚ್ಚಿದಾಗ ಗೂಗಲ್‌ ಪಂಡಿತರ ಕೆಲವು ಬಿಟ್ಟಿ ಸಲಹೆ ಪಾಲಿಸಿದ್ದು ಇದೆ. ಆಗ ಜಿಗಣೆಯ ವಿಶೇಷ ಗುಣಗಳು ಅರಿವಾಯ್ತು. ಇತ್ತೀಚಿನ ದಿನದಲ್ಲಿ ಚರ್ಮ ಸಂಬಂಧಿತ ಸಮಸ್ಯೆಗೆ ಲೀಚ್‌ ಥೇರಪಿ ನೀಡಲಾಗುತ್ತಿದ್ದು ವಿಷ ರಹಿತ ಜಿಗಣೆಯನ್ನು ಬಳಕೆ ಮಾಡಲಾಗುತ್ತದೆ. ಒಂದು ಜಿಗಣೆ 5ರಿಂದ 30 ಎಂ.ಎಲ್‌. ರಕ್ತ ಹೀರುವ ಸಾಮರ್ಥ್ಯ ಹೊಂದಿದ್ದು ಅನೇಕ ಚಿಕಿತ್ಸೆಗೆ ಥೆರೆಪಿಯಾಗಿ ಜಿಗಣೆ ಬಳಕೆ ಮಾಡುತ್ತಲೇ ಬರಲಾಗಿದೆ ಎಂಬುದು ತಿಳಿದಾಗ ನನಗೂ ಆಶ್ಚರ್ಯವಾಯಿತು.

ಕಾಡೆಂದಮೇಲೆ ಅಲ್ಲಿ ಜಿಗಣೆ ವಾಸಿಸುವುದು ಸಾಮಾನ್ಯ. ಆದರೆ ಚಾರಣಕ್ಕೆ ಹೋಗಬೇಕೆಂದಾಗ ಇಂತಹ ವಿಚಾರದ ಪೂರ್ವ ಸಿದ್ಧತೆ ಮಾಡದೇ ಇರುವುದು ನಮ್ಮದೇ ತಪ್ಪು. ಒಂದರ್ಥದಲ್ಲಿ ಕಾಡಿನ ವಾಸಿಯಾದ ಜಿಗಣೆಗೆ ನಾವೆಲ್ಲ ಕರೆಯದೇ ಬಂದ ಅತಿಥಿಗಳಾಗಿದ್ದೆವು.

ಕಾಡೆಂಬ ವಿಸ್ಮಯದಲ್ಲಿ ಇಂತಹ ಅನೇಕ ಜೀವಿಗಳು ಕಾಣ ಸಿಗಲಿದ್ದು ಜಿಗಣೆಯನ್ನೇ ಒಂದು ಆದರ್ಶ ಜೀವಿಯಾಗಿ ಕೂಡ ಪರಿಗಣಿಸಬಹುದು. ಯಾಕೆಂದರೆ ಅದಕ್ಕೆ ರೂಪವಿಲ್ಲ, ಆಕಾರವಿಲ್ಲ, ಮೂಳೆ ಇಲ್ಲ ಇಂತಹ ವೈರುದ್ಯಗಳಿದ್ದರೂ ಜೀವನ ಮಾಡುತ್ತದೆ. ಆದರೆ ನಮಗೆ ಸಿಕ್ಕ ಮಾನವ ಜನ್ಮದಲ್ಲಿ ಎಲ್ಲ ಇದ್ದರೂ ಇಲ್ಲವೆಂಬ ಕೊರಗಲ್ಲೇ ಇರುತ್ತೇವೆ.

ಇಲ್ಲದ್ದನ್ನು ಅರಸುವುದು ಎಷ್ಟು ಮುಖ್ಯವೊ ಇದ್ದದ್ದರಲ್ಲಿ ಖುಷಿಯಿಂದ ಬದುಕುವ ಜೀವನ ಶೈಲಿಯೂ ಬಹಳ ಮುಖ್ಯ ಎಂದು ಯೋಚಿಸುತ್ತಲೇ ಮತ್ತೆ ವಾಸ್ತವಕ್ಕೆ ಬಂದು ಜಿಗಣೆಗೆ ಬಳಸಿದ್ದ ನಂಜಿನ ಔಷಧ ಎತ್ತಿಟ್ಟು ಉಳಿದ ಕಸ ಹೊರಹಾಕಿದೆ. ಬಳಿಕ ಮೊಬೈಲ್‌ ಸ್ವೆ„ಪ್‌ ಮಾಡುತ್ತಲೇ ಮತ್ತೆ ರಕ್ತ ಕಣ್ಣಿರು ಸಿನೆಮಾದ ಮೋಹನನ ಕೆರೆಯೋ ಸೀನ್‌ ಪ್ಲೇ ಆಗಿ ಡೈಲಾಗ್‌ ಬಂದಾಗ ನನಗರಿವಿಲ್ಲದೆ ಮತ್ತೂಮ್ಮೆ ಜಿಗಣೆ ರಾಜ ನೆನಪಾದ.

-ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next