Advertisement

ಎಲ್‌ಇಡಿ ಲೈಟ್‌; ಸವಾರರಿಗೆ ಕಿರಿಕ್‌

09:25 AM Mar 19, 2019 | |

ಗುಳೇದಗುಡ್ಡ: ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್‌ ಬಳಸುವಂತಿಲ್ಲ. ಇದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿದ ವಾಹನ ಸವಾರರು ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳನ್ನು ಬೈಕ್‌, ಟಂಟಂ ಸೇರಿದಂತೆ ಹಲವು ವಾಹನಗಳಿಗೆ ಅಳವಡಿಸಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

Advertisement

ವಾಹನಗಳಿಗೆ ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳ ಬಳಕೆ ಹೆಚ್ಚುತ್ತಿದ್ದು, ಇದರಿಂದ ಎದುರಿಗೆ ಬರುವ ವಾಹನ ಸವಾರ ಭಯದಲ್ಲೇ ಸಂಚರಿಸುವಂತಾಗಿದೆ. ಸಂಬಂಧಪಟ್ಟವರು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲವಾಗಿದೆ. 

ಏನು ಹೇಳುತ್ತೆ ನಿಯಮ: ಆರ್‌ಟಿಒ ಅಧಿಕಾರಿಗಳೇ ಹೇಳುವಂತೆ ವಾಹನ ತಯಾರಿಸುವಾಗ ಆ ಕಂಪನಿ ನೀಡಿರುವ ಲೈಟ್‌ ಬಿಟ್ಟರೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಬೇರೆ ಲೈಟ್‌ ಅಳವಡಿಸುವಂತಿಲ್ಲ. ಅಷ್ಟೇ ಏಕೆ ಹಾರ್ನ್ ಕೂಡ ಬೇರೆ ಹಾಕುವಂತಿಲ್ಲ. ಇಷ್ಟೇ ಡೆಸಿಬಲ್‌ ಪ್ರಮಾಣದ ಹಾರ್ನ್ ಹಾಕುವಂತಹ ನಿಯಮಗಳಿದ್ದರೂ ಹಲವು ವಾಹನ ಸವಾರರು ಈ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಲೈಟ್‌ ಅಳವಡಿಸುತ್ತಿದ್ದಾರೆ.

ಏಕೆ ಬಳಸುತ್ತಿದ್ದಾರೆ ಈ ಲೈಟ್‌: ಬೈಕ್‌, ಟಂಟಂಗಳ ಲೈಟ್‌ಗಳು ಹೆಚ್ಚು ಬೆಳಕು ನೀಡುತ್ತಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ದೊಡ್ಡ ವಾಹನಗಳು ಎದುರಿಗೆ ಬಂದಾಗ ಆ ವಾಹನಗಳ ಲೈಟ್‌ ಮುಂದೆ ಬೈಕ್‌ಗಳ ಲೈಟ್‌ ಬೆಳಕು ಕಡಿಮೆಯಾಗುತ್ತಿರುವುದರಿಂದ ಈ ಎಲ್‌ಇಡಿ ಲೈಟ್‌ಗಳನ್ನೇ ಹೆಚ್ಚು ಬಳಸಲಾಗುತ್ತಿದೆ. ಆದರೆ ಈ ಲೈಟ್‌ಗಳಿಂದ ಒಳ್ಳೆಯದಕ್ಕಿಂತ ಅಪಾಯವೇ ಜಾಸ್ತಿ. ಆದರೂ ಸಹ ಇದರ ಬಳಕೆ ದಿನೇ ದಿನೇ ಹೆಚ್ಚುತ್ತಿದೆ.

ಅಪಾಯ ಏನು: ಎಲ್‌ಇಡಿ ಲೈಟ್‌ ಬಳಕೆ ಮಾಡುವುದರಿಂದ ಪೋಕಸ್‌ ಹೆಚ್ಚಾಗಿ ಎದುರಿಗೆ ಬರುವ ವಾಹನ ಸವಾರನಿಗೆ
ದಾರಿ ಕಾಣದಂತಾಗುತ್ತದೆ. ಇದರಿಂದ ವಾಹನ ಸವಾರ ಕೆಲವು ಸಲ ನಿಯಂತ್ರಣ ತಪ್ಪುವಂತಹ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲ ಎಲ್‌ಇಡಿಗಳು ಅತಿಯಾದ ಬೆಳಕು ಕೊಡುವುದರಿಂದ ಎದುರಿನ ವಾಹನ ಸವಾರ ರಸ್ತೆ ಪಕ್ಕಕ್ಕೆ ಸರಿಯಲು ಹೋಗಿ ಅಪಾಯ ಮಾಡಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ ಎಂಬುದು ಹಲವು ವಾಹನ ಸವಾರರ ಆರೋಪ.

Advertisement

ಬೈಕ್‌ ಸವಾರರ ವಾದ ಏನು: ಎದುರಿಗೆ ಕಾರು, ಲಾರಿ ಬಂದಾಗ ಆ ವಾಹನಗಳ ಸವಾರರು ಲೈಟ್‌ ಡಿಪ್‌ ಮತ್ತು ಡಿಮ್‌ ಮಾಡುವುದಿಲ್ಲ. ಇದರಿಂದ ನಮ್ಮ ಬೈಕ್‌ಗಳ ಲೈಟ್‌ಗಳ ಫೋಕಸ್‌ ಕಡಿಮೆಯಾಗುತ್ತದೆ. ಇದರಿಂದ ನಾವು ರಸ್ತೆ ಕಾಣಲಿ ಎಂದು ಎಲ್‌ಇಡಿ ಲೈಟ್‌ ಅಳವಡಿಸುತ್ತೇವೆ. ಎದುರಿಗೆ ಬರುವ ವಾಹನ ಸವಾರರು ಸಹ ತಮ್ಮ ವಾಹನಗಳ ಲೈಟ್‌ ಬೆಳಕು ಕಡಿಮೆ ಮಾಡಬೇಕು. ಅವರು ಮಾಡುವುದಿಲ್ಲ ಎಂದು ನಾವು ಎಲ್‌ಇಡಿ ಲೈಟ್‌ ಅಳವಡಿಸಿದ್ದೇವೆ ಎನ್ನುತ್ತಾರೆ ಎಲ್‌ಇಡಿ ಲೈಟ್‌ ಅಳವಡಿಸಿರುವ ಸವಾರರು. 

ಕಳೆದ ಹಲವು ತಿಂಗಳಿಂದ ಬೈಕ್‌, ಟಂಟಂ ವಾಹನ ಸವಾರರು ಎಲ್‌ಇಡಿ ಲೈಟ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರ ಕಣ್ಣಿಗೆ ಕತ್ತಲು ಆವರಿಸಿದಂತಾಗುತ್ತದೆ. ಎಲ್‌ಇಡಿ ಲೈಟ್‌ನಿಂದ ಅಪಾಯಗಳು ತಪ್ಪಿದ್ದಲ್ಲ. ಆದ್ದರಿಂದ ಈ ಎಲ್‌ಇಡಿ ಲೈಟ್‌ ನಿಷೇಧಿ ಸಿ ಜನರ ಪ್ರಾಣ ಉಳಿಸಬೇಕು. 
 ಸಂಗಪ್ಪ ಚಟ್ಟೇರ, ಸಾಮಾಜಿಕ ಕಾರ್ಯಕರ್ತ, ಗುಳೇದಗುಡ್ಡ

ಎಲ್‌ಇಡಿ ಲೈಟ್‌ ಬಳಕೆ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಲೈಟ್‌ ಬಳಸುವುದರಿಂದ ವಾಹನ ಸವಾರನ ಕಣ್ಣಿನ ರೇಟಿನಾದಲ್ಲಿ ತೊಂದರೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.  
 ಡಾ|ಜಗದೀಶ ಸತರಡ್ಡಿ, ನೇತ್ರ ತಜ್ಞರು, ದೃಷ್ಟಿ ಕಣ್ಣಿನ ಆಸ್ಪತ್ರೆ, ಬಾಗಲಕೋಟ 

 ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next