Advertisement

329 ರನ್‌ ಚೇಸಿಂಗ್: ಇಂಗ್ಲೆಂಡ್‌ ಮೇಲೆ ಸ್ಟರ್ಲಿಂಗ್‌, ಬಾಲ್‌ಬಿರ್ನಿ ಸವಾರಿ

12:40 AM Aug 06, 2020 | Hari Prasad |

ಸೌತಾಂಪ್ಟನ್‌: ಆರಂಭಕಾರ ಪಾಲ್‌ ಸ್ಟರ್ಲಿಂಗ್‌ ಮತ್ತು ನಾಯಕ ಆ್ಯಂಡ್ರ್ಯೂ ಬಾಲ್‌ಬಿರ್ನಿ ಅವರ ಅಮೋಘ ಶತಕ ಸಾಹಸದಿಂದ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಎದುರಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಐರ್ಲೆಂಡ್‌ ಕ್ಲೀನ್‌ಸ್ವೀಪ್‌ ಅವಮಾನದಿಂದ ಪಾರಾಯಿತು.

Advertisement

ಮಂಗಳವಾರ ರಾತ್ರಿಯ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ 328 ರನ್ನಿಗೆ ಆಲೌಟಾದರೆ, ಐರ್ಲೆಂಡ್‌ 49.5 ಓವರ್‌ಗಳಲ್ಲೇ 3 ವಿಕೆಟಿಗೆ 329 ರನ್‌ ಬಾರಿಸಿ ಪ್ರಚಂಡ ಗೆಲುವು ಸಾಧಿಸಿತು;

ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಸ್ಟರ್ಲಿಂಗ್‌ 142 ರನ್‌ ರಾಶಿ ಹಾಕಿದರೆ (128 ಎಸೆತ, 9 ಬೌಂಡರಿ, 6 ಸಿಕ್ಸರ್‌), ಬಾಲ್‌ಬಿರ್ನಿ 112 ಎಸೆತಗಳಿಂದ 113 ರನ್‌ ಹೊಡೆದರು (12 ಬೌಂಡರಿ). ಇವರಿಂದ ದ್ವಿತೀಯ ವಿಕೆಟಿಗೆ 214 ರನ್‌ ಪೇರಿಸಲ್ಪಟ್ಟಿತು.

ಇದು ಇಂಗ್ಲೆಂಡ್‌ ಎದುರು ಐರ್ಲೆಂಡ್‌ ಸಾಧಿಸಿದ 2ನೇ ಜಯ. ಕಾಕತಾಳೀಯವೆಂದರೆ, 2011ರ ವಿಶ್ವಕಪ್‌ ಕೂಟದ ಬೆಂಗಳೂರು ಪಂದ್ಯದಲ್ಲೂ ಇಂಥದೇ ಪರಾಕ್ರಮ ತೋರಿದ ಐರಿಷ್‌ ಪಡೆ 7 ವಿಕೆಟಿಗೆ 329 ರನ್‌ ಬಾರಿಸಿಯೇ ಜಯಿಸಿತ್ತು. ಅಂದು ಇಂಗ್ಲೆಂಡ್‌ 8 ವಿಕೆಟಿಗೆ 327 ರನ್‌ ಪೇರಿಸಿತ್ತು. ಕೆವಿನ್‌ ಓ’ಬ್ರಿಯಾನ್‌ 113 ರನ್‌ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು.

ಬಾಲ್‌ಬಿರ್ನಿ ಔಟಾಗುವಾಗ ಐರ್ಲೆಂಡ್‌ ಜಯಕ್ಕೆ 33 ಎಸೆತಗಳಿಂದ ಇನ್ನೂ 50 ರನ್‌ ಅಗತ್ಯವಿತ್ತು. ಹ್ಯಾರಿ ಟೆಕ್ಟರ್‌-ಕೆವಿನ್‌ ಓ’ಬ್ರಿಯಾನ್‌ ಸೇರಿ ತಂಡವನ್ನು ದಡ ಮುಟ್ಟಿಸಿದರು.

Advertisement

ಭಾರತದ ದಾಖಲೆ ಪತನ
ಐರ್ಲೆಂಡಿನ ಈ ಸಾಧನೆ ಎನ್ನುವುದು ಇಂಗ್ಲೆಂಡ್‌ ಎದುರು ಅವರದೇ ನೆಲದಲ್ಲಿ ದಾಖಲಾದ ಅತೀ ಹೆಚ್ಚು ರನ್ನುಗಳ ಯಶಸ್ವಿ ಚೇಸಿಂಗ್‌ ದಾಖಲೆಯಾಗಿದೆ. ಇದರೊಂದಿಗೆ ಭಾರತದ 2002ರ ನಾಟ್‌ವೆಸ್ಟ್‌ ಫೈನಲ್‌ ಪಂದ್ಯದ ಚೇಸಿಂಗ್‌ ದಾಖಲೆ ಪತನಗೊಂಡಿತು. ಅಂದು ಭಾರತ 8 ವಿಕೆಟಿಗೆ 326 ರನ್‌ ಬಾರಿಸಿ ಚಾಂಪಿಯನ್‌ ಆಗಿತ್ತು.

ಮಾರ್ಗನ್‌ ಹೋರಾಟ
ಇಂಗ್ಲೆಂಡ್‌ 3 ವಿಕೆಟಿಗೆ 44 ರನ್‌ ಮಾಡಿ ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಆದರೆ ಕಪ್ತಾನನ ಆಟವಾಡಿದ ಇಯಾನ್‌ ಮಾರ್ಗನ್‌ 106 ರನ್‌ ಬಾರಿಸಿ ತಂಡವನ್ನು ಮೇಲೆತ್ತಿದರು (84 ಎಸೆತ, 15 ಬೌಂಡರಿ, 4 ಸಿಕ್ಸರ್‌). ಟಾಮ್‌ ಬ್ಯಾಂಟನ್‌ 58, ಡೇವಿಡ್‌ ವಿಲ್ಲಿ 51 ರನ್‌ ಕೊಡುಗೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-49.5 ಓವರ್‌ಗಳಲ್ಲಿ 328 (ಮಾರ್ಗನ್‌ 106, ಬ್ಯಾಂಟನ್‌ 58, ವಿಲ್ಲಿ 51, ಯಂಗ್‌ 53ಕ್ಕೆ 3). ಐರ್ಲೆಂಡ್‌-49.5 ಓವರ್‌ಗಳಲ್ಲಿ 3 ವಿಕೆಟಿ 329 (ಸ್ಟರ್ಲಿಂಗ್‌ 142, ಬಾಲ್‌ಬಿರ್ನಿ 113).

ಪಂದ್ಯಶ್ರೇಷ್ಠ: ಪಾಲ್‌ ಸ್ಟರ್ಲಿಂಗ್‌. ಸರಣಿಶ್ರೇಷ್ಠ: ಡೇವಿಡ್‌ ವಿಲ್ಲಿ.

Advertisement

Udayavani is now on Telegram. Click here to join our channel and stay updated with the latest news.

Next