ಕುಳಗೇರಿ ಕ್ರಾಸ್: ಗ್ರಾಮದ ಉಪನ್ಯಾಸಕ ಶಂಕರ ತೆಗ್ಗಿ ನಿತ್ಯವೂ ಒಂದಿಲ್ಲೊಂದು ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸೇರಿಸಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮನೆ ಮಾತಾಗಿದ್ದಾರೆ.
ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳಗ್ಗೆ-ಸಂಜೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
ಅಕ್ಷರ ಯಾತ್ರೆ: ತಾನು ಪಡೆದ ಶಿಕ್ಷಣ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ “ಅಕ್ಷರ ಯಾತ್ರೆ’ ಶೀರ್ಷಿಕೆಯಡಿ ವಿವಿಧ ಗ್ರಾಮಗಳಿಗೆ ಹೋಗುವ ಉಪನ್ಯಾಸಕ ಶಂಕರ ತೆಗ್ಗಿಯವರು ಅಲ್ಲಿನ ಪ್ರಮುಖರನ್ನು ಭೇಟಿ ಮಾಡಿ ಮನೆ-ಮನೆಗಳಿಗೆ ತೆರಳಿ ಮಕ್ಕಳನ್ನು ಒಗ್ಗೂಡಿಸಿ ಶಾಲೆ ಅಥವಾ ದೇವಸ್ಥಾನ ಆವರಣದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ನೂರಾರು ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಇದೆ. ಅನೇಕ ಮಕ್ಕಳು ಟ್ಯೂಷನ್ ಪಡೆಯಲು ಪಟ್ಟಣ ಪ್ರದೇಶಕ್ಕೆ ಬರಬೇಕು. ನಾನು ಸಹ ಬಡ ಕುಟುಂಬದಲ್ಲಿ ಜನಿಸಿದವನು. ಗ್ರಾಮೀಣ ಮಕ್ಕಳ ನೋವು ಅರಿತಿರುವೆ. ಸುಮಾರು ವರ್ಷಗಳಿಂದ “ಅಕ್ಷರ ಯಾತ್ರೆ’ ಆರಂಭಿಸಿದ್ದು, ನಿತ್ಯ ನಾಲ್ಕೈದು ಗ್ರಾಮಗಳಿಗೆ ತೆರಳಿ ಅಲ್ಲಿಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇನೆ. ಸಮಾಜಕ್ಕಾಗಿ ನಾನು ಏನನ್ನಾದರೂ ಕೊಡಬೇಕೆಂಬುದಿತ್ತು. ಹೀಗಾಗಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿ-ಸಂಸ್ಕಾರ ಹೇಳಿ ಕೊಡುತ್ತಿದ್ದೇನೆ. ಮಕ್ಕಳು-ಪಾಲಕರು ಆಸಕ್ತಿ ತೋರುತ್ತಿದ್ದಾರೆ. ನನಗೆ ಖುಷಿ ತಂದಿದೆ ಎನ್ನುತ್ತಾರೆ ಉಪನ್ಯಾಸಕ ಶಂಕರ ತೆಗ್ಗಿ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶಂಕರ ತೆಗ್ಗಿ ಕಾರ್ಯ ಶ್ಲಾಘನೀಯ. ಗ್ರಾಮೀಣ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಇಂಥ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಕಟ್ಟ ಕಡೆಯ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯುತ್ತದೆ. ಬೀರಪ್ಪ ದ್ಯಾವನಗೌಡ್ರ, ಗ್ರಾಮಸ್ಥ.
ನಾನು ಪಿಯುಸಿ ಓದುತ್ತಿದ್ದು, ಟ್ಯೂಷನ್ ಗಾಗಿ ಪಟ್ಟಣಕ್ಕೆ ಹೋಗಬೇಕು. ಅದರಲ್ಲೂ ಒಬ್ಬ ಉಪನ್ಯಾಸಕರು ನಮ್ಮ ಮನೆ ಬಾಗಿಲಿಗೆ ಬಂದು ಉಚಿತ ಶಿಕ್ಷಣ ನೀಡುತ್ತೇನೆ ಎಂದರೆ ನಮ್ಮ ಪುಣ್ಯ. ಶಿಕ್ಷಕ ಶಂಕರ ಅವರಿಗೆ ನಾವು ಚಿರಋಣಿ. ಸದ್ಯ ನಮ್ಮ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದೇವೆ. –
ಚೈತ್ರಾ ಮೂಗನೂರಮಠ, ವಿದ್ಯಾರ್ಥಿನಿ, ತಳಕವಾಡ.
ಮಹಾಂತಯ್ಯ ಹಿರೇಮಠ