Advertisement

ಭಾನುವಾರದ ಆಂಗ್ಲ ತರಗತಿಗೆ ಉಪನ್ಯಾಸಕರ ಅಸಮಾಧಾನ

11:48 AM Aug 06, 2017 | |

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂದಿನಿಂದ (ಆ. 6) ಸುಮಾರು 25 ಭಾನುವಾರಗಳ ಕಾಲ ಆಂಗ್ಲ ಭಾಷಾ ವಿಷಯದಲ್ಲಿ ವ್ಯಾಕರಣ ಮತ್ತು ಮಾತನಾಡುವ ಕೌಶಲ್ಯ ಉತ್ತಮ ಗೊಳಿಸಲು ವಿಶೇಷ ತರಗತಿ ನಡೆಸಲು ಮುಂದಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಧಾರವು ಉಪನ್ಯಾಸಕರ ಅಸಮಧಾನಕ್ಕೆ ಕಾರಣವಾಗಿದೆ.

Advertisement

ಸರ್ಕಾರದ ಈ ಯೋಜನೆ ಚೆನ್ನಾಗಿದೆ. ಆದರೆ, ಭಾನುವಾರವೂ 3 ಗಂಟೆ ತರಗತಿ ನಡೆಸಬೇಕು ಎಂಬ ನಿಯಮ ಸರಿಯಲ್ಲ. ವಾರದಲ್ಲಿ ಸಿಗುವ ಒಂದು ರಜೆಯೂ ಹೀಗೆ ಕಳೆದು ಹೋದರೆ, ಕುಟುಂಬ ಹಾಗೂ ನಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದು ಬೇಡವೇ? ಒಂದೆರೆಡು ವಾರವಾದರೆ ಪರವಾಗಿಲ್ಲ. ಸುಮಾರು 25 ಭಾನುವಾರ ನಿರಂತರ ತರಗತಿ ನಡೆಸುವುದು ಸುಲಭವಲ್ಲ. ಹೀಗಾಗಿ ಈ ವಿಚಾರವಾಗಿ ಯಾವೊಬ್ಬ ಉಪನ್ಯಾಸಕರನ್ನು ಇಲಾಖೆ ಒತ್ತಾಯ ಮಾಡಬಾರದು ಎಂದು ಉಪನ್ಯಾಸಕರು ಆಗ್ರಹಿಸಿದ್ದಾರೆ.

ಸರ್ಕಾರದ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಭಾನುವಾರ ನಡೆಸುವ ಬದಲು ನಿತ್ಯದ ತರಗತಿಯಲ್ಲೇ ಅದನ್ನು ಸರಿದೂಗಿಸಬೇಕು. ಬೆಳಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಹೆಚ್ಚುವರಿಯಾಗಿ ತೆಗೆದುಕೊಂಡು ಈ ತರಬೇತಿ ಮಾಡಬಹುದಲ್ಲವೇ ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ. ತರಬೇತಿಗೆ ಉಪನ್ಯಾಸಕರನ್ನು ಒತ್ತಾಯಿಸಬಾರದು ಎಂದು 30 ಜಿಲ್ಲೆಯಿಂದಲೂ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ.

ಸ್ವ ಇಚ್ಛೆಯಿಂದ ತರಬೇತಿಗೆ ಹೋಗುವ ಉಪನ್ಯಾಸಕರಿಗೆ ನಾವು ಯಾವುದೇ ರೀತಿಯಲ್ಲೂ ಅಡ್ಡಿಪಡಿಸುವುದಿಲ್ಲ. ಆದರೆ, ಬರಲೇ ಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಅನೇಕ ಉಪನ್ಯಾಸಕರಿಗೆ ಅನಿವಾರ್ಯ ಕಾರಣಗಳಿಂದ ಬರಲು ಆಗುವುದಿಲ್ಲ. ವಿಶೇಷ ತರಗತಿಗೆ 500 ರೂ. ನೀಡುತ್ತಾರೆ ಎಂದು ಭಾನುವಾರವೂ ಕಾಲೇಜಿಗೆ ಹೋಗುವುದು ಕಷ್ಟ. ಈ ಕಾರ್ಯಕ್ರಮದಲ್ಲಿ ಸ್ವಲ್ಪ ತಿದ್ದುಪಡಿ ಮಾಡುವಂತೆ ಇಲಾಖೆಯ ನಿರ್ದೇಶಕರಲ್ಲಿ ಮನವಿ ಮಾಡಿದ್ದೇವೆ ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ಬದಲಾವಣೆ ಸಾಧ್ಯವಿಲ್ಲ: ಶಿಖಾ
ಈ ತರಬೇತಿಯನ್ನು ಬೇರೆ ದಿನ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಇಂಗ್ಲಿಷ್‌ ವ್ಯಾಕರಣ ಹಾಗೂ ಭಾಷಾ ಕೌಶಲ್ಯ ವೃದ್ಧಿಗೆ ಈ ತರಬೇತಿ ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಸಂದರ್ಶನದಲ್ಲಿ ಪಾಲ್ಗೊಳ್ಳಲು ಇದು ಪೂರಕವಾಗಲಿದೆ. ತಾಲೂಕು ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ತಜ್ಞರು ಸಿದ್ಧªಪಡಿಸಿದ ಪಠ್ಯಕ್ರಮವನ್ನು ಈಗಾಗಲೇ ನೀಡಿದ್ದೇವೆ. ಅದರ ಆಧಾರದಲ್ಲಿಯೇ ಪ್ರತಿ ಭಾನುವಾರ ತರಬೇತಿ ನಡೆಯಲಿದೆ. ಆ.6ರಂದು ಮೊದಲ ತರಗತಿ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ನಡೆಯಲಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ “ಉದಯವಾಣಿ’ಗೆ ತಿಳಿಸಿದರು.

Advertisement

ತರಬೇತಿಗೆ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪಿಯು ಕಾಲೇಜಿನ ಉಪನ್ಯಾಸಕರನ್ನು ಆಹ್ವಾನಿಸಿದ್ದೇವೆ. ವಿದ್ಯಾರ್ಥಿಗಳ ಹಾಜರಾತಿ ಆಧಾರದಲ್ಲಿ ಉಪನ್ಯಾಸಕರ ಆಯ್ಕೆ ನಡೆಯಲಿದೆ. 3 ಗಂಟೆಗಳ ತರಬೇತಿ ಪ್ರತಿ ಭಾನುವಾರ ನಡೆಯಲಿದ್ದು, ನಿವೃತ್ತ ಉಪನ್ಯಾಸಕರನ್ನು ಹಾಗೂ ಪ್ರೌಢಶಾಲೆಯ ಆಂಗ್ಲ ಭಾಷೆಯ ಮೇಲೆ ಉತ್ತಮ ಹಿಡಿತವಿರುವ ಶಿಕ್ಷಕರನ್ನು ಇದಕ್ಕೆ ನೇಮಿಸಿಕೊಳ್ಳಲು ಸೂಚಿಸಿದ್ದೇವೆ. ತರಬೇತಿಯಲ್ಲಿ ಯಾವುದೇ ರೀತಿಯ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next