Advertisement

ಉಪನ್ಯಾಸಕರ ವರ್ಗ ನಿಯಮ ಸಿದ್ಧ: ಶೇ. 12ರಷ್ಟು ಕಾಲೇಜು ಬೋಧಕರಿಗೆ ಅನುಕೂಲ

11:40 PM Oct 27, 2020 | mahesh |

ಬೆಂಗಳೂರು: ರಾಜ್ಯದ ಪದವಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬೋಧಕರಲ್ಲಿ ವಾರ್ಷಿಕ ಶೇ. 12ರಷ್ಟು ಮಂದಿಗೆ ವರ್ಗಾವಣೆ ಪಡೆಯಲು ಅನುಕೂಲವಾಗುವಂತೆ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಬೋಧಕರ ವರ್ಗಾವಣೆ ಕ್ರಮವನ್ನು ಇನ್ನಷ್ಟು ಸಡಿಲಗೊಳಿಸುವ ಉದ್ದೇಶದಿಂದ ರಾಜ್ಯ ಸರಕಾರ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕ ಸಿಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು- 2020 ಅನ್ನು ಹೊರಡಿಸಿದೆ.

Advertisement

ತಿದ್ದುಪಡಿ ನಿಯಮದಲ್ಲಿ, ತುರ್ತು ವರ್ಗಾವಣೆಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ನಾಲ್ಕು ವರ್ಷಗಳ ಕರ್ತವ್ಯ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಗಿದೆ. ಸೇವಾ ಅವಧಿಯಲ್ಲಿ ಈ ತುರ್ತು ವರ್ಗಾವಣೆಯನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಅಲ್ಲದೆ ನಿವೃತ್ತಿಗೆ ಎರಡು ವರ್ಷ ಬಾಕಿ ಇರುವವರಿಗೆ ವರ್ಗಾ ವಣೆಯಿಂದ ವಿನಾಯಿತಿ ನೀಡಲಾಗಿದೆ. ಈ ಹಿಂದಿನ ವರ್ಗಾವಣೆ ನಿಯಮದಲ್ಲಿ ವಲಯ ವಿಂಗಡಣೆ ಅಸಮರ್ಪಕವಾಗಿತ್ತು. ಬಿಬಿಎಂಪಿ ಮತ್ತು ಜಿಲ್ಲಾ ಕೇಂದ್ರ ಗಳಲ್ಲಿರುವ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳನ್ನು ಒಂದೇ ವಲಯದಲ್ಲಿ ಗುರುತಿಸಲಾಗಿತ್ತು. ಇದಕ್ಕೆ ಬೋಧಕ ವರ್ಗವೂ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲರನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾರ್ಗಸೂಚಿ ಅನ್ವಯ ವರ್ಗಾ ಯಿಸಬೇಕಾಗಿತ್ತು. ಬೋಧಕ ದಂಪತಿ (ಪತಿ-ಪತ್ನಿ ಪ್ರಕರಣ), ಸರಕಾರಿ, ಖಾಸಗಿ ಯೋಜನೆಗಳಲ್ಲಿ ಕರ್ತವ್ಯ ದಲ್ಲಿರುವವರು, ಎನ್‌ಸಿಸಿ ಅಧಿಕಾರಿಗಳು, ಸಂಶೋಧನ ಮಾರ್ಗದರ್ಶಕರು ಮತ್ತು 371(ಜೆ) ಪ್ರಕರಣಗಳಿಗೆ ವರ್ಗಾವಣೆಗೆ ಅವಕಾಶ ಇರಲಿಲ್ಲ.

ಹಿಂದಿನ ಕಾಯ್ದೆಯಲ್ಲಿದ್ದ ಅಡೆತಡೆ, ತೊಂದರೆಗಳನ್ನು ನಿವಾರಿಸಲು ಹಾಗೂ ಸಿಬಂದಿ ವರ್ಗಾವಣೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ನಿಯಂತ್ರಿಸುವ ಉದ್ದೇಶದಿಂದ ಹಳೆ ನಿಯಮಗಳನ್ನು ರದ್ದುಪಡಿಸಿ, ಹೊಸ ನಿಯಮ ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಏನೇನಿದೆ ನಿಯಮದಲ್ಲಿ
ಒಟ್ಟಾರೆ ಶೇ. 12ರಷ್ಟು ವರ್ಗಾವಣೆಯಲ್ಲಿ ಸಾರ್ವಜನಿಕ ಸೇವಾ ಹಿತಾಸಕ್ತಿ (ಶೈಕ್ಷಣಿಕ ಹಿತಾಸಕ್ತಿ)ಯಿಂದ ಶೇ. 6, ಬೋಧಕ ದಂಪತಿ ಪ್ರಕರಣಕ್ಕೆ ಶೇ. 3, ವಿಧವೆ, ವಿಧುರ ಹಾಗೂ ವಿಚ್ಛೇದನ ಪ್ರಕರಣಕ್ಕೆ ಶೇ. 1, ಅಂಗವಿಕಲರಿಗೆ ಶೇ. 1 ಹಾಗೂ ಗಂಭೀರ ಆರೋಗ್ಯ ಸಮಸ್ಯೆಯ ಪ್ರಕರಣಕ್ಕೆ ಶೇ. 1ರಷ್ಟು ವರ್ಗಾವಣೆ ಎಂದು ವರ್ಗೀಕರಿಸಲಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ವರ್ಗಾವಣೆ ಪ್ರಕ್ರಿಯೆಯನ್ನು ಮೇ ಮತ್ತು ಜೂನ್‌ ತಿಂಗಳಲ್ಲಿ ನಡೆಸಬೇಕು. ವಲಯವಾರು ವರ್ಗಾವಣೆ, ಸೇವಾ ಜ್ಯೇಷ್ಠತೆ ಸಹಿತವಾಗಿ ಎಲ್ಲ ಮಾಹಿತಿ ಒಳಗೊಂಡಿರುವ ನಿಯಮವನ್ನು ರೂಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next