Advertisement

ಅರೇಹಳ್ಳಿ ಪಟ್ಟಣದಲ್ಲಿ ಬೀಡು ಬಿಟ್ಟ ಕಾಡಾನೆಗಳು

06:08 PM Apr 14, 2022 | Team Udayavani |

ಅರೇಹಳ್ಳಿ/ಹಾಸನ: ಕಾಫಿ, ಬಾಳೆ ತೋಟಗಳಿಗೆ ದಾಳಿ ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಗಳ ಹಿಂಡು ಇತ್ತೀಚೆಗೆ ಜನ ವಸತಿ ಪ್ರದೇಶಗಳಿಗೆ ನಿರ್ಭಯವಾಗಿ ನುಗ್ಗುತ್ತಿವೆ. ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಕಾಣಿಸಿಕೊಂಡ ನಾಲ್ಕು ಆನೆಗಳ ಹಿಂಡು, ಸಂಜೆವರೆಗೂ ಪಟ್ಟಣದ ಹೊರ ವಲಯದಲ್ಲಿಯೇ ಅಡ್ಡಾಡುತ್ತಾ ಭೀತಿಯನ್ನುಂಟು ಮಾಡಿದವು.

Advertisement

ಮಂಗಳವಾರ ಸಂಜೆ ಅರೇಹಳ್ಳಿ ಸಮೀಪದ ಕಲ್ಗಂಡಿ ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ ಗಳ ಹಿಂಡು, ಮಧ್ಯರಾತ್ರಿ ಅರೇಹಳ್ಳಿ ಪಟ್ಟಣದತ್ತ ಬಂದಿವೆ. ಬುಧವಾರ ಬೆಳಗಿನ ಜಾವ ಹಳೆ ಮಸೀದಿಯ ಬಳಿ ಕಾಡಾನೆಗಳ ಶಬ್ಬ ಕೇಳಿ ಜನರು ಗಾಬರಿಯಾಗಿದ್ದರು. ಮುಂಜಾನೆ 4.30ರ ವೇಳೆಯಲ್ಲಿ ನಾಯಿಗಳು ಬೊಗಳಲಾರಂಭಿಸಿದವು. ಅದೇ ಸಮಯಕ್ಕೆ ಮುಸಲ್ಮಾನರು ಮಸೀದಿಗೆ ಜಮಾಜ್‌ ಮಾಡಲು ಹೋಗುತ್ತಿದ್ದಾಗ ಕಾಡಾನೆಗಳ ಹಿಂಡು ದೇವಸ್ಥಾನದ ರಸ್ತೆಯಲ್ಲಿ ಪೊಲೀಸ್‌ ಠಾಣೆ ಸಮೀಪ ರಾಜಾರೋಷವಾಗಿ ಸಂಚರಿಸುತ್ತಿದ್ದವು.

ಕಾಡಾನೆಗಳ ಚಲನವಲನ ಚಿತ್ರೀಕರಣ:
ಕಾಡಾನೆಗಳು ಊರೊಳಗೆ ಬಂದಿರುವ ವಿಷಯ ತಿಳಿದ ಜನರು, ಮನೆಯಿಂದ ಹೊರ ಬಂದು ಮೊಬೈಲ್‌ ಗಳಲ್ಲಿ ಕಾಡಾನೆಗಳ ಚಲನವಲನವನ್ನು ಚಿತ್ರೀಕರಿಸಲಾರಂಭಿಸಿ ದರು. ಜನರನ್ನು ಕಂಡ ಆನೆಗಳ ಹಿಂಡಿನ 2 ಆನೆಗಳು ಸಕಲೇಶಪುರದ ರಸ್ತೆ ಕಡೆಗೆ ಹೊರಟವು. ಮತ್ತೆರಡು ಆನೆಗಳು ದೇವಸ್ಥಾನ ಸಮೀಪ ಇರುವ ಪಿಂಟೋ ಎಂಬವರ ಕಾμ ತೋಟಕ್ಕೆ ನುಗ್ಗಿದವು .

ಅರೇಹಳ್ಳಿಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡ ಸುದ್ದಿ ತಿಳಿದು ಮಧ್ಯಾಹ್ನದ ವೇಳೆಗೆ ಅರೇಹಳ್ಳಿಗೆ ಬಂದ ಅರಣ್ಯ ಇಲಾಖೆಯ ಫಾರೆಸ್ಟರ್‌ ರಘು , ಗಾರ್ಡ್‌ ಗುರುರಾಜ್‌ ಮತ್ತು ಅರಣ್ಯ ಕಾವಲುಗಾರರು ಕಾಡಾನೆಗಳನ್ನು ಅರಣ್ಯದತ್ತ ಓಡಿಸಲು ಪ್ರಯತ್ನಿಸಿದರು. ಎರಡು ಆನೆಗಳು ಸಕಲೇಶಪುರದತ್ತ ಹೋದರೆ ಮತ್ತೆರೆಡು ಆನೆಗಳು ಪಿಂಟೋ ಅವರ ಕಾಫಿ ತೋಟದ ಪಕ್ಕದ ತೋಟದತ್ತ ಹೋಗಿವೆ. ಕಾಡಾನೆಗಳು ಪಟ್ಟಣದಿಂದ ತುಸು ದೂರ ಹೋದ ಮಾಹಿತಿ ಪಡೆದ ಅರೇಹಳ್ಳಿಯ ಜನರು ನಿಟ್ಟುಸಿರು ಬಿಟ್ಟರು. ಕಾಫಿ ತೋಟದಲ್ಲಿ ಆನೆಗಳು ಅಡ್ಡಾಡಿರುವುದರಿಂದ ನೂರಾರು ಕಾಫಿ ಗಿಡಗಳು ನಾಶವಾಗಿವೆ.

ತೋಟಕ್ಕೆ ಹೋಗದ ಜನರು: ಸಕಲೇಶಪುರ ತಾಲೂಕಿನಲ್ಲಿ ಸಾಮಾನ್ಯವಾಗಿದ್ದ ಕಾಡಾನೆಗಳ ಹಾವಳಿ ಈಗ ಬೇಲೂರು ತಾಲೂಕಿನ ಕಾಫಿ ತೋಟಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಕಾಫಿ ತೋಟಗಳ ಮಾಲೀಕರು, ಕಾರ್ಮಿಕರು ತೋಟದಲ್ಲಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಮತ್ತೆ ಪಟ್ಟಣದತ್ತ ಬರಬಹುದೆಂಬ ಭೀತಿ ಜನರನ್ನು ಕಾಡುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಅರಣ್ಯದತ್ತ ಓಡಿಸಬೇಕು ಎಂದು ಅರೇಹಳ್ಳಿಯ ಜನರು ಒತ್ತಾಯಿಸಿದ್ದಾರೆ.

Advertisement

ಅರಣ್ಯ ಇಲಾಖೆಗೆ ತಲೆ ನೋವು: ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನ ಕೆಲವು ಭಾಗಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಸಾಕಷ್ಟು ಬೆಳೆ ಹಾನಿ ಮಾಡುತ್ತಿರುವ ಕಾಡಾನೆಗಳು, ಕಲೆದೊಂದು ವರ್ಷದಲ್ಲಿ 7 ಜನರನ್ನು ಬಲಿ ತೆಗೆದುಕೊಂಡಿವೆ. ಸುಮಾರು 80 ಕಾಡಾನೆಗಳು ಪ್ರತ್ಯೇಕ ಹಿಂಡುಗಳಲ್ಲಿ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಸಂಚರಿಸುತ್ತಿವೆ. ಯಾವ ಭಾಗದಲ್ಲಿ ಕಾಡಾನೆಗಳನ್ನು ನಿಯಂತ್ರಿಸಿ, ಜನರ ಒತ್ತಡ ನಿವಾರಿಸಬೇಕೆಂಬುದು ಅರಣ್ಯ ಇಲಾಖೆಯವರಿಗೆ ತಲೆ ನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next