Advertisement

ಮೊಬೈಲ್‌ ಬಿಟ್ಟು ಪುಸ್ತಕದತ್ತ ಮುಖ ಮಾಡಿ

01:06 AM Jul 13, 2019 | Lakshmi GovindaRaj |

ಬೆಂಗಳೂರು: ಮೊಬೈಲ್‌ನಲ್ಲಿ ಮುಳುಗಿ ಹೋಗಿರುವ ಯುವ ಸಮುದಾಯ ಪುಸ್ತಕಗಳ ಓದಿನತ್ತ ಮುಖ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಅಭಿಪ್ರಾಯಪಟ್ಟರು.

Advertisement

ಕನ್ನಡ ಸಾಹಿತ್ಯ ಪರಿಷತ್ತು, ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡದಲ್ಲಿ ಅತ್ಯುತ್ತಮ ಕೃತಿಗಳಿದ್ದು, ಅವುಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಲೋಕವನ್ನು ಹಲವು ಸಾಹಿತಿಗಳು ಶ್ರೀಮಂತಗೊಳಿಸಿದ್ದಾರೆ. ಅತ್ಯುತ್ತಮ ಕಾವ್ಯಗಳನ್ನು ರಚನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದವರೆಗೂ ಹೆಸರು ವಾಸಿಯಾಗಿದ್ದಾರೆ. ಇಂತಹ ಶ್ರೀಮಂತ ಪರಂಪರೆಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಹೊರಬೇಕು ಎಂದು ನುಡಿದರು.

ಸಾಹಿತ್ಯ ಕೃಷಿ ಹೀಗೆ ಸಾಗಲಿ: ಪ್ರಶಸ್ತಿ ಮೊತ್ತಕ್ಕಿಂತಲೂ ಸನ್ಮಾನ ಶ್ರೇಷ್ಠವಾಗಿರುತ್ತದೆ.ಅದರಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳನ್ನು ಪಡೆಯಲು ಪ್ರತಿಭೆ ಇರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಕೂಡ ಅತ್ಯುತ್ತಮ ಕೃತಿಗಳನ್ನು ರಚಿಸಿರುವುದು ಸಂತಸ ಪಡುವ ವಿಚಾರವಾಗಿದ್ದು, ಮಹಿಳಾ ಮಣಿಯರ ಸಾಹಿತ್ಯದ ಕೃಷಿ ಹೀಗೆ ಸಾಗಲಿ ಎಂದು ಆಶಿಸಿದರು.

ಪುಸ್ತಕಕೊಂಡು ಓದುವ ಸಂಸ್ಕೃತಿ ಬೆಳೆಯಲಿ: ಕನ್ನಡ ಸಾಹಿತ್ಯ ಮತ್ತಷ್ಟು ಬೆಳೆಯಬೇಕಾದರೆ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಬೆಳೆಯಬೇಕು. ಆ ಹಿನ್ನೆಲೆಯಲ್ಲಿ ಯುವ ಸಮುದಾಯ ಸೇರಿದಂತೆ ಪ್ರತಿಯೊಬ್ಬರೂ ಪುಸ್ತಕಗಳನ್ನು ಕೊಂಡು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ಯಾವುದೇ ಶಿಫಾರಸುಗಳಿಗೆ ಮಣಿಯದೆ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿಭಾವಂತರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದೆ ಎಂದು ನುಡಿದರು.

12ನೇ ಶತಮಾನದ ವೇಳೆ ಜಗತ್ತಿನ ಯಾವ ಭಾಷೆಯಲ್ಲೂ ಆಗದ ಸಾಹಿತ್ಯ ಕೃಷಿ, ಕನ್ನಡದಲ್ಲಿ ನಡೆಯಿತು. ವಚನ ಚಳವಳಿ, ದಾಸ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಪರಂಪರೆ ಉತ್ತುಂಗ ತಲುಪಿತ್ತು. ಬಸವಣ್ಣ, ಅಕ್ಕಮಹಾದೇವಿ, ಕುವೆಂಪು ಅವರ ಸಂದೇಶಗಳು ಇಂದಿಗೂ ವಿಶ್ವಮಾನ್ಯ ಎಂದು ಬಣ್ಣಿಸಿದರು.

ಇದೇ ವೇಳೆ 46 ಬರಹಗಾರರಿಗೆ ವಿವಿಧ ಗ್ರಂಥ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next