Advertisement

ಹಿಂಬಾಲಕರ ಬಿಡಿ, ನಿಷ್ಠಾವಂತರಿಗೆ ಅಧಿಕಾರ ನೀಡಿ

07:28 AM Jun 27, 2019 | Team Udayavani |

ಬೆಂಗಳೂರು: ಚುನಾವಣೆ ಸೋಲಿನ ತಪ್ಪು ಹುಡುಕುವ ಬದಲು ತಳ ಮಟ್ಟದಿಂದ ಪಕ್ಷ ಕಟ್ಟಲು ಸಕ್ರಿಯರಾಗಿ ಕೆಲಸ ಮಾಡುವಂತೆ ಪಕ್ಷದ ಹಿರಿಯ ನಾಯಕರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೂಚನೆ ನೀಡಿದ್ದಾರೆ.

Advertisement

ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುವ ಕುರಿತಂತೆ ಎಲ್ಲರ ಅಭಿಪ್ರಾಯ ಪಡೆದಿರುವ ಅವರು, ಚುನಾವಣೆಯ ಸೋಲಿನ ಬಗ್ಗೆ ಹೆಚ್ಚು ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಪಕ್ಷವನ್ನು ಬೂತ್‌ ಹಾಗೂ ಪಂಚಾಯತಿ ಮಟ್ಟದಿಂದ ಸಂಘಟಿಸಲು ಕಾರ್ಯಕರ್ತರನ್ನು ಸಿದ್ದಗೊಳಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಪದಾಧಿಕಾರಿಗಳಾಗಿ ಜಂಬೋ ಪಟ್ಟಿ ಸಿದ್ದಪಡಿಸದೇ ಪಕ್ಷಕ್ಕಾಗಿ ಕೆಲಸ ಮಾಡುವ ನಿಷ್ಠಾವಂತರ ಸಣ್ಣ ಪಟ್ಟಿಯನ್ನು ಹದಿನೈದು ದಿನದಲ್ಲಿ ಸಿದ್ದಪಡಿಸಿ ಅನುಮೋದನೆ ಪಡೆಯಬೇಕು. ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ನಾಯಕರು ತಮ್ಮ ಹಿಂಬಾಲಕರಿಗೆ ಅಧಿಕಾರ ಕೊಡಿಸುವ ಬದಲು, ಪಕ್ಷ ಸಂಘಟಿಸುವ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಮಾಡಿ ಕೊಡಬೇಕು.

ಹಿಂಬಾಲಕರಿಗೆ ಅಧಿಕಾರ ನೀಡುವ ಪ್ರವೃತ್ತಿಯಿಂದಲೇ ಕಾಂಗ್ರೆಸ್‌ ಈ ಸ್ಥಿತಿಗೆ ತಲುಪಿದೆ. ಯಾವುದೇ ವ್ಯಕ್ತಿಯನ್ನು ಶಿಫಾರಸು ಮಾಡುವಾಗ ನಾಯಕರು ಅವರ ಪೂರ್ವಾಪರ ಹಾಗೂ ಪಕ್ಷದಲ್ಲಿನ ಸೇವೆಯನ್ನು ಗಮನಿಸಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಪ್ರವಾಸ: ಪಕ್ಷದ ಪದಾಧಿಕಾರಿಗಳ ನೇಮಕದ ನಂತರ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ಪದಾಧಿಕಾರಿಗಳ ಸಮಿತಿಗಳನ್ನೂ ವಿಸರ್ಜಿಸಿ ಹೊಸ ಸಮಿತಿಗಳನ್ನು ರಚಿಸಿ, ಪದಾಧಿಕಾರಿಗಳ ಸಮಿತಿಯಲ್ಲಿ ಕಡಿಮೆ ಸದಸ್ಯರಿರುವಂತೆ ನೋಡಿಕೊಳ್ಳಬೇಕು. ಬೂತ್‌ ಮಟ್ಟದಲ್ಲಿಯೂ ನಾಲ್ಕರಿಂದ ಐದು ಜನ ಸದಸ್ಯರಿರುವ ಸಮಿತಿ ರಚಿಸಬೇಕು. ಪದಾಧಿಕಾರಿಗಳ ಸಮಿತಿ ರಚನೆಯಾದ ನಂತರ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

ಮಾರ್ಗದರ್ಶಕ ಮಂಡಳಿ: ಕಾಂಗ್ರೆಸ್‌ ಪಕ್ಷದಲ್ಲಿನ ನಾಯಕರ ಗುಂಪುಗಾರಿಕೆಯನ್ನು ತಡೆಗಟ್ಟುವುದು ಹಾಗೂ ಪಕ್ಷದಲ್ಲಿ ಎಲ್ಲರನ್ನೂ ಸಕ್ರೀಯಗೊಳಿಸಲು ಹತ್ತು ಜನರ ಹಿರಿಯ ನಾಯಕರ ಸಮಿತಿ ರಚಿಸಲು ವೇಣುಗೋಪಾಲ್‌ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಮಿತಿ ಕೆಪಿಸಿಸಿಗೆ ಮಾರ್ಗದರ್ಶಕ ಮಂಡಳಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಮಾರ್ಗದರ್ಶಕ ಮಂಡಳಿಯ ಸಲಹೆ ಪಡೆದು ತೀರ್ಮಾನ ಕೈಗೊಳ್ಳಬೇಕು.

ಪಕ್ಷದಲ್ಲಿನ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಜುಲೈನಲ್ಲಿ ರಾಜ್ಯ ನಾಯಕರ ಮೂರು ದಿನಗಳ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ ನೀಡಿ, ಎಷ್ಟೇ ದೊಡ್ಡ ನಾಯಕರಾದರೂ ಪಕ್ಷದ ಶಿಸ್ತು ಪಾಲಿಸಬೇಕು.

ಪಕ್ಷ ವಿರೋಧಿ ಚಟುವಟಿಕೆ ಹಾಗೂ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಅಂತಹ ನಾಯಕರಿಂದ ಪಕ್ಷಕ್ಕೆ ಯಾವುದೇ ಅನುಕೂಲ ಇಲ್ಲ ಎಂದು ವೇಣುಗೋಪಾಲ್‌ ಸಭೆಯಲ್ಲಿ ತಿಳಿಸಿದ್ದಾರೆ. ಮುಂಬರುವ ಗಾಂಧಿಜಯಂತಿ ದಿನ ಗ್ರಾಮ ಪಂಚಾಯತಿಗಳಲ್ಲಿ ಮನೆಗಳಿಗೆ ತೆರಳಿ ಜನರ ಕಷ್ಟಗಳನ್ನು ಕೇಳುವ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರಲು ಯೋಜನೆ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದೇ ವೇಳೆ, ಪ್ರಸಕ್ತ ಮೈತ್ರಿ ಸರ್ಕಾರದಲ್ಲಿನ ಗೊಂದಲ ಹಾಗೂ ಮಧ್ಯಂತರ ಚುನಾವಣೆಯ ಕುರಿತು ಚರ್ಚಿಸದಂತೆ ವೇಣುಗೋಪಾಲ್‌ ನಾಯಕರಿಗೆ ಸೂಚನೆ ನೀಡಿದರು. ಜೆಡಿಎಸ್‌ಗೆ ಐದು ವರ್ಷ ಅಧಿಕಾರ ನಡೆಸಲು ಅವಕಾಶ ನೀಡಿದ್ದೇವೆ. ಹೀಗಾಗಿ ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡದೇ, ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪದಾಧಿಕಾರಿಗಳ ವಿರೋಧ: ಪಕ್ಷದ ಹೈಕಮಾಂಡ್‌, ಕೆಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜನೆ ಮಾಡಿದೆ. ಆದರೂ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಮ್ಮ ಆಪ್ತರನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ ಎಂದು ಕೆಲವು ಪದಾಧಿಕಾರಿಗಳು ಕೆ.ಸಿ.ವೇಣುಗೋಪಾಲ್‌ಗೆ ದೂರು ನೀಡಿದ್ದಾರೆ. ಪಕ್ಷದಲ್ಲಿ ಎಲ್ಲರಿಗೂ ಒಂದೇ ನ್ಯಾಯ, ತಮಗೆ ಬೇಕಾದವರನ್ನು ಉಳಿಸಿಕೊಂಡರೆ, ಪಕ್ಷದಲ್ಲಿ ಗುಂಪುಗಾರಿಕೆ ಮಾಡಿದಂತಾಗುತ್ತದೆ ಎಂದು ವೇಣುಗೋಪಾಲ್‌ ಎದುರು ಕೆಲವು ಪದಾಧಿಕಾರಿಗಳು ದೂರಿದ್ದಾರೆ ಎಂದು ತಿಳಿದು ಬಂದಿದೆ.

ಪರಾಜಿತ ಅಭ್ಯರ್ಥಿಗಳು ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ. ಮೂರು ವಾರಗಳಲ್ಲಿ ಪಿಸಿಸಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಮೆರಿಟ್‌ ಆಧಾರದ ಮೇಲೆ ಪದಾಧಿಕಾರಿಗಳ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಡಿಸಿಸಿ ಹಾಗೂ ಬ್ಲಾಕ್‌ ಸಮಿತಿಗಳನ್ನು ವಿಸರ್ಜಿಸಿ 3 ತಿಂಗಳಲ್ಲಿ ಮರು ನೇಮಕ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು. ಪಂಚಾಯತಿ ಮಟ್ಟದಲ್ಲಿ ಪಕ್ಷದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
-ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಜೆಡಿಎಸ್‌ನೊಂದಿಗಿನ ಮೈತ್ರಿ ಕಾರಣವಲ್ಲ. ಬಿಜೆಪಿಯವರ ಅಪಪ್ರಚಾರ, ಹುಸಿ ರಾಷ್ಟ್ರೀಯತೆ ಕಾರಣ. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ.
-ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next