Advertisement

ಅಸ್ಥಿರ ಯತ್ನ ಕೈ ಬಿಡಿ: ಐವನ್‌

02:36 AM Jun 05, 2019 | Team Udayavani |

ಮಂಗಳೂರು: ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಇನ್ನಾದರೂ ಕೈಬಿಡಿ ಎಂದು ವಿಧಾನ ಪರಿಷತ್‌ ಸದಸ್ಯ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಹೇಳಿದ್ದಾರೆ.

Advertisement

ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸಿಗೆ ದೊಡ್ಡ ಮಟ್ಟದ ಗೆಲುವು ದೊರೆತಿದೆ. ಲೋಕಸಭಾ ಚುನಾವಣೆಯಲ್ಲಿ ಧಾರ್ಮಿಕತೆ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಗೆಲುವು ಸಾಧಿಸಿದ ಬಿಜೆಪಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಮೈತ್ರಿ ಸರಕಾರವನ್ನು ಒಪ್ಪಿಕೊಂಡಿದ್ದಾರೆ. ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಕೈಬಿಟ್ಟು, ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವಂತೆ ಹೇಳಿದರು.

ಲೋಕಸಭಾ ಚುನಾವಣೆಯಲ್ಲೂ ದೇಶದೆಲ್ಲೆಡೆ ಒಟ್ಟಾರೆಯಾಗಿ 21 ಕೋಟಿ ಜನತೆ ಬಿಜೆಪಿ ಪರ ಮತ ಚಲಾಯಿಸಿದ್ದರೆ, ಕಾಂಗ್ರೆಸ್‌ ಪರ 12.5 ಕೋಟಿ ಜನ ಮತ ಚಲಾಯಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ. 46ರಷ್ಟು ಮತಗಳನ್ನು ಕಾಂಗ್ರೆಸ್‌ ಪಡೆದಿದೆ ಎಂದರು.

ಬರ ನಿರ್ವಹಣೆಗೆ 750 ಕೋಟಿ ರೂ.

ರಾಜ್ಯದಲ್ಲಿ ತೀವ್ರವಾಗಿರುವ ಬರ ಪರಿಸ್ಥಿತಿ, ನೀರಿನ ಅಭಾವದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 750 ಕೋಟಿ ರೂ. ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಕಂದಾಯ ಇಲಾಖೆ ಜವಾಬ್ದಾರಿ ಹೊಂದಿರುವ ತಾನು ಜೂ. 10ರ ಅನಂತರ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಈ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳುತ್ತೇನೆ ಎಂದರು.

Advertisement

ಬರ ಇದ್ದರೂ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ. ಮೋಡ ಬಿತ್ತನೆಗಾಗಿ 4,500 ಕೋಟಿ ರೂ. ನೀಡುವಂತೆ ಕೇಂದ್ರವನ್ನು ಕೋರಲಾಗಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿ.ಎಸ್‌. ಯಡಿಯೂರಪ್ಪನವರು ಈ ಮೊತ್ತವನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಇವಿಎಂ ಅನುಮಾನ ನಿವಾರಿಸಿ

ಇವಿಎಂ ಕುರಿತಂತೆ ಜನತೆ ಯಲ್ಲಿರುವ ಸಂಶಯವನ್ನು ನಿವಾರಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಇವಿಎಂನ್ನು ಕೈಬಿಟ್ಟು ಹಿಂದಿನಂತೆ ಮತಪತ್ರಗಳಲ್ಲಿ ಮತ ಚಲಾಯಿಸುವ ಪದ್ಧತಿಯನ್ನು ತರಬೇಕೆಂದು ಆಗ್ರಹಿಸಿದರು.

ಅರಿವು ಯೋಜನೆಯಡಿ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದಿಂದ ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ನೀಡಲಾಗುವುದು. ಜಿಲ್ಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 4,080 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ಜೂ. 11ರಂದು ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಅದಾಲತ್‌ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಸರಕಾರ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಎಲ್ಕೆಜಿ, ಯುಕೆಜಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಪ್ರವೇಶವನ್ನು ಸೀಮಿತಗೊಳಿಸುವುದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next