ಮೈಸೂರು: ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ. ಭಾರತದ ಮುಸ್ಲಿಮರನ್ನು ಮೆಕ್ಕಾ ಮದೀನಾದಿಂದ ಕರೆತಂದಿಲ್ಲ. ಮುಸ್ಲಿಮರಲ್ಲೂ ನಮ್ಮ ಡಿಎನ್ಎ ಇರುವುದು, ಅವರಲ್ಲೂ ನಮ್ಮದೇ ರಕ್ತ ಹರಿಯುತ್ತಿದೆ. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಬಳಿಗೆ ಬುಲ್ಡೋಜರ್ ಬರಲಿದೆ. ಉತ್ತರ ಪ್ರದೇಶದಲ್ಲಿ ಇರುವಂತೆ ಇಲ್ಲಿಯೂ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಎಂದೂ ಕೂಡ ಕಲ್ಲು ತೂರಾಟ ನಡೆಸಿಲ್ಲ. ಆದರೆ ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ ನಡೆಸಲಾಗಿದೆ. ಈ ವಿಚಾರದಲ್ಲಿ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು ಎಂದರು.
ಕಲ್ಲು ಹೊಡೆಯುವುದು ಮುಸ್ಲಿಮರ ಸಂಸ್ಕೃತಿಯಾಗಿದೆ. ಕ್ರಿಶ್ಚಿಯನ್, ಪಾರ್ಸಿಗಳು ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರುವುದಿಲ್ಲ. ಮುಸ್ಲಿಮರು ಮಾತ್ರ ಅನ್ಯ ಧರ್ಮೀಯರ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡಿದ್ದರಿಂದ ಸಮಸ್ಯೆ ಆರಂಭವಾಯಿತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಯಾವ ಬೆಳೆಯಿಂದ ಶ್ರೀಮಂತಿಕೆ?: ಅದಾನಿ, ಅಂಬಾನಿ ಸಂಪತ್ತು ಹೆಚ್ಚಳದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ ಸಿಂಹ, ಸಿದ್ದರಾಮಯ್ಯವರು ಯಾವ ಜಮೀನಿನಲ್ಲಿ ಬೆಳೆ ಬೆಳೆದು ಶ್ರೀಮಂತರಾಗಿದ್ದಾರೆ. ಯಾವ ಆಲೂಗೆಡ್ಡೆ, ಜೋಳ ಬೆಳೆದು ಹಣ ಮಾಡಿದರು? ನಿಮ್ಮ ಜೊತೆ ಇರುವ ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಡಿ.ಕೆ ಶಿವಕುಮಾರ್ 40 ವರ್ಷದ ಹಿಂದೆ ಏನಾಗಿದ್ದರು ಹೇಳಿ. ಇವತ್ತು ಎಷ್ಟು ಶ್ರಿಮಂತರಾಗಿದ್ದಾರೆ. ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದರು.
ಇದನ್ನೂ ಓದಿ:ಉತ್ತರಾಖಂಡ್ ಸಿಎಂ ಪುಷ್ಕರ್ ಸ್ಪರ್ಧೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೈಲಾಶ್ ಚಂದ್ರ
ಅದಾನಿ- ಅಂಬಾನಿಯನ್ನು ಹುಟ್ಟಿಸಿದ್ದು ಮೋದಿಯೇ? ಮೋದಿ ಬರುವ ಮುಂಚೆ ಅವರು ಶ್ರೀಮಂತರಾಗಿರಲಿಲ್ಲವೇ? ಮಾತೆತಿದ್ದರೆ ಅದಾನಿ- ಅಂಬಾನಿ ಎನ್ನುತ್ತಾರೆ. ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ? ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆ ಹೆಚ್ಚಾಗುತ್ತದೆ. ಅದಕ್ಕೆ ಮೋದಿ ಕಾರಣ ಎಂದರೆ ಏನು ಅರ್ಥ. ದೇಶಕ್ಕೆ ಒಬ್ಬರೇ ಮೋದಿ. ಸ್ವಕ್ಷೇತ್ರದಲ್ಲಿ ಗೆಲ್ಲಲಾಗದವರ ಜೊತೆ ಚರ್ಚೆ ಮಾಡಬೇಕೇ ಎಂದು ಪ್ರತಾಪ ಸಿಂಹ ಪ್ರಶ್ನಿಸಿದರು.