Advertisement

ಧರ್ಮದ ಧ್ವಜ ಬಿಟ್ಟು ಜನರಿಗೆ ಕಾಯಕದ ಧ್ವಜ ಕೊಡಿ

09:03 PM Nov 26, 2019 | Lakshmi GovindaRaj |

ಮೈಸೂರು: ಮಾನವನಿಗೆ ಉಡಲು ಬಟ್ಟೆ, ತಿನ್ನಲು ಆಹಾರ, ಬದುಕಲು ಸೂರು, ಕೈಗೆ ಉದ್ಯೋಗ, ಆರೋಗ್ಯಕ್ಕೆ ಔಷಧ ಕೊಡಬೇಕು. ಬದಲಿಗೆ ರಾಜಕಾರಣಿಗಳು ಜಾತಿ-ಜಾತಿ, ಧರ್ಮ-ಧರ್ಮದ ನಡುವೆ ತಿಕ್ಕಾಟ-ಹೊಡೆದಾಟ ತಂದಿಡುತ್ತಿದ್ದಾರೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಲಾ ಗೈಡ್‌ ಕನ್ನಡ ಕಾನೂನು ಮಾಸಪತ್ರಿಕೆಯ ಕ್ಯಾಲೆಂಡರ್‌-ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಆತ್ಮ ವಂಚನೆ ಮಾಡಿಕೊಳ್ಳಬಾರದು: ನಾವು ಪ್ರಾಮಾಣಿಕವಾಗಿ ಸತ್ಯವನ್ನು ಹೇಳಬೇಕು, ಹೊರತು ಆತ್ಮ ವಂಚನೆ ಮಾಡಿಕೊಳ್ಳಬಾರದು. ಸತ್ಯ ಹೇಳುವ ಕಾರಣಕ್ಕಾಗಿ ನನ್ನನ್ನು ಕೆಲವರು ಟಾರ್ಗೆಟ್‌ ಮಾಡುತ್ತಾರೆ. ನಾನು ಮಠ ಬಿಟ್ಟಾಗ ವಾಪಸ್‌ ಬರುತ್ತೇನೋ-ಇಲ್ಲವೋ ಎಂದು ಹೇಳಿ ಬರುತ್ತೇನೆ ಎಂದರು.

ಸ್ವಾಮೀಜಿ ಅಸಮಾಧಾನ: ಧರ್ಮ ನಿಂದನೆ, ಅಶಾಂತಿಯ ಕಾಲದಲ್ಲಿ ನಾವಿಂದು ಸಿಕ್ಕಿ ನರಳುತ್ತಿದ್ದೇವೆ. ಜನರಿಗೆ ಕಾಯಕ ಧ್ವಜದ ಬದಲು ಧರ್ಮದ ಧ್ವಜಗಳನ್ನು ಕೊಟ್ಟು ಕೂರಿಸುತ್ತಿದ್ದೇವೆ. ಅಂದು ಬಸವಣ್ಣ ಕಾಯಕದ ಮೂಲಕ ಜಾತಿ ವ್ಯವಸ್ಥೆ ಧಿಕ್ಕರಿಸಿ ಸಮ-ಸಮಾಜ ನಿರ್ಮಾಣಕ್ಕೆ ಯತ್ನಿಸಿದ್ದರು. ಆದರೆ, ಇಂದು ಕುಟುಂಬ ವ್ಯವಸ್ಥೆ ಹೋಗಿ ಸಾವಿರಾರು ವೃದ್ಧಾಶ್ರಮ ತಲೆ ಎತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮ ಹೇರಲ್ಪಡುವುದಲ್ಲ, ಜನರಿಗೆ ತಿಳಿಸಲ್ಪಡುವುದು. ನಾವು ಯಾವುದೋ ಒಂದು ರೀತಿ ಕೈಗೊಂಬೆಗಳಾಗಿದ್ದೇವೆ. ಮತೀಯ, ಜಾತೀವಾದ, ಧರ್ಮ ವಾದದಕಡೆಗೆ ನೋಡುತ್ತಾ ಭವಿಷ್ಯಕ್ಕೆ ಕೈಯನ್ನು ಕೊಟ್ಟು ಕೈಕಟ್ಟಿ ನಿಂತಿದ್ದೇವೆ ಎಂದು ಹೇಳಿದರು.

ಸಂವಿಧಾನವೇ ದೊಡ್ಡ ಧರ್ಮಗ್ರಂಥ: ಸಾವಿರಾರು ವರ್ಷಗಳ ಇತಿಹಾಸ,ಪರಂಪರೆ, ಸಾಧನೆಯ ಬೆಳಕು ಹೊಂದಿರುವ ಈ ದೇಶದಲ್ಲಿ ಕೇವಲ ಐದು,ಹತ್ತು ವರ್ಷದ ಆಡಳಿತಕ್ಕಾಗಿ ಧರ್ಮವನ್ನು ಹಾಳು ಮಾಡಬಾರದು. ಯುವಕರಿಗೆ ಮತೀಯ ಔಷಧ ನೀಡಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ನಮಗೆ ಗೊತ್ತಿಲ್ಲದಂತೆ ಅದರೊಳಗೆ ಸಿಲುಕಿ ಮಾಯವಾಗಿ ಬಿಟ್ಟಿದ್ದೇವೆ.

Advertisement

ರಾಜಕಾರಣದಲ್ಲಿ ವ್ಯಕ್ತಿ ನಿಷ್ಠೆಯ ಪರಾಕಾಷ್ಠೆ ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಂಡಿದೆ.ಇದನ್ನು ಹೋಗಲಾಡಿಸುವ ಕೆಲಸ ಆಗಬೇಕಿದೆ ಎಂದರು. ದೇಶ ಉಳಿದರೆ ಮಾತ್ರ ಧರ್ಮ ಉಳಿಯಲಿದೆ. ನಮಗೆ ಸಂವಿಧಾನವೇ ದೊಡ್ಡ ಧರ್ಮಗ್ರಂಥವಾಗಿದೆ. ಹಾಗಾಗಿ,ನಾವು ನಮ್ಮ ಯುವ ಜನರ ಕೈಗೆ ಧರ್ಮ ಧ್ವಜದ ಬದಲು ಕಾಯಕ ಧ್ವಜ ಕೊಡಬೇಕಾಗಿದೆ ಎಂದು ಹೇಳಿದರು.

ಕಕ್ಷಿದಾರರಿಗೆ ನ್ಯಾಯ ಒದಗಿಸಿ: ಮಾಜಿ ಸಚಿವ ಎ.ಮಂಜು ಮಾತನಾಡಿ, ಸಮಾಜದಲ್ಲಿ ಇಂದಿಗೂ ವಕೀಲರ ಬಗ್ಗೆ ಅಪಾರ ನಂಬಿಕೆ-ಗೌರವವಿದ್ದು, ನ್ಯಾಯ ಕೇಳಿಬರುವ ಕಕ್ಷಿಗಾರರಿಗೆ ನ್ಯಾಯ ಒದಗಿಸುವುದು ವಕೀಲರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು. ಕಕ್ಷಿಗಾರರು ವಕೀಲರ ಮೇಲೆ ನಂಬಿಕೆ ಇಟ್ಟು ಬರುತ್ತಾರೆ. ಅಂಥವರನ್ನು ಅಲೆಸದೆ ಪ್ರಾಮಾಣಿಕವಾಗಿ ಸಲಹೆ ನೀಡಬೇಕು. ಸುಮ್ಮನೆ ಅಲೆಸಿ ಕಾಲಹರಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಸಿ.ಜಿ.ಹುನಗುಂದ ಮಾತನಾಡಿ, ವೈದ್ಯರು ಇಂದು ಸೆತೋಸ್ಕೋಪ್‌ ಹಿಡಿಯೋದನ್ನು ಬಿಟ್ಟಿದ್ದಾರೆ. ಕಂಪ್ಯೂಟರ್‌ ನೋಡಿ ಸಲಹೆ ಕೊಟ್ಟು ಕಳುಹಿಸುತ್ತಾರೆ.ಆದರೆ, ವಕೀಲರು ಡೈರಿ,ಕ್ಯಾಲೆಂಡರ್‌ ನೋಡದೆ ಇರಲು ಸಾಧ್ಯವಾಗಲ್ಲ ಎಂದರು. ಲಾಗೈಡ್‌ನ‌ ಸಂಪಾದಕ ಎಚ್‌.ಎನ್‌.ವೆಂಕಟೇಶ್‌, ಹಿರಿಯ ವಕೀಲ ಎಂ.ಡಿ.ಹರೀಶ್‌ಕುಮಾರ್‌ ಹೆಗ್ಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next