ಹೊನ್ನಾಳಿ: ತಾಲೂಕಿನ ಬಿದರಗಡ್ಡೆ ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಒದಗಿಸಬೇಕೆಂದು ಒತ್ತಾಯಿಸಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದಿಂದ 6 ಕಿ.ಮೀ. ದೂರವಿರುವ ಬಿದರಗಡ್ಡೆ ಗ್ರಾಮಕ್ಕೆ ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಸಂಚಾರವಿಲ್ಲದೆ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರವಾದ ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಸ್‌ಡಿಪೋ ಸ್ಥಾಪನೆಯಾದ ಮೇಲೆ ಬಸ್ ಗಳನ್ನು ಗ್ರಾಮಕ್ಕೆ ಬಿಡಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. ಬಸ್‌ಡಿಪೋ ಸ್ಥಾಪನೆಗೊಂಡು ಮೂರು ವರ್ಷ ಕಳೆದರೂ ಬಸ್ ಸಂಚಾರದ ವ್ಯವಸ್ಥೆ ಮಾಡಲಿಲ್ಲ ಎಂದು ದೂರಿದರು.
ಕಳೆದ 2 ತಿಂಗಳ ಹಿಂದೆ ಸಾರಿಗೆ ನಿಗಮದ ಅಧ್ಯಕ್ಷರು ವಿವಿಧ ಕಾಮಗಾರಿಗಳು ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಅದರಲ್ಲೂ ಬಿದರಗಡ್ಡೆ ಗ್ರಾಮಕ್ಕೆ ಬಸ್ ಸಂಚಾರ ನೀಡಲಾಗುವುದು ಎಂದು ಹೇಳಿದ್ದರು. ಆದರೆ, ಇದುವರೆಗೂ ಗ್ರಾಮಕ್ಕೆ ಬಸ್‌ಗಳ ಸಂಚಾರ ಆರಂಭವಾಗಲಿಲ್ಲ ಎಂದು ಹೇಳಿದರು.
ಬಸ್ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಬಸ್‌ಗಳಿಗೆ ತಡೆಯೊಡ್ಡಿದ ಕಾರಣ ಸಹಾಯಕ ನಿಯಂತ್ರಣಾಧಿಕಾರಿ ಮಂಜಪ್ಪ ಸ್ಥಳಕ್ಕೆ ಆಗಮಿಸಿ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾಮದ ಮುಖಂಡರಾದ ಚನ್ನೇಶ್, ನಾಗರಾಜಪ್ಪ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.