Advertisement

ಇನ್ನಷ್ಟು ಹಾನಿಗೂ ಮುನ್ನ ಅಗ್ನಿಪಥ್‌ ಕೈ ಬಿಡಿ

10:42 AM Jun 19, 2022 | Team Udayavani |

ಕಲಬುರಗಿ: ರಕ್ಷಣಾ ವಲಯದಲ್ಲಿ ಗುತ್ತಿಗೆ ಪದ್ಧತಿ ಮತ್ತು ದಿನಗೂಲಿ ಆಧಾರದಲ್ಲಿ ಉದ್ಯೋಗ ನೀಡಲು ಹೊರಟಿರುವ ಕೇಂದ್ರ ಸರಕಾರದ ನಿರ್ಧಾರ ತಪ್ಪು. ಕೇವಲ ನಾಲ್ಕೇ ವರ್ಷಕ್ಕೆ ಮನೆಗೆ ಹೋಗಿ ಅಂದ್ರೆ ಹೇಗಾಗುತ್ತೆ?. ಇದನ್ನು ಪ್ರತಿಭಟಿಸಿ ರವಿವಾರ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಂಗ್ರೆಸ್‌ ಸತ್ಯಾಗ್ರಹ ಮಾಡಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇನೆ ಭರ್ತಿ ಆಗುವ ಯುವಕರು ಸರ್ವಸ್ವ ತ್ಯಾಗ ಮಾಡಲು ಸಿದ್ಧತೆ ಮಾಡಿಕೊಂಡು ಬಂದಿರುತ್ತಾರೆ. ಅವರಿಗೆ ದೇಶ ಸೇವೆಯ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಏಕಾಏಕಿಯಾಗಿ ಇಂತಹ ನಿರ್ಧಾರ ಪ್ರಕಟಿಸುವ ಮುನ್ನ ಜನತೆಯ ಅಭಿಪ್ರಾಯ ಸಂಗ್ರಹವೂ ಮುಖ್ಯವಾಗುತ್ತದೆ ಎಂದರು.

ಯುವ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಕೊಟ್ಟು ನಾಲ್ಕು ವರ್ಷಗಳಲ್ಲಿ ಅವರನ್ನು ನಿವೃತ್ತಿಗೊಳಿಸಿದರೆ ಯಾವ ಸೈನಿಕ ಕೂಡ ವೆಲ್‌ ಟ್ರೈನ್ಡ್‌ ಆಗಿ ಹೊರ ಬರೋದಿಲ್ಲ. ಅದೂ ಅಲ್ಲದೇ ಅವರನ್ನು ಗುತ್ತಿಗೆ ಕಾರ್ಮಿಕರ ರೀತಿಯಲ್ಲಿ ನೋಡುವುದು ಸರಕಾರಕ್ಕೆ ಶೋಭೆ ತರುವುದಲ್ಲ. ರಕ್ಷಣಾ ವಿಷಯವನ್ನು ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಎಷ್ಟು ಲಘುವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಇಂತಹ ಅವೈಜ್ಞಾನಿಕ ನಿರ್ಧಾರಗಳು ಸಾಕ್ಷಿ ಎಂದರು.

ದೇಶ ಹಿಂಸೆಗೆ ತಿರುಗುತ್ತಿದೆ. ಇನ್ನಷ್ಟು ಅನಾಹುತ ಆಗುವ ಮುನ್ನವೇ ಸರಕಾರ ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕು. ಈ ವಿಷಯದಲ್ಲಿ ದೇಶದ ಜನರ ಜತೆಗೂ ರಾಜಕೀಯ ಮಾಡುವುದನ್ನು ಬಿಜೆಪಿ ನಿಲ್ಲಿಸಬೇಕು. ದೇಶಾಭಿಮಾನ, ತ್ಯಾಗ, ದೇಶ ಸೇವೆಯ ಮಾತನಾಡುವಂತಹ ಜನರಿಂದಲೇ ಇಂತಹ ನಿರ್ಧಾರಗಳು ಹೊರ ಬೀಳುತ್ತಿರುವುದು ಅಚ್ಛೆ ದಿನಗಳ ಮಾದರಿ ಎಂದರು.

ಕೇಂದ್ರ ಸರಕಾರ ಕೂಡಲೇ “ಅಗ್ನಿಪಥ್‌’ ಯೋಜನೆ ಕೈಬಿಡಬೇಕು. ಈಗಾಗಲೇ ಕೃಷಿ ಕಾಯಿದೆಗಳನ್ನು ಕೈ ಬಿಟ್ಟಿಲ್ಲವೇ? ಅದರಂತೆ ಇದನ್ನೂ ಕೈಬಿಡಬೇಕು. ದೇಶದಲ್ಲಿ ಇನ್ನಷ್ಟು ಹಾನಿ ಸಂಭವಿಸುವ ಮುನ್ನವೇ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

Advertisement

ಹುದ್ದೆ ಭರ್ತಿ ಮಾಡಿ: ದೇಶದಲ್ಲಿ ಯುವ ಜನತೆಯ ಜತೆ ಸುಖಾಸುಮ್ಮನೆ ನಾಟಕವಾಡಿ ಅವರನ್ನು ಹುಯಿಲೆಬ್ಬಿಸುವ ಬದಲು, ಕಳೆದ ಹಲವಾರು ವರ್ಷಗಳಿಂದ ಖಾಲಿ ಇರುವ ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರದ ಇಲಾಖೆಗಳ ಅನೇಕ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ರಾಜ್ಯದಲ್ಲೂ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಇದರ ಹಿಂದೆಯೂ ದೊಡ್ಡ ಷಡ್ಯಂತ್ರವಿದೆ. ಧರ್ಮದ ಲೆಕ್ಕಚಾರವಿದೆ. ಜನರಿಗೆ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಇತರರು ಇದ್ದರು.

ರಾಹುಲ್‌ ಎರಡು ಕಡೆ ಸ್ಪರ್ಧೆ ತಡೆಗೆ ಇಡಿ ಬಳಕೆ:

ಪ್ರಧಾನಿ ಮೋದಿ ಅವರ ತಲೆಯಲ್ಲಿ ಏನು ಲೆಕ್ಕಾಚಾರ ನಡೆಯುತ್ತಿದೆ ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ರಾಹುಲ್‌ ಎರಡು ಕಡೆ ಸ್ಪರ್ಧೆ ಮಾಡಬಾರದು ಎನ್ನುವ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಇಡಿ ಛೂ ಬಿಟ್ಟಿದ್ದಾರೆ. ಇದೆಲ್ಲವೂ ನಾವು ನೋಡದೇ ಇರೋದೆನಲ್ಲ. ಮೋದಿ ವಿರುದ್ಧ ಮಾತನಾಡುವವರು ಯಾರೂ ಇಲ್ಲ. ಕಾಂಗ್ರೆಸ್‌ನವರು ಮಾತಾಡ್ತಾರೆ. ಅವರ ಬಾಯಿ ಮುಚ್ಚಿಸಲು ಇಂತಹ ಟಾರ್ಚರ್‌ ಕೊಡಲು ಹೇಸುವ ಜನರಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ವಿಚಾರದಲ್ಲಿ ಪ್ರತಿಭಟನೆ ಮಾಡಿದರೆ ತಪ್ಪೇನಿದೆ. ಈ ಬಿಜೆಪಿ ಜನರಿಗೆ ಚಳುವಳಿ, ಸತ್ಯಾಗ್ರಹ ಅಂದ್ರೇನೆ ಗೊತ್ತಿಲ್ಲ. ಪಾಪ ಇವರ್ಯಾರಾದ್ರೂ ದೇಶಕ್ಕಾಗಿ ಜೈಲಿಗೆ ಹೋಗಿದ್ದಾರಾ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಡಿದಾಡಿದ್ದಾರಾ? ಇವರಿಗೆ ಹೇಗೆ ಗೊತ್ತಾಗುತ್ತದೆ ಹೋರಾಟದ ರುಚಿ ಎಂದು ಛೇಡಿಸಿದರು.

“ನ್ಯಾಷನಲ್‌ ಹೆರಾಲ್ಡ್‌’ ನಮ್ಮ ಪಕ್ಷದ ಆಸ್ತಿ. ನಮ್ಮದನ್ನು ನಾವು ಉಳಿಸಿಕೊಳ್ಳದೇ ಹೋದರೆ ನೆಹರು ಅವರು ಯಾವ ಉದ್ದೇಶಕ್ಕೆ ಪತ್ರಿಕೆ ಕಟ್ಟಿದ್ದರೋ ಅದು ವಿಫಲವಾಗುತ್ತದೆ. ನಮ್ಮ ತತ್ವ-ಸಿದ್ಧಾಂತಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತಿದೆ. ದೇಶದ ಜನರ ಮುಂದೆ ಸೋನಿಯಾ ಜೀ ಮತ್ತು ರಾಹುಲ್‌ ಜೀ ಅವರ ಇಮೇಜ್‌ ಕುಗ್ಗಿಸಲು ಕೇಂದ್ರ ಸರಕಾರ ಮತ್ತು ಮೋದಿ ಅವರು ಇಂತಹ ಇ.ಡಿ. ನಾಟಕ ಆಡುತ್ತಿದ್ದಾರೆ. ಇದನ್ನು ದೇಶದ ಜನರೂ ನೋಡುತ್ತಿದ್ದಾರೆ. ಕೇಂದ್ರ ಕೀಳು ರಾಜಕಾರಣ ಮಾಡಲು ದೇಶದ ಉನ್ನತ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಸರಕಾರದ ದುರಾದೃಷ್ಟ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next