Advertisement

ಬಿಟ್‌ ಬಿಡಿ, ಒಳ್ಳೇದಾಗುತ್ತೆ!

10:11 AM Mar 18, 2020 | mahesh |

ಬಹಳಷ್ಟು ಯುವಕರು ಮುಲಾಜಿಗೆ ಬೀಳುತ್ತಾರೆ. ಹಿಂಜರಿಕೆ ಇದಕ್ಕೆ ಕಾರಣ. ಇಷ್ಟ ಇಲ್ಲ ಅಂತ ಅದ್ಹೇಗೆ ಹೇಳ್ಳೋದು? ನಾಳೆಯಿಂದ ನಮ್ಮ ಬಿಜಿನೆಸ್‌ ನಿಲ್ಲಿಸಿಬಿಡೋಣ. ನಾನು ರೂಂ ಬಿಟ್ಟು ಹೋಗ್ತಿನಿ ಅನ್ನೋದನ್ನ ತೀರಾ ಮುಖಕ್ಕೆ ಹೊಡೆದಂತೆ ಹೇಳಕ್ಕಾಗಲ್ಲ ಅಂತ ಕೊರಗುತ್ತಾರೆ.

Advertisement

ಇನ್ನೂ ಇವನೊಂದಿಗೆ ಹೆಣಗೋಕೆ ಆಗಲ್ಲ ಅನಿಸುತ್ತೆ. ಎಷ್ಟೋ ಬಾರಿ ಮನಸ್ಸು ಇದೆಲ್ಲವನ್ನೂ ಕಡಿದುಕೊಂಡು ಬಿಡೋಣ ಅಂತ ಹೇಳುತ್ತಿರುತ್ತದೆ. ಆದರೆ, ಅದೆಲ್ಲ ಸಾಧ್ಯವಾ? ಅಂತ ಹಲ್ಲು ಕಚ್ಚಿಕೊಂಡು ಹೋಗಲು ಪ್ರಯತ್ನಿಸುತ್ತೀರಿ. ನಿಮಗೆ ಗೊತ್ತು, ಇದೆಲ್ಲಾ ಯಾವತ್ತೂ ಸರಿಹೋಗುವ ಮ್ಯಾಟರ್‌ ಅಲ್ಲ ಅಂತ. ಒಂದು ಚೆಂದಕ್ಕೆ, ಆದರ್ಶಕ್ಕೆ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುತ್ತೀರಿ.

ಸ್ವಲ್ಪ ದೂರ ಹೋಗುತ್ತಿದ್ದಂತೆ, ಅದೊಂದು ರಾಂಗ್‌ ಸೆಲೆಕ್ಷನ್‌ ಅನಿಸುತ್ತೆ. ಆದರೆ, ಅದನ್ನು ಮುರಿದುಕೊಂಡು ದೂರವಾಗಲು ನಿಮಗೊಂದು ಹಿಂಜರಿಕೆ. ಆ ಕಾರಣಕ್ಕೆ ಎಲ್ಲವನ್ನೂ ಅನುಭವಿಸುತ್ತಾ ಹೋಗುತ್ತೀರಿ. ಪ್ರೇಮಿಗಳ ಮಧ್ಯೆ, ಗಂಡ ಹೆಂಡತಿ ಮಧ್ಯೆ, ಹಣ ಹಾಕಿ ಒಂದಾಗಿ ವ್ಯವಹಾರಕ್ಕೆ ನಿಂತ ಇಬ್ಬರು ಗೆಳೆಯರ ಮಧ್ಯೆ, ಇಬ್ಬರು ರೂಮ್‌ ಮೇಟ್‌ ಗಳ ಮಧ್ಯೆ, ಆತ್ಮೀಯರು ಅಂದುಕೊಂಡ ಗೆಳೆಯರ ಮಧ್ಯೆ ಯಾವತ್ತೂ ಇವರು ನನಗೆ ಹೊಂದಿಕೆ ಆಗಲ್ಲ ಅನ್ನುವ ನಿರ್ಧಾರಗಳು ಬಂದು ಬಿಡುತ್ತವೊ ಆ ಕ್ಷಣಕ್ಕೇ ದೂರವಾಗಿ ಬಿಡುವವರ ಸಂಖ್ಯೆ ತುಂಬಾನೇ ಕಡಿಮೆ. ಬಹಳಷ್ಟು ಜನ ಮುಲಾಜಿಗೆ ಬೀಳುತ್ತಾರೆ. ಇಷ್ಟ ಇಲ್ಲ ಅಂತ ಅದ್ಹೇಗೆ ಹೇಳ್ಳೋದು? ನಾಳೆಯಿಂದ ನಮ್ಮ ಬಿಜಿನೆಸ್‌ ನಿಲ್ಲಿಸಿಬಿಡೋಣ. ನಾನು ರೂಂ ಬಿಟ್ಟು ಹೋಗ್ತಿನಿ ಅನ್ನೋದನ್ನ ತೀರಾ ಮುಖಕ್ಕೆ ಹೊಡೆದಂತೆ

ಹೇಗೆ ಹೇಳುವುದು ಅನ್ನುವುದು ಬಹುತೇಕರ ವಾದ
ನೀವು ಅಂಥದೊಂದು ಮುಲಾಜಿಗೆ ಬಿದ್ದಿರೋ… ನಿತ್ಯ ನಿಮಗೊಂದು ನರಕ ಕಾಣಿಸುತ್ತದೆ. ಇಷ್ಟವಾಗದವರ ಜೊತೆ ಬದುಕುವುದು ಸುಲಭದ ಮಾತಲ್ಲ. ಉಸಿರುಗಟ್ಟಿಸುತ್ತದೆ. ಪ್ರತಿಕ್ಷಣವೂ ಹಿಂಸೆ, ಸಂಕಟ. ಬದುಕೇ ಬೇಡ ಅನ್ನುವ ಮಟ್ಟಕ್ಕೆ ಬಂದುಬಿಡುತ್ತೇವೆ. ಹಾಗೆ ಹೇಳಿಕೊಳ್ಳಲಾಗದೆ ಸತ್ತು ಹೋದವರು ಕೂಡ ಇದ್ದಾರೆ. ನೋಡಿ, ಚೆಂದದ ಬದುಕೊಂದನ್ನು ಹಿಂಸೆ ಪಟ್ಟುಕೊಂಡೇ ಮುಗಿಸಬೇಕಾಗುತ್ತದೆ. ಬದುಕು ದೊಡ್ಡದಿದೆ. ಕಿರಿಕಿರಿ ಉಂಟುಮಾಡುವ ಜೊತೆಗಾರರನ್ನು ಇಟ್ಟುಕೊಂಡು ಜೀವನಪೂರ್ತಿ ಸಂಭಾಳಿಸಲಾಗುವುದಿಲ್ಲ. ಬರೀ ಅವರನ್ನೇ ಸಂಭಾಳಿಸಿಕೊಂಡಿರುವುದಾದರೆ, ನಾವಾದರೂ ಏನಕ್ಕೆ ಬದುಕಬೇಕು? ಹೇಳಿ. ಯಾವುದೋ ಒಂದು ಕಾರಣಕ್ಕೆ ಬಂಗಾರದಂಥ ಬದುಕು ನಲುಗಿ ಹೋಗಬಾರದು. ಬೇಡದ ಸಂಬಂಧಗಳ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರಲೇಬೇಕಾಗುತ್ತದೆ.

ಅಲ್ಲ ಸ್ವಾಮಿ, ಒಂದಾಗಿ ಬಾಳುವುದನ್ನು ಹೇಳಿಕೊಡುವುದನ್ನು ಬಿಟ್ಟು ಬರೀ ದೂರ ಆಗುವ ಮಾತನ್ನೇ ಆಡ್ತೀರಲ್ಲ. ಪರಸ್ಪರ ಭಿನ್ನ ಭಿನ್ನ ಅಭಿರುಚಿಯವರ ಮಧ್ಯೆ ಜಗಳಗಳು ಬರ್ತಾವೆ. ಅಪಾರ್ಥಗಳು ಇರ್ತವೆ. ಅಷ್ಟಕ್ಕೇ ಬಿಟ್ಟು ಹೊರಟು ಬಿಡುವುದಾ? ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕು ಅನ್ನುವ ಸಲಹೆಗಳನ್ನು ಒಪ್ಪುತ್ತೇನೆ. ಎಷ್ಟೋ ಸಂಬಂಧಗಳು ಅಂಥ ಸಲಹೆಗಳಿಂದ ಒಂದಾಗಿವೆ. ಒಳ್ಳೆಯದು, ಅದು ಅವರ ಲಕ್ಕು. ಅದನ್ನು ಮೀರಿಯೂ, ಇನ್ನು ಸಾಧ್ಯವಿಲ್ಲ ಅನ್ನುವ ಹೊತ್ತಿಗೆ ಎದ್ದು ಹೊರಡುವುದು ಒಳ್ಳೆಯದು.

Advertisement

ನನಗೆ ಗೊತ್ತು, ಇದು ಸುಲಭದ ಮಾತಲ್ಲ. ನೀವು ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ತೀರಾ ಅವರನ್ನು ಚvಟಜಿಛ ಮಾಡಲು ನೋಡುತ್ತೀರಿ, ಆಗಲೇ ಮೋಸಗಳು ತಲೆ ಎತ್ತುತ್ತವೆ. ಮನೆಗೆ ತಡವಾಗಿ ಬರುವುದು, ಕೇರ್‌ ಮಾಡದಿರುವುದು, ಅವನ ಫೋನ್‌ ತೆಗೆಯದೆ ಇರುವುದು, ವ್ಯಾಪಾರದಲ್ಲಿ ಸಹಕರಿಸದೆ ಇರುವುದು ಖಂಡಿತ ಇಂತಹ ವರ್ತನೆಗಳು ಸರಿಯಲ್ಲ. ಅವು ಎದುರಿನವರಿಗೆ ಸಾಕಷ್ಟು ನೋವು ಕೊಡುತ್ತವೆ. ಅವಮಾನ ತರುತ್ತವೆ. ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರವನ್ನು ನಿಮಗ್ಯಾರು ಕೊಟ್ಟಿದ್ದು? ಸಾಧ್ಯವಾದರೆ ನಮ್ಮ ಆತ್ಮೀಯರಿಗೆ ಒಂದಿಡೀ ಖುಷಿ ಕೊಡೋಣ.

ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ. ಅದು ಇಬ್ಬರಿಗೂ ಒಳ್ಳೆಯದು. ಎಲ್ಲವೂ ದಾರ ಕತ್ತರಿಸಿದಷ್ಟು ಸುಲಭವಲ್ಲ. ಸಂಬಂಧವೊಂದು ಬೆಳೆಯಲು ವರ್ಷಗಟ್ಟಲೆ ತೆಗೆದುಕೊಂಡಿರುವಾಗ ಅದನ್ನು ಕ್ಷಣ ಮಾತ್ರದಲ್ಲಿ ತುಂಡರಿಸಲು ಸಾಧ್ಯವಾ? ಇಲ್ಲ, ಆದರೆ, ಅದಕ್ಕೇ ಬಿಡವುದೆಂದು ಖಡಾಖಂಡಿತವಾಗಿ ನಿರ್ಧರಿಸಿದ ಮೇಲೆ ಅದನ್ನು ತಕ್ಷಣದಲ್ಲಿ ಜಾರಿಗೊಳಿಸುವುದು ಒಳ್ಳೆಯದು. ಅತ್ತ ಹಾವೂ ಸಾಯಬಾರದು, ಇತ್ತ ಕೋಲೂ ಮುರಿಯಬಾರದು ಅನ್ನುವ ಅವಸ್ಥೆಗೆ ಬಿದ್ದು ಹೋಗಬೇಡಿ. ನಿಮ್ಮ ಸಂಬಂಧದ ಆರಂಭ ಎಷ್ಟೊಂದು ಸೊಗಸಾಗಿ ಆಯ್ತು ನೋಡಿ, ನಿಮ್ಮಿಬ್ಬರ ಮಧ್ಯೆ. ಆಗ ಅದೆಷ್ಟು ಕುತೂಹಲಗಳಿದ್ದವು. ಆ ಹೊತ್ತಿಗೆ ನಿಮ್ಮ ಪಾಲಿಗೆ ಎಷ್ಟೊಂದು ಖುಷಿ ಇತ್ತು ಅಲ್ಲವೇ? ಅಂಥದೊಂದು ಮಧುರ ಬಾಂಧವ್ಯವನ್ನು ಮುರಿದುಕೊಳ್ಳುವಾಗ ತೀರಾ ರಂಪಾಟಕ್ಕೆ ಇಳಿಯಬಾರದು. ಅದು ಕೂಡ ಅಷ್ಟೇ ಸೊಗಸಾಗಿ ಮುಗಿದು ಹೋಗಬೇಕು. ಮುಂದೆ ನೆನಪು ಮಾಡಿಕೊಂಡಾಗ ಎಷ್ಟೊಂದು ಸೊಗಸಾಗಿ ಬೇರೆಯಾದೆವಲ್ಲ ಎಂಬುದು ಸಮಾಧಾನವಾಗಬೇಕು.

ಥೂ, ಅವನು ಯಾಕಾದ್ರೂ ನನ್‌ ಲೈಫ್ ಲ್ಲಿ ಬಂದಿದೊ° ಎನ್ನುವಂತಾಗಬಾರದು. ಲೈಫ‌°ಲ್ಲಿ ಪ್ರತಿಯೊಂದಕ್ಕೂ ಒಂದು ಕೊನೆ ಅನ್ನುವುದು ಇರುತ್ತೆ. ಅದು ಯಾವತ್ತೋ ಒಂದಿನ ಮುಗಿಯಲೇ ಬೇಕು, ಸಂಬಂಧಗಳೂ ಅಷ್ಟೇ! ಅವುಗಳಿಗೊಂದು ಕೊನೆ ಅಂತ ಬಂದಾಗ ಅದನ್ನು ಖುಷಿಯಿಂದಲೇ ಒಪ್ಪಿಕೊಳ್ಳಿ. ಅಲ್ಲೇ ಬದುಕಿನ ಖುಷಿಯೂ ಅಡಗಿರುವುದು.

ಬಿಡುಗಡೆ ಎಂಬುದು ಎಷ್ಟೋ ಜನರ ಪಾಲಿಗೆ life time ನೆಮ್ಮದಿ ಕೊಡುವಂತದ್ದಾಗಿರುತ್ತದೆ. ಬಿಟ್ಟು ಹೊರಡುವಾಗ ರೇಗಾಡಬೇಡಿ, ಜಗಳ ಮಾಡಿಕೊಳ್ಳಬೇಡಿ. ಒನ್‌ ಫೈನ್‌ ಡೇ, ಇಬ್ಬರೂ ಒಂದೆಡೆ ಸೇರುವ ನಿರ್ಧಾರ ಮಾಡಿ. ಪಾರ್ಕ್‌, ನದಿಯ ತೀರ, ದೇವಸ್ಥಾನಗಳಂತಹ ಸ್ಥಳವಾದರೆ ಒಳ್ಳೆಯದು. ಕೂತು ಮಾತಾಡಿ, ಒಟ್ಟಿಗೆ ಇದ್ದರೆ ಆಗುವ ತೊಂದರೆ, ಬೇರೆಯಾದರೆ ಆಗುವ ಲಾಭಗಳ ಬಗ್ಗೆ ಮಾತನಾಡಿ. ಜೊತೆಗೆ ಕಾಫಿ ಕುಡಿಯಿರಿ. ನಗುನಗುತ್ತಲೇ ಮಾತನಾಡಿ. ವಿದಾಯವನ್ನು ಒಂದು ಸಣ್ಣ ಚೀಟಿಯಲ್ಲಿ ಬರೆದು ಸುಮ್ಮನೆ ಅವರ ಕೈಯಲ್ಲಿ ಇಡಿ. ನಿಮ್ಮೆಲ್ಲ ತಪ್ಪುಗಳಿಗೆ ಒಂದು ಸಾರಿ ಕೇಳಿ. ಅವರ ಬದುಕಿಗೊಂದು ಗುಡ್‌ ಲಕ್‌ ಹೇಳಿ. ಆದರೆ ಮತ್ಯಾವತ್ತೂ ಭೇಟಿಯಾಗುವ ನಿರ್ಧಾರ ಬೇಡ. ಹಾಗೇನಾದರು ಮಾಡಿದರೆ, ನೀವು ಮತ್ತದೇ ಸಂಕಟಕ್ಕೆ ಬೀಳುವ ಅಪಾಯವಿದೆ. ಸಾಧ್ಯವಾದರೆ ಒಂದಷ್ಟು ಒಳ್ಳೆಯ ನೆನಪುಗಳನ್ನು ಶೇರ್‌ ಮಾಡಿ. ಇದೆಲ್ಲಾ ನಮ್ಮಿಬ್ಬರ ಒಳ್ಳೆಯದಕ್ಕೆ ಎಂಬುದು ಇಬ್ಬರಿಗೂ ಅರಿವಾಗಲಿ. ಇಬ್ಬರಲ್ಲಿ ಯಾರಿಗೂ ಕೂಡ ಪಾಪಪ್ರಜ್ಞೆ ಕಾಡದಿರಲಿ. ನಿಮ್ಮಿಬ್ಬರಿಗೂ ಬದುಕಿನ ಹೊಸ ದಾರಿ ಕಾಯುತ್ತಿರುತ್ತದೆ ಅತ್ತ ಕಡೆ ಹೊರಡಿ. ಬಿಟ್ಟು ಬಂದ ಮೇಲೆ ಬಹಳ ದಿನಗಳ ಕಾಲ ಅವರ ನೆನಪು ಕಾಡುತ್ತದೆ. Just enjoy it. ಬದುಕಿಗೆ ನೆನಪುಗಳು ಬೇಕು that’s all. ಪ್ರತಿಯೊಬ್ಬರ ಜೇಬಿನಲ್ಲಿ ಕಾಲವೊಂದು ಮರೆವಿನ ಮೆಡಿಸನ್‌ ಇಟ್ಟಿರುತ್ತದೆ. ಬಿಡಿ, ಕಾಲ ಅದೆಲ್ಲವನ್ನೂ ನೋಡಿಕೊಳ್ಳುತ್ತದೆ. ನೀವು ಮಾತ್ರ ನಿಮ್ಮ ಬದುಕನ್ನು ಸಿಂಗರಿಸಿಕೊಳ್ಳುವ ಕಡೆ ಗಮನ ಕೊಡಿ.

ಸದಾಶಿವ್‌ ಸೊರಟೂರು.

Advertisement

Udayavani is now on Telegram. Click here to join our channel and stay updated with the latest news.

Next