ಲಾಕ್‌ಡೌನ್‌ನಿಂದಾಗಿ ಸರ್ಕಾರ ಹಣಕಾಸು ಸಂಬಂಧಿತ, ತೆರಿಗೆ ಸಂಬಂಧಿತ ಚಟುವಟಿಕೆಗಳಿಗೆ ಹಲವು ಬಗೆಯ ವಿನಾಯಿತಿ ನೀಡಿತು. ಟ್ಯಾಕ್ಸ್ ಸೇವಿಂಗ್ಸ್ ಗಡುವು, ಐಟಿ ರಿಟರ್ನ್ಸ್ ಸಲ್ಲಿಕೆ ಗಡುವುಗಳ ಮುಂದೂಡಿಕೆ ಸೇರಿದಂತೆ, ಹಲ ಕ್ರಮಗಳನ್ನು ಕೈಗೊಂಡಿತ್ತು. ಮಾರ್ಚ್ ತಿಂಗಳಿನಿಂದಲೇ ಮುಂದೂಡಲ್ಪಟ್ಟ ಹಲವು ಗಡುವುಗಳಿಗೆ, ಜೂನ್ 30ರ ತನಕ ವಿಸ್ತರಣೆ ನೀಡಲಾಗಿತ್ತು. ಹೀಗಾಗಿ, ಜೂನ್ 30ರ ಒಳಗೆ ಪೂರೈಸಬೇಕಾದ ನಿರ್ಧಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಪಾನ್- ಆಧಾರ್ ಕಾರ್ಡ್ ಲಿಂಕ್: ನಾಗರಿಕರು ತಮ್ಮ ಪಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಲು ಈ ಹಿಂದೆ ಮಾರ್ಚ್ 31 ಕಡೆಯ ದಿನಾಂಕ ಎಂದು ಹೇಳಲಾಗಿತ್ತು. ಆ ಗಡುವನ್ನು ಜೂನ್ 30ಕ್ಕೆ ಮುಂದೂಡಲಾಗಿತ್ತು. ಗಡುವು ಕೊನೆಗೊಳ್ಳುವ ಮೊದಲು ಲಿಂಕ್ ಮಾಡದಿದ್ದರೆ, ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಎಲ್ಲೆಲ್ಲಿ ಪಾನ್ ಕಾರ್ಡ್ ಬಳಕೆ ಕಡ್ಡಾಯವೋ, ಅಲ್ಲಿ ಎಂದಿನಂತೆ ಪಾನ್ ಕಾರ್ಡ್ ಬಳಸಿ ಸೇವೆಯನ್ನು ಪಡೆದುಕೊಳ್ಳಲು ಆಗುವುದಿಲ್ಲ. ಐಟಿ ರಿಟರ್ನ್ಸ್ ಫೈಲ್ ಮಾಡಲೂ ಪಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಬೇಕಾಗುತ್ತದೆ.
ಐಟಿ ರಿಟರ್ನ್ಸ್ ಸಲ್ಲಿಕೆ: 2019- 20ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಜೂನ್ 30 ಕಡೆಯ ದಿನಾಂಕವಾಗಿದೆ. ಅಷ್ಟರೊಳಗೆ ಫೈಲ್ ಮಾಡದಿದ್ದಲ್ಲಿ, ನಂತರ ಆದಾಯ ತೆರಿಗೆ ಇಲಾಖೆಯ ಅನುಮತಿಯಿಲ್ಲದೆ ಯಾರೂ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಡೆಪಾಸಿಟ್: ಪಿಪಿಎಫ್, ಎಸ್‌ಎಸ್‌ವೈ, ಎಸ್‌ಸಿಎಸ್‌ಎಸ್ ಮುಂತಾದ ಸ್ಮಾಲ್ ಸೇವಿಂಗ್ ಸ್ಕೀಮುಗಳಲ್ಲಿ ಖಾತೆ ತೆರೆದಿದ್ದರೆ ವಾರ್ಷಿಕ ಇಂತಿಷ್ಟು ಕನಿಷ್ಠ ಮೊತ್ತವನ್ನು ಕಟ್ಟಬೇಕಿರುತ್ತದೆ. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ. ಅಂಚೆ ಇಲಾಖೆ, 2019-20ನೇ ಸಾಲಿನಲ್ಲಿ ಹಾಗೂ ಏಪ್ರಿಲ್ 2020ರ ವರೆಗೆ ಕನಿಷ್ಠ ಮೊತ್ತವನ್ನೂ ಕಟ್ಟದ ಸ್ಮಾಲ್ ಸೇವಿಂಗ್ಸ್ ಸ್ಕೀಮ್‌ನ ಖಾತೆದಾರರ ದಂಡ ಶುಲ್ಕಕ್ಕೆ ವಿನಾಯಿತಿ ನೀಡಿತ್ತು. ಆ ವಿನಾಯಿತಿ ಜೂನ್ 30ರ ತನಕ ಮಾತ್ರ. ಪಿಪಿಎಫ್, ಆರ್.ಡಿ.ಗಳಿಗೂ ಇದು ಅನ್ವಯಿಸುತ್ತದೆ.
ಪಿಪಿಎಫ್/ ಎಸ್‌ಎಸ್‌ವೈ: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಎಸ್ ಎಸ್‌ವೈ ಖಾತೆ ಮಾರ್ಚ್ 31 ರಂದು ಮೆಚೂರ್ಡ್ ಆಗಿದ್ದು, ಅದನ್ನು ವಿಸ್ತರಿಸುವ ಇರಾದೆಯಿದ್ದು ಲಾಕ್ ಡೌನ್ ಕಾರಣದಿಂದ ಮಾಡಲಾಗದೇ ಇದ್ದರೆ ಜೂನ್ 30ರ ವರೆಗೂ ಸಮಯವಿದೆ. ಅಷ್ಟರೊಳಗೆ ವಿಸ್ತರಣೆಗೆ ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ: ಹಿರಿಯ ನಾಗರಿಕರು, 55- 60 ವಯೋಮಾ ನದವರು ಫೆಬ್ರವರಿ 2020 – ಏಪ್ರಿಲ್ 2020ರಲ್ಲಿ ನಿವೃತ್ತಿ ಹೊಂದಿದ್ದರೆ, ಅಂಥವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಲು ಅನುವು ಮಾಡಿ ಕೊಡುವ ಸಲುವಾಗಿ ನಿಯಮಾವಳಿ ಸಡಿಲಿಸಿದೆ. ಜೂನ್ 30ರ ಒಳಗೆ ಅವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣವನ್ನು ತೊಡಗಿಸಬಹುದಾಗಿದೆ.