ಬಸವನಬಾಗೇವಾಡಿ: ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆ ಜಾರಿಗೆ ತಂದಿರುವುದನ್ನು ಕೈ ಬಿಟ್ಟು ರೈತರನ್ನು ಸ್ವಾವಲಂಬಿಯಾಗಿ ಬದುಕಲು ಬಿಡಬೇಕು ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ಪಟ್ಟಣದಲ್ಲಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನಾ ಸಮನ್ವಯ ಸಮಿತಿ ಹಾಗೂ ಅಖಂಡ ರಾಜ್ಯ ರೈತ ಸಂಘ, ಕರ್ನಾಟಕ ರೈತ ಪ್ರಾಂತ ಸಂಘ ತಾಲೂಕು ಘಟಕ ವತಿಯಿಂದ ಪ್ರತಿಭಟನೆ ನಡೆಸಿ ನಂತರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿ ನಂತರ ಮಾತನಾಡಿದ ಅವರು, ಕೇಂದ್ರ ಸರಕಾರ ರಚಿಸಿರುವ ಮೂರು ಕೃಷಿ ಕಾಯ್ದೆಯಿಂದ ರೈತರ ಬಾಳು ಹಾಳಾಗುತ್ತದೆ. ರೈತ ಕುಟುಂಬ ಬೀದಿಗೆ ಬೀಳುವುದು ನಿಶ್ಚಿತ.
ಆದ್ದರಿಂದ ರೈತರ ಬಾಳ್ವೆಗಾಗಿ ಕೇಂದ್ರ ಸರಕಾರ ತಕ್ಷಣ ಈ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಭಾರತದಲ್ಲಿ ಶೇ. 90ರಷ್ಟು ಕೃಷಿ ಅವಲಂಬಿತ ದೇಶವಾಗಿದ್ದು. ಇಲ್ಲಿ ಕೃಷಿಯೇ ಬಹು ಮುಖ್ಯವಾಗಿದ್ದು, ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುತ್ತದೆ. ಈ ಕಾಯ್ದೆಯಿಂದ ರೈತರಿಗಿಂತ ಹೆಚ್ಚಿನ ಲಾಭ ಉದ್ಯಮಿಗಳು ಮತ್ತು ಶ್ರೀಮಂತರ ಪಾಲಾಗುತ್ತದೆ. ಆಗ ರೈತ ಕುಟುಂಬ ಬೀದಿ ಪಾಲಾಗುವುದು ನಿಶ್ಚಿತ. ಆದ್ದರಿಂದ ಈ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ರೈತರಿಗೆ ಬದುಕಲು ಕೇಂದ್ರ ಸರಕಾರ ಬಿಡಬೇಕು ಎಂದು ಹೇಳಿದರು.
ಕಳೆದ 7 ತಿಂಗಳಿಂದ ದೇಶದ ಅನೇಕ ರೈತ ಸಂಘಟನೆಗಳು, ರೈತರು ಸೇರಿದಂತೆ ದೆಹಲಿಯಲ್ಲಿ ಬಿಸಿಲು, ಗಾಳಿ, ಮಳೆ, ಚಳಿ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೂ ಕೂಡಾ ಕೇಂದ್ರ ಸರಕಾರ ತನ್ನ ಮೊಂಡುತನ ಬಿಡದೇ ರೈತರ ಕೂಗನ್ನು ಲೆಕ್ಕಿಸದೆ ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆ ಹಿಂಪಡೆಯಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಕರ್ನಾಟಕ ರೈತ ಪ್ರಾಂತ ಸಂಘದ ಮುಖಂಡ ಪುಂಡಲೀಕ ಹಂದಿಗನೂರ, ನಾಡಗೌಡ ಬಿರಾದಾರ, ಗುರುಲಿಂಗಪ್ಪ ಶಿರಶಿ, ರಾಘು ಸುಣಗಾರ, ರಾಜು ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.