Advertisement

ಭ್ರಷ್ಟಾಚಾರ ತಡೆಯಲಾಗದಿದ್ದರೆ ಸಚಿವ ಸ್ಥಾನ ಬಿಡಿ

12:41 PM Jun 15, 2017 | Team Udayavani |

ವಿಧಾನಸಭೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 441 ಕೋಟಿ ರೂ. ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕೇಂದ್ರ ಸರ್ಕಾರ ಮತ್ತು ಕೇಂದ್ರ ಹಣಕಾಸು ಸಚಿವರ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆ ವೇಳೆ ಬುಧವಾರ ವಿಷಯ ಪ್ರಸ್ತಾಪಿಸಿದ ಜಗದೀಶ್‌ ಶೆಟ್ಟರ್‌, ವಿಟಿಯು ಹಣವನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಬಗ್ಗೆ ಸಚಿವ ಬಸವರಾಜ ರಾಯರಡ್ಡಿ ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ಕೇಂದ್ರಕ್ಕೆ ಸಾಮಾನ್ಯ ಜ್ಞಾನವಿಲ್ಲ, ಹಣಕಾಸು ಸಚಿವ ಅರುಣ್‌ ಜೇಟ್ಲಿ  ಅವರ ಅವಕೃಪೆಯಿಂದಾಗಿ ವಿಟಿಯು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ತಕರಾರು ಅರ್ಜಿ ಸಲ್ಲಿಸಿ: ಮಧ್ಯಪ್ರವೇಶಿಸಿದ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ, “ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಈ ವಿಚಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಗಮನಕ್ಕೆ ತಂದಿದ್ದೆ. ಈ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಸರ್ಕಾರಿ ವಿವಿಯ ಹಣ ಮುಟ್ಟುಗೋಲು ಹಾಕಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದರು. ಅಲ್ಲದೆ, ಈ ಕುರಿತು ನೀವು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿ. ನಾವು (ಕೇಂದ್ರ ಸರ್ಕಾರ) ನಿಮ್ಮ ನೆರವಿಗೆ ಬರುತ್ತೇವೆ ಎಂದೂ ಭರವಸೆ ನೀಡಿದ್ದರು. ಈ ವಿಚಾರದಲ್ಲಿ ವಿತ್ತ ಸಚಿವರು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ’ ಎಂದರು.

ಸಚಿವರೇ ಅಪಪ್ರಚಾರ ಮಾಡಿದ್ರೆ ಹೇಗೆ?: ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜಗದೀಶ್‌ ಶೆಟ್ಟರ್‌, ನೀವು
(ಆರ್‌.ವಿ.ದೇಶಪಾಂಡೆ) ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಎಲ್ಲವೂ ಸರಿಯಾಗಿತ್ತು. ಆದರೆ, ಬಸವರಾಜ ರಾಯರಡ್ಡಿ
ಈ ಖಾತೆ ವಹಿಸಿಕೊಳ್ಳುತ್ತಿದ್ದಂತೆ ಎಲ್ಲವೂ ಹಾಳಾಗುತ್ತಿದೆ. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಆ ಮೂಲಕ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿ
ಕಾರಿದರು.

ಇದು ಒಂದೆಡೆಯಾದರೆ, ವಿಟಿಯು ಭ್ರಷ್ಟಾಚಾರದ ಕೂಪವಾಗಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಅವರೇ ಹೇಳುತ್ತಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದ್ದರೆ ಒಬ್ಬ ಸಚಿವರಾಗಿ ಅದಕ್ಕೆ ಕಡಿವಾಣ ಹಾಕುವುದನ್ನು ಬಿಟ್ಟು ಅವರೇ ಅಪಪ್ರಚಾರ ಮಾಡಿದರೆ ವಿವಿಯನ್ನು ಕಾಪಾಡುವವರು ಯಾರು? ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಅವರು ಸಚಿವರಾಗಿ ಏಕೆ ಮುಂದುವರಿಯಬೇಕು ಎಂದು ಪ್ರಶ್ನಿಸಿದರು.

Advertisement

ವಿಟಿಯು ಪರಿಸ್ಥಿತಿ ಇದಾದರೆ ರಾಜ್ಯದ ಎಲ್ಲಾ ವಿವಿಗಳು ಭ್ರಷ್ಟಾಚಾರದ ಕೂಪಗಳಾಗಿವೆ ಎಂದೂ ಸಚಿವರು ಹೇಳುತ್ತಿದ್ದಾರೆ. ಅಲ್ಲದೆ, ಬಸವರಾಜ ರಾಯರಡ್ಡಿ ಅವರ ಇಲಾಖೆಯಲ್ಲೇ ಬರುವ ರಾಜ್ಯದ 412 ಪ್ರಥಮ ದರ್ಜೆ ಕಾಲೇಜುಗಳ ಪೈಕಿ 390 ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರಿಲ್ಲ. ಈ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು
ಕೇವಲ ಪ್ರಚಾರಕ್ಕಾಗಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ವಿವಿಗೆ ಆದಾಯ
ತೆರಿಗೆ, ಖಾಸಗಿ ವಿವಿಗೆ ವಿನಾಯಿತಿ

ಸರ್ಕಾರಿ ವಿಶ್ವವಿದ್ಯಾಲಯಕ್ಕೆ ಆದಾಯ ತೆರಿಗೆ ವಿನಾಯಿತಿ ಇಲ್ಲ. ಆದರೆ, ಖಾಸಗಿ ವಿವಿಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡುತ್ತಿರುವ ಇಲಾಖೆಯ ಕ್ರಮದ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ  ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಈ ವಿಚಾರವನ್ನು ಬಹಿರಂಗಗೊಳಿಸಿದ್ದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ವಿಟಿಯು ಹಣವನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಸಚಿವ ಅರುಣ್‌ ಜೇಟ್ಲಿ ಅವರು ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದರು. 

ಈ ವೇಳೆ ಖಾಸಗಿ ವಿವಿಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಗೊತ್ತಾಯಿತು ಎಂದರು. ಇದನ್ನು ಗಮನಿಸಿದ ಕೇಂದ್ರ ಸಚಿವರು, ಏನಿದು ಸರ್ಕಾರಿ ವಿವಿ ಆದಾಯ ತೆರಿಗೆ ಪಾವತಿಸಿಲ್ಲ ಎಂದು ಹೇಳಿ ಅದರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೀರಿ. ಇನ್ನೊಂದೆಡೆ ಖಾಸಗಿ ವಿವಿಗಳಿಗೆ ತೆರಿಗೆ ವಿನಾಯಿತಿ ನೀಡುತ್ತೀರಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದರಲ್ಲದೆ, ಸರ್ಕಾರಿ ವಿವಿಗಳಿಗೂ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದರು. ಅವರ ಸಲಹೆಯಂತೆ ಆದಾಯ ತೆರಿಗೆ ಮುಟ್ಟುಗೋಲು ಹಾಕಿಕೊಂಡಿರುವ ಹಣ ವಾಪಸ್‌ ಪಡೆಯಲು ವಿಟಿಯು ಕಾನೂನು
ಸಮರ ನಡೆಸುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next