ಬೆಂಗಳೂರು: ಬರುವ 2020ರ ವೇಳೆಗೆ ಅತಿ ಹೆಚ್ಚು ಅದಿರು ಉತ್ಪಾದನೆ ಮಾಡುವ ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ವಿವಿಧ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿದ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದ್ದು, ಇದು ಗಣಿ ಉದ್ಯಮದ ಬೆಳವಣಿಗೆಗೆ ದೊಡ್ಡ ತೊಡಕಾಗಲಿದೆ ಎಂದು ಉದ್ಯಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಗಣಿ ಎಂಜಿನಿಯರ್‌ಗಳ ಸಂಘ ಬೆಂಗಳೂರು ಘಟಕ ಬಿಡುಗಡೆ ಮಾಡಿದ “ಖನಿಜಗಳ ಗಣಿಗಾರಿಕೆ- 2020ರ ಆಚೆಗೆ’ ಕುರಿತ ಕಿರುಹೊತ್ತಿಗೆಯಲ್ಲಿ ಉದ್ಯಮಿಗಳು ಈ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಜಾರ್ಖಂಡ್, ಒರಿಸ್ಸಾ, ಛತ್ತೀಸಗಢ ಮತ್ತಿತರ ಪ್ರಮುಖ ರಾಜ್ಯಗಳಲ್ಲಿ ಹತ್ತಾರು ಕ್ವಾರಿಗಳ ಗುತ್ತಿಗೆ ಅವಧಿ 2020ರ ಮಾರ್ಚ್‌ಗೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಅಲ್ಲೆಲ್ಲಾ ಗಣಿಗಾರಿಕೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ರಾಜ್ಯಗಳಿಂದ ವಾರ್ಷಿಕ ಸುಮಾರು 30ರಿಂದ 40 ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತಿದೆ. ಒಂದು ವೇಳೆ ಸ್ಥಗಿತಗೊಂಡರೆ, ಇದರಿಂದ ಬೇಡಿಕೆ ಮತ್ತು ಪೂರೈಕೆ ಅಂತರ ಹೆಚ್ಚಲಿದ್ದು, ಉದ್ಯಮದ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ವಾರಿಗಳು ಸ್ಥಗಿತಗೊಳ್ಳುವುದರಿಂದ ಕೇವಲ ಅದಿರು ಪೂರೈಕೆಯಲ್ಲಿ ಕುಸಿತ ಆಗುವುದಿಲ್ಲ; ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈ ಮೂಲಕ ಅವಲಂಬಿತ ಕುಟುಂಬಗಳ ಮೇಲೂ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ “ಸಿ’ ಕೆಟಗರಿಯ ಒಟ್ಟಾರೆ 22 ಕ್ವಾರಿಗಳನ್ನು ಲೀಸ್‌ಗೆ ನೀಡುವ ಪ್ರಸ್ತಾವನೆ ಇದ್ದು, ಈ ಪೈಕಿ ಇದುವರೆಗೆ 14 ಕ್ವಾರಿಗಳನ್ನು ಹರಾಜು ಮೂಲಕ ಗುತ್ತಿಗೆ ನೀಡುವ ಪ್ರಕ್ರಿಯೆ ಮುಗಿದಿದೆ. ಆದರೆ, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವಾರಿಗಳ ಸಂಖ್ಯೆ ಕೇವಲ ಮೂರರಿಂದ ನಾಲ್ಕು. ಈ ಕ್ವಾರಿಗಳ ಗುತ್ತಿಗೆ ಅವಧಿ ಕೂಡ 2020ರ ಮಾರ್ಚ್ ವೇಳೆ ಅಂತ್ಯಗೊಳ್ಳಲಿದೆ ಎಂದು “2020ರ ನಂತರ ಕರ್ನಾಟಕದ ಚಿತ್ರಣ’ ಕುರಿತು ಲೇಖನ ಬರೆದ ಉದ್ಯಮಿ ಬಿ.ಪಿ. ಪಾಂಡೆ ತಿಳಿಸಿದ್ದಾರೆ.
40 ಮೆಟ್ರಿಕ್ ಟನ್ ಗುರಿ: ಇದಕ್ಕೂ ಮುನ್ನ ನಡೆದ “ಖನಿಜಗಳ ಗಣಿಗಾರಿಕೆ-2020ರ ಆಚೆಗೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎನ್.ಎಸ್. ಪ್ರಸನ್ನ ಕುಮಾರ್ ಮಾತನಾಡಿ, “ರಾಜ್ಯದಲ್ಲಿ 14 ಗಣಿ ಕ್ವಾರಿಗಳನ್ನು ಗುತ್ತಿಗೆ ನೀಡಲಾಗಿದ್ದು, ಈ ಪೈಕಿ ನಾಲ್ಕರಲ್ಲಿ ಈಗಾಗಲೇ ಗಣಿಗಾರಿಕೆ ಆರಂಭವಾಗಿದೆ. ಆಗಸ್ಟ್ ಅಂತ್ಯಕ್ಕೆ ಇನ್ನುಳಿದ ಹತ್ತರಲ್ಲಿ ಕಾರ್ಯಾರಂಭ ಆಗಲಿದ್ದು, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 40 ಮೆಟ್ರಿಕ್ ಟನ್ ಅದಿರು ಉತ್ಪಾದನೆ ಗುರಿ ಇದೆ ಎಂದು ಮಾಹಿತಿ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕೆ (ಗಣಿ) ಕಾರ್ಯದರ್ಶಿ ಎಂ. ಮಹೇಶ್ವರರಾವ್, “2020ರ ನಂತರ ಕೆಲವು ಗಣಿ ಗುತ್ತಿಗೆ ಅವಧಿ ಪೂರ್ಣಗೊಳ್ಳಲಿದೆ. ಇದರಿಂದ ಅದಿರು ಉತ್ಪಾದನೆ ಕುಂಠಿತಗೊಂಡು, ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಆಗಲಿದೆ. ಪರಿಣಾಮ ಬೆಲೆ ಏರಿಕೆ ಆಗಲಿದೆ ಎಂಬ ಆತಂಕ ಇದೆ. ಆದರೆ, ಈ ಬಗ್ಗೆ ಆತಂಕ ಬೇಡ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ’ ಎಂದರು.
ಭಾರತೀಯ ಭೂವಿಜ್ಞಾನ ಸೊಸೈಟಿ ಕಾರ್ಯದರ್ಶಿ ಆರ್.ಎಚ್. ಸಾವಕಾರ ಮಾತನಾಡಿ, ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೊದಲೇ ಸ್ಥಳೀಯ ಅಭಿಪ್ರಾಯ ಸಂಗ್ರಹ, ಪರಿಸರ ಮತ್ತು ಅರಣ್ಯ ಸೇರಿದಂತೆ ಅಗತ್ಯ ಅನುಮತಿಗಳನ್ನು ಪಡೆದು, ತ್ವರಿತಗತಿಯಲ್ಲಿ ಪರವಾನಗಿ ನೀಡಬೇಕು. ಗುತ್ತಿಗೆ ನೀಡಿದ ನಂತರ ಅನುಮತಿಗಳಿಗೆ ಓಡಾಡುವಂತಾಗಬಾರದು ಎಂದು ಸೂಚ್ಯವಾಗಿ ಹೇಳಿದರು. ಪದಾಧಿಕಾರಿಗಳಾದ ಡಾ.ಟಿ.ಎನ್. ವೇಣುಗೋಪಲ್, ಕೆ. ಮಧುಸೂದನ, ದೀಪಕ್ ವಿದ್ಯಾರ್ಥಿ ಮತ್ತಿತರರು ಉಪಸ್ಥಿತರಿದ್ದರು.