ಬೆಂಗಳೂರು: ಬ್ರೈಲ್ ಲಿಪಿ ಮತ್ತು ಉಬ್ಬು ಚಿತ್ರಗಳನ್ನು ಬಳಕೆ ಮಾಡಿಕೊಂಡು ಅಂಧರಿಗೆ ಸಂಗೀತ ಕಲಿಸಲು ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಯೋಜನೆ ರೂಪಿಸಿದೆ.
ಸಂಗೀತದ ಬಗ್ಗೆ ತೀವ್ರ ಆಸಕ್ತಿಯಿರುವ ದೃಷ್ಟಿಹೀನ ಕಲಾವಿದರಿಗೆ ಅನುಕೂಲ ವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಹೆಜ್ಜೆಯಿರಿಸಲಾಗಿದೆ. ಪಠ್ಯದ ಜತೆಗೆ ಆಡಿಯೋ ಮೂಲಕ ಸಂಗೀತ ಕಲಿಸುವ ಇರಾದೆ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕಿದೆ.
ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ದೃಷ್ಟಿ ಹೀನರಿಗೆ ನೆರವಾಗಲಿ ಎಂದು ಚಿತ್ರಗಳನ್ನು ಬಳಕೆ ಪದ್ಧತಿ ಇದೆ. ಆ ಪದ್ಧತಿಯನ್ನೇ ಇಲ್ಲಿ ಬಳಕೆ ಮಾಡಲಾಗುತ್ತದೆ. ಅಂಧರಿಗೆ ಸಂಗೀತ ಕಲಿಕೆಯ ಪಠ್ಯಗಳು ಇಲ್ಲ. ಆ ಹಿನ್ನೆಲೆಯಲ್ಲಿ ಬ್ರೈಲ್‌ಲಿಪಿ ಜತೆಗೆ ಉಬ್ಬು ಚಿತ್ರಗಳ ಮೂಲಕ ಸಂಗೀತದ ಪಠ್ಯ, ರಾಗ , ವಾದ್ಯ ಸೇರಿದಂತೆ ಮತ್ತಿತರ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಈಗಾಗಲೇ ಈ ಯೋಜನೆಯ ರೂಪುರೇಷಗಳ ಬಗ್ಗೆ ಸಿದ್ಧತೆ ಕೂಡ ನಡೆದಿದೆ. ಶೀಘ್ರದಲ್ಲೆ ಯೋಜನೆಯ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಸುಲಭವಾಗಿ ಸಂಗೀತ ಕಲಿಯುವ ನಿಟ್ಟಿನಲ್ಲಿ ಪಠ್ಯ ರಚನೆ ಮಾಡಲಾಗುತ್ತದೆ. ಗ್ರಾಫಿಕ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಗ್ರಾಫಿಕ್‌ಗಳ ಮೇಲೆ ಅಂಧಕಲಾವಿದರು ಕೈ ಇಟ್ಟರೆ ಇಂತಹದ್ದೆ ಚಿತ್ರ ಎಂದು ಅಂದಾಜಿಸಿ ಸಂಗೀತ ಪರಿಚಯಿಸುವ ಕೆಲಸ ನಡೆಯಲಿದೆ ಎಂದು ಹೇಳಿದ್ದಾರೆ. ಸಪ್ತ ತಾಳಗಳ ಕಲಿಕೆ: ಸಂಗೀತ ಕ್ಷೇತ್ರದ ಎಲ್ಲ ಪ್ರಕಾರಗಳ ಕಲಿಕೆ ಈ ಪಠ್ಯದಲ್ಲಿ ಇರಲಿದೆ.
ಸಂಗೀತದ ಸಪ್ತ ತಾಳಗಳ ಬಗ್ಗೆ ಕೂಡ ಮಾಹಿತಿ ಇರಲಿದೆ. ತಂಬೂರಿ, ಪೀಟಿಲು, ಹಾರ್ಮೋನಿಯಂ, ಕೊಳಲು, ಘಟಂ, ವೀಣೆ ಸೇರಿದಂತೆ ಸಂಗೀತದ ವಿವಿಧ ಉಪಕರಣದ ಬಗ್ಗೆ ಮಾಹಿತಿ ನೀಡಲಾಗುವುದು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕೀ ಸಂಗೀತ ಸೇರಿದಂತೆ ಇನ್ನಿತರ ಸಂಗೀತದ ಕಲಾಪ್ರಕಾರ ಗಳ ಪರಿಚಯ ಕೂಡ ಇರಲಿದೆ ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಬೆಂಗಳೂರು ಕೇಂದ್ರ ದ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ ಹೇಳುತ್ತಾರೆ.
ಇಂತಹ ಯೋಜನೆ ದೇಶ ಎಲ್ಲೂ ಕೂಡ ರೂಪಿಸಿಲ್ಲ. ಮೈಸೂರು ಮೂಲದ ಹಿರಿಯ ಕಲಾವಿದರಾದ ಉದ ಯ್ ಕುಮಾರ್ ಪಠ್ಯ ರಚನೆ ಬಗ್ಗೆ ಒಲವು ತೋರಿ ದ್ದಾರೆ. ಪಠ್ಯ ರಚನೆ ಕಾರ್ಯ ನಡೆದಿದೆ.ಯೋಜನೆಗೆ ಅಂತಿಮ ಸ್ವರೂಪ ನೀಡುವ ಕೆಲಸ ಸಾಗಿದೆ ಎಂದರು.
14 ಲಕ್ಷ ರೂ.ಯೋಜನಾ ವೆಚ್ಚ: ಸುಮಾರು 14 ಲಕ್ಷ ರೂ.ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಅನುದಾನದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ವರ್ಷದಲ್ಲಿ ಈ ಯೋಜನೆ ಪೂರ್ಣ ಗೊಳಿಸುವ ಆಲೋಚನೆ ಇದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಗೀತದ ವಿಧಾನಗಳು ಪಠ್ಯ ರೂಪದಲ್ಲಿ ದೊರೆತರೆ ಮುಂದೆ ಶಾಲಾ- ಕಾಲೇಜು ವಿದ್ಯಾರ್ಥಿ ಗಳಿಗೆ ಒಳಿತಾಗಲಿದೆ. ಬ್ರೈಲ್ ಲಿಪಿ ಮತ್ತು ಉಬ್ಬು ಚಿತ್ರಗಳನ್ನು ಬಳಕೆ ಮಾಡಿ ಸಂಗೀತ ಕಲಿಸುವು ದರಿಂದ ಅಂಧ ವಿದ್ಯಾರ್ಥಿಗಳಿಗೆ ಅನುಕೂಲ ಎಂದರು.
ಅಂಧ ಕಲಾವಿದರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ರೂಪರೇಷೆಗಳ ಬಗ್ಗೆ ಸಿದ್ಧತೆ ನಡೆದಿದೆ. ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಬ್ರೈನ್‌ಲಿಪಿ ಜತೆಗೆ ಉಬ್ಬು ಚಿತ್ರಗಳನ್ನು ಬಳಕೆಯಿಂದ ದೃಷ್ಟಿಹೀನರಿಗೆ ಸುಲಭ ಸಂಗೀತ ಕಲಿಯಲು ನೆರವಾಗಲಿದೆ.
● ಡಿ.ಮಹೇಂದ್ರ, ಪ್ರಾದೇಶಿಕ ನಿರ್ದೇಶಕ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ
-ದೇವೇಶ ಸೂರಗುಪ್ಪ