ಮಂಗಳೂರು: “ನಿಮ್ನ ಜಾತಿಗಳ ಸಂವಿಧಾನ’ ಎಂದು ಖ್ಯಾತವಾಗಿರುವ “ದಕ್ಕಲ ಜಾಂಬವ ಪುರಾಣ’ದ ಎಲ್ಲ ಅಧ್ಯಾಯಗಳನ್ನು ಹಾಡುವ, ಕಥೆ ಹೇಳುವ ಕೊನೆಯ ಕೊಂಡಿ ದಕ್ಕಲ ಮುನಿಸ್ವಾಮಿ ಅವರು ಮಂಗಳೂರು ಲಿಟ್‌ಫೆಸ್ಟ್‌ನಲ್ಲಿ “ದಕ್ಕಲ ಜಾಂಬವ ಪುರಾಣ’ವನ್ನು ಪ್ರಸ್ತುತ ಪಡಿಸಲು ಆಗಮಿಸಿದ ಸಂದರ್ಭ “ಉದಯವಾಣಿ’ ಜತೆಗೆ ತಮ್ಮ ಕಲಾ ಜೀವನ ಮತ್ತು ಇಂದಿನ ಪರಿಸ್ಥಿತಿಯ ಬಗ್ಗೆ ಹಂಚಿಕೊಂಡರು.
ಮೂಲಪುರುಷ ಜಾಂಬವ: ಆದಿ ಜಾಂಬವ ಮಾದಿಗರ ಮೂಲ ಪುರುಷ. ನಮ್ಮ ಪ್ರಕಾರ ಅವನು ಭೂಮಿಯ ಸೃಷ್ಟಿಗೂ ಆರು ತಿಂಗಳು ಮೊದಲೇ ಹುಟ್ಟಿದ ಆದಿ ಪುರುಷ. ಜಂಬೂ ದ್ವೀಪದಲ್ಲಿ ನೆಲೆಸಿದ ಮೊದಲಿಗನಾದ ಕಾರಣ ಆತನನ್ನು ಆದಿಗ ಎನ್ನುತ್ತೇವೆ. ಈ ಜಂಬೂ ದ್ವೀಪದ ಪುರಾಣವನ್ನು 18 ಯುಗಗಳ ಕಥೆಯೊಂದಿಗೆ ವಿವರಿಸುವುದೇ ಜಾಂಬವ ಪುರಾಣ. ದಕ್ಕಲ ಅಥವಾ ದಕ್ಕಲಿಗ ನಮ್ಮ ಸಮುದಾಯ.
ಜಾಂಬವ ಹುಟ್ಟುವಾಗ ಭೂಮಿ ಇರಲಿಲ್ಲ. ಎಲ್ಲ ಕಡೆ ನೀರು, ಸಮುದ್ರ ಇತ್ತು. ಅನಂತರ ಆದಿ ಶಕ್ತಿ ಜನಿಸುತ್ತಾಳೆ. ಆಕೆಯ ಮದುವೆ, ಬ್ರಹ್ಮ ವಿಷ್ಣು ಮಹೇಶ್ವರರ ಜನನ, ಜಾತಿ ಕುಲಗಳು ಹುಟ್ಟಿದ ಬಗೆ, ಸೂರ್ಯ, ಚಂದ್ರ, ಭೂಮಿಯ ಹುಟ್ಟು, ವರ್ತಮಾನ ವಿಚಾರಗಳು ಹೀಗೆ ಎಲ್ಲ ವಿಚಾರಗಳು ಈ ಪುರಾಣದಲ್ಲಿವೆ.
50 ವರ್ಷಗಳ ವೃತ್ತಿ: ನಮ್ಮ ಕುಲವೃತ್ತಿಯೇ ಈ ಕಥೆಯನ್ನು ಊರೂರಲ್ಲಿ ಹೇಳಿಕೊಂಡು ಬರುವುದು. ಗುರುಗಳಾದ ದೊಡ್ಡ ರಂಗಮ್ಮ ಅವರಿಂದ ಕಲಿತಿದ್ದೇನೆ. ಈಗ ನನಗೆ ಸುಮಾರು 70 ವರ್ಷ. 50-55 ವರ್ಷಗಳಿಂದ ಇದನ್ನೇ ಹೇಳಿಕೊಂಡು ಊರೂರು ತಿರುಗುತ್ತಿದ್ದೇನೆ. ಮಕ್ಕಳಿಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲದ ಕಾರಣ ನನ್ನಲ್ಲೇ ಇದು ಕೊನೆಯಾ ಗುತ್ತದಲ್ಲ ಎನ್ನುವುದೇ ಬೇಸರ ಇದೆ. ಓರ್ವ ಮಗ ನಿಧನ ಹೊಂದಿದ್ದು, ಇನ್ನೋರ್ವನಿಗೆ ಈ ರೀತಿಯ ಬದುಕು ಇಷ್ಟವಿಲ್ಲ. ಆದ್ದರಿಂದ ದರ್ಜಿ ವೃತ್ತಿ ಹಿಡಿದಿದ್ದಾನೆ. ಆತನಿಗೆ ಕಿನ್ನರಿ ಹಿಡಿಯಲೂ ಬರುವುದಿಲ್ಲ. ಇದ್ದ ಓರ್ವ ಮಗಳೂ ನಮ್ಮನ್ನು ಅಗಲಿದ್ದಾಳೆ. ಸದ್ಯ ಪತ್ನಿ, ಮಗ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿದ್ದೇನೆ.
ನಾನು ಕೇರಿಯೊಳಗೆ ಕಾಲಿಟ್ಟರೆ ಅಲ್ಲಿನ ಪ್ರಮುಖರು ಓಡಿ ಬಂದು ಬರಮಾಡಿಕೊಳ್ಳುತ್ತಾರೆ. ಕಥೆ ಹೇಳುವುದರಿಂದಲೇ ನಮ್ಮ ಜೀವನ. ನಾವು ಹೋಗುವ ಮನೆಯವರು ಕನಿಷ್ಠ 100 ರೂ. ನೀಡಬೇಕು ಎಂದು ನಿಗದಿ ಮಾಡಿದ್ದೇನೆ. ಜತೆಗೆ ಅಕ್ಕಿ, ವಸ್ತ್ರ ನೀಡುವುದೂ ಇದೆ.
ಗುಡಿಸಲ ವಾಸಿಗಳು
ಕಳೆದ ವರ್ಷ ಸರಕಾರ ಡಾ| ಬಾಬೂ ಜಗಜ್ಜೀವನರಾಂ ಪ್ರಶಸ್ತಿ ನೀಡಿ ಗೌರವಿಸಿತ್ತು. ಸದ್ಯ ವಾಸಿಸಲು ಮನೆ ಇಲ್ಲ. ಈ ಮೊದಲು ಹೊಸಕೋಟೆ ತಾಲೂಕಿನ ಶಿವನಾಪುರದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಮಳೆಗೆ ಆ ಮನೆ ನೆಲಸಮವಾಗಿ ನಮ್ಮ ಪ್ರಮುಖ ಸಾಧನವಾದ ಕಿನ್ನರಿಯೂ ಒಡೆದುಹೋಗಿತ್ತು. ಹೊಸದಾಗಿ ತಯಾರಿಸಿರುವ ಕಿನ್ನರಿಯಲ್ಲಿ ಶ್ರುತಿ ಬರುವುದಿಲ್ಲ. ಸದ್ಯ ದೊಡ್ಡಬಳ್ಳಾಪುರದಲ್ಲಿ ಗುಡಿಸಲಿನಲ್ಲಿದ್ದೇವೆ.ಮನೆಸುತ್ತ ಹುಲ್ಲು ಪೊದೆ ಬೆಳೆದು, ಹಾವು-ಚೇಳುಗಳು ಕಾಟ ನೀಡುತ್ತಿವೆ. ಒಂದು ಮನೆ ಕಟ್ಟಿಸಿ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.