Advertisement

ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಶಿಕ್ಷಣ ಕಲಿಯಿರಿ

09:02 PM Feb 03, 2020 | Lakshmi GovindaRaj |

ಕೆ.ಆರ್‌.ನಗರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸನ್ನಢ‌ತೆಗಳನ್ನು ಕಲಿಯಬೇಕು. ಆಗ ಮಾತ್ರ ಕಲಿಕೆಗೆ ನಿಜವಾದ ಅರ್ಥ ಬರಲಿದೆ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

Advertisement

ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ತಾಲೂಕು ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರ ಸನ್ಮಾನ ಮತ್ತು ಸಂಘದ 6ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಶಿಕ್ಷಣ ಕಲಿತರೆ ಸಾಲದು. ನೀವು ಉತ್ತಮ ಹಾಗೂ ಉನ್ನತ ಶಿಕ್ಷಣ ಕಲಿತುಕೊಂಡು ಪರೀಕ್ಷೆಗಳನ್ನು ಎದುರಿಸಬೇಕು. ಸಾಧನೆ ಮಾಡಲು ಕಠಿಣ ಪರಿಶ್ರಮ ಅಗತ್ಯ ಎಂದರು.

ಶಿಕ್ಷಣಮುಖೀ: ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಪುರಸ್ಕಾರ ಮಾಡುವುದರಿಂದ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ವರ್ಷದಿಂದ ಸಂಘದ ವತಿಯಿಂದ ನಡೆಸುವ ಶಿಕ್ಷಣಮುಖೀ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡುವುದಾಗಿ ಅವರು ಭರವಸೆ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ಕೇಶವಾನಂದಪುರಿ ಸ್ವಾಮೀಜಿ ಮಾತನಾಡಿ, ಶಿಕ್ಷಣ ಎಂಬುದು ಕಡ್ಡಾಯವಲ್ಲ. ಆದರೆ, ಅದನ್ನು ಸಂಸ್ಕಾರಕ್ಕಾಗಿ ಕಲಿಯಬೇಕು. ಕಲಿತ ವಿದ್ಯೆ, ನಯ, ವಿನಯ ಮತ್ತು ಸನ್ನಡತೆ ನೀಡದಿದ್ದರೆ ಅದರ ಅವಶ್ಯಕತೆ ಯಾರಿಗೂ ಬೇಕಿಲ್ಲ. ಜ್ಞಾನ ಪಡೆಯುವ ಶಿಕ್ಷಣ ಪಡೆಯುದಕ್ಕಿಂತ ಹಣ ಸಂಪಾದನೆ ಮತ್ತು ಸರ್ಕಾರಿ ನೌಕರಿ ಗಳಿಸುವ ಶಿಕ್ಷಣ ಕಲಿಯುವ ಗೀಳು ಹತ್ತಿರುವುದು ವಿಷಾದನೀಯ ಸಂಗತಿ ಎಂದರು.

Advertisement

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪರಸ್ಕಾರ ಮಾಡುವುದರ ಜತೆಗೆ ನಿವೃತ್ತ ನೌಕರರನ್ನು ಸನ್ಮಾನಿಸಿ, ಸಂಘದ ವತಿಯಿಂದ ಹೊರ ತಂದಿರುವ ನೂತನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಸಂಘದ ಅಧ್ಯಕ್ಷ ಎಸ್‌.ನಾಗರಾಜು ಮಾತನಾಡಿದರು.

ತಾಪಂ ಸದಸ್ಯೆ ರತ್ನಮ್ಮ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕಿ ಪ್ರೇಮ ಕುಳ್ಳಬೋರೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಉಮೇಶ್‌, ಸಿ.ಎಂ.ರವಿ, ರಾಮೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ.ನಾಗರಾಜು, ತಾಲೂಕು ಯುವ ಕಾಂಗ್ರೆಸ್‌ ಮುಖಂಡ ಕೆ.ಪಿ.ಜಗದೀಶ್‌, ಸಂಘದ ಪದಾಧಿಕಾರಿಗಳಾದ ಕುಮಾರ್‌, ಮಂಜೇಗೌಡ, ಮಹದೇವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next