ಚಿತ್ರದುರ್ಗ: ತಮ್ಮ ಮಕ್ಕಳು ಸಿಇಟಿ ಪರೀಕ್ಷೆ ಬರೆಯುವ ಕುರಿತು ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಆದರೆ, ಸರಿಯಾದ ಕ್ರಮದಲ್ಲಿ ಸಿಇಟಿ ಅರ್ಜಿಗಳನ್ನು ಭರ್ತಿ ಮಾಡುವ ವಿಧಾನ ತಿಳಿದುಕೊಂಡರೆ ಪೋಷಕರು ತಮ್ಮ ಆತಂಕ ನಿವಾರಿಸಿಕೊಳ್ಳಬಹುದು ಎಂದು ದಾವಣಗೆರೆ ಮತ್ತು ಚಿತ್ರದುರ್ಗ ಸಿಇಟಿ ವಿಭಾಗದ ಮುಖ್ಯಸ್ಥ ಜಿ.ಸಿ. ನಿರಂಜನ್ ತಿಳಿಸಿದರು.
ಇಲ್ಲಿನ ತರಾಸು ರಂಗಮಂದಿರದಲ್ಲಿ ಇನ್ಪೋಸಿಸ್ಟಮ್ ಸಂಸ್ಥೆ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಸಲ್ಲಿಕೆ ಗೊಂದಲ ನಿವಾರಣೆಗಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಅಂತರ್ಜಾಲ ಬಳಸುವ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಹಾಗಾಗಿ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸುಲಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ಕಾರಣ ನಿಗದಿತ ಸಮಯದಲ್ಲಿ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಸಬೇಕು. ಫೆ. 28 ಸಿಇಟಿಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ ಎಂದರು.
ಹಣ ಪಾವತಿಸಲು ಅರ್ಜಿ ಸಲ್ಲಿಸಿದ ನಂತರ ಹಣ ಪಾವತಿ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು ದಾಖಲೆ ಪರೀಶೀಲನೆ ಸಮಯದಲ್ಲಿ ಅರ್ಜಿ ಸಲ್ಲಿಸಿ ಪ್ರಾಶುಂಪಾಲರಿಂದ ದೃಢೀಕರಿಸಿದ ಅರ್ಜಿ, ಹಣ ಪಾವತಿ ರಸೀದಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಒಂದರಿಂದ 10 ನೇ ತರಗತಿಯವರೆಗಿನ ವ್ಯಾಸಂಗ ಪ್ರಮಾಣ ಪತ್ರ, ಕೃಷಿಯರಿದ್ದರೆ ಕೃಷಿಗೆ ಸಂಬಂಧಿಸಿದ ದಾಖಲೆ ಹಾಗೂ ತಹಶೀಲ್ದಾರರಿಂದ ಪಡೆದ ದಾಖಲೆಗಳನ್ನು ಒದಗಿಸಬೇಕಾಗಿರುತ್ತದೆ. ಅರ್ಜಿ ಹಾಕುವ ಸಂದರ್ಭದಲ್ಲಿ ನಿಮ್ಮ ಮೀಸಲಾತಿ ಹಾಗೂ ಆದಾಯ ಪ್ರಮಾಣಪತ್ರದ ಸಂಖ್ಯೆ ಸರಿಯಾಗಿದೆ ಎಂದು ಪರೀಕ್ಷಿಸಿಕೊಳ್ಳಬೇಕು ಎಂದರು.
ಹೈದರಾಬಾದ್-ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371 ಜೆ ಮೀಸಲಾತಿ ಪ್ರಮಾಣ ಪತ್ರ ಪಡೆದು ಅದರ ಸಂಖ್ಯೆ ನಮೂದಿಸಿ ಪ್ರಯೋಜನ ಪಡೆದುಕೊಳ್ಳಬೇಕು. ಅಂಗವಿಕಲರು, ಕ್ರೀಡಾಪಟುಗಳಿಗೆ ಎನ್‌ಸಿಸಿ ಬಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅನೂಕುಲವಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಅರ್ಜಿ ತುಂಬುವಾಗ ತಪ್ಪಾಗಿದ್ದರೆ ಸರಿಪಡಿಸಬೇಕು. ಅದಕ್ಕೆ ದಿನಾಂಕ 2019 ಮಾರ್ಚ್ 19ರಿಂದ 25ರವರೆಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳೂ ಹೆಚ್ಚಿನ ಮಾಹಿತಿಗೆ ವಾರಕೊಮ್ಮೆಯಾದರೂ ವೆಬ್‌ಸೈಟ್ ನೋಡುತ್ತಿರಬೇಕು ಎಂದರು.
ಪಿಯು ಡಿಡಿ ಎಂ.ಸಿ. ಶೋಭಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಿ ಅವರ ಮನೋಸ್ಥೆರ್ಯ ಹೆಚ್ಚು ಮಾಡಲು ಸಿಕ್ಕ ಅವಕಾಶ ಕೈಚೆಲ್ಲಿದ್ದಾರೆ. ಜಿಲ್ಲೆಯ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡದಿರುವುದು ಬೇಸರದ ಸಂಗತಿ ಎಂದರು.
ಪದವಿ ಶಿಕ್ಷಣ ವ್ಯವಸ್ಥೆ ದಿನೇ ದಿನೇ ಕುಸಿಯುತ್ತಿದ್ದು, ಕೊನೆಯ 4 ಅಥವಾ 5ನೇ ಸ್ಥಾನಕ್ಕೆ ತಲುಪಿದೆ ಎಂದು ಪೋಷಕರು ಪಿಯು ಡಿಡಿ ವಿರುದ್ಧ ಆಕ್ಷೇಪ ವ್ಯಕ್ತ ಪಡಿಸಿದರು. ಕಾರ್ಯಕ್ರಮ ಪ್ರಾಯೋಜಕ ಇನ್ಪೊಸಿಸ್ಟಮ್‌ನ ಮಧುಕುಮಾರ್, ಎಜುಮಿರ್ಚಿ ಮೀಡಿಯಾ ಸಂಸ್ಥೆಯ ಕಿರಣ್, ಮಿಥುನ್, ಐಶ್ವರ್ಯ ಗ್ರೂಪ್ ಮಾಲೀಕ ಕಿರಣ್ ಕುಮಾರ್ ಶೆಟ್ಟಿ, ದುರ್ಗದ ಸಿರಿ ಗ್ರೂಪ್‌ನ ಉಮೇಶ್, ಸುಧೀಂದ್ರ, ವರದರಾಜ್, ಕುಮಾರ್, ಜೆ.ಪ್ರವೀಣ್, ಉಮೇಶ್ ಇದ್ದರು.