Advertisement

ಬಾಳು ಬೆಳಗಿತು

06:53 PM Sep 03, 2019 | mahesh |

ಸ್ವಾವಲಂಬಿ ಜೀವನದ ಕನಸು ಯಾರಿಗೆ ಇರುವುದಿಲ್ಲ ಹೇಳಿ? ಸ್ವಂತ ಸಂಪಾದನೆಯಿಂದ ಬದುಕು ಕಟ್ಟಿಕೊಳ್ಳುವುದರಲ್ಲಿನ ಸುಖದ ಮಹತ್ವ ಎಲ್ಲರಿಗೂ ಗೊತ್ತೇ ಇದೆ. ಆ ದಿನ ಚಿತ್ರದುರ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡಿದ್ದ ಬಡ ಮಹಿಳೆಯರ ಕಣ್ಣಲ್ಲೂ ಆ ಕನಸಿತ್ತು. ಆ ಕನಸಿನ ಬೆನ್ನು ಹತ್ತಲು, ಸರ್ಕಾರದಿಂದ ಏನಾದರೂ ನೆರವು ಕೊಡಲು ಸಾಧ್ಯವೇ ಅಂತ ಅವರು ಜಿಲ್ಲಾಧಿಕಾರಿಗಳಿಗೂ ಬೇಡಿಕೆ ಇಟ್ಟರು. ಆ ಅಹವಾಲನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಕೇವಲ ಒಂದೂವರೆ ತಿಂಗಳಿನಲ್ಲಿಯೇ ಆ ಬಡ ಮಹಿಳೆಯರೆಲ್ಲರಿಗೂ ಒಳ್ಳೆಯ ಕಡೆ ನೌಕರಿ ಸಿಗುವಂತೆ ಮಾಡಿದ್ದಾರೆ.

Advertisement

ಕಷ್ಟಕ್ಕೆ ಸ್ಪಂದಿಸಿದ ಸಭೆ
ಜುಲೈ 9 ರಂದು ಚಿತ್ರದುರ್ಗ ಜಿಲ್ಲೆಯ ಕೆನ್ನೆಡಲು ಗ್ರಾಮದಲ್ಲಿ, ಜಿಲ್ಲಾಡಳಿತದ ವತಿಯಿಂದ ಜನಸ್ಪಂದನ ಸಭೆ ಏರ್ಪಡಿಸಲಾಗಿತ್ತು. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ಈ ಸಭೆ ನಡೆಸುತ್ತದೆ. ಆವತ್ತು ಕೆನ್ನೆಡಲು ಹಾಗೂ ಇಂಗಳದಾಳ್‌ ಗ್ರಾಮದ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಸದಸ್ಯೆಯರು, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಎದುರು ಮನವಿಯೊಂದನ್ನು ಇಟ್ಟರು. “ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡಿ, ಯಾರ ಹಂಗಿಲ್ಲದೆ ಬದುಕು ನಡೆಸಲು ಸಹಕರಿಸಿ’ ಎಂಬುದು ಅವರ ಬೇಡಿಕೆಯಾಗಿತ್ತು. ಮನೆಯವರ ಚಾಕರಿ ಮಾಡುವುದೇ ತಮಗೆ ತಿಳಿದಿರುವ ಕೆಲಸ ಎಂದೇ ಬಹುತೇಕ ಹಳ್ಳಿ ಮಹಿಳೆಯರು ತಿಳಿದಿರುವಾಗ, ತಮಗೂ ಸ್ವಾವಲಂಬಿ ಬದುಕು ನಡೆಸುವ ಆಸೆಯಿದೆ ಎಂದ ಮಹಿಳೆಯರನ್ನು ನೋಡಿ ಜಿಲ್ಲಾಧಿಕಾರಿಗಳಿಗೆ ಖುಷಿಯಾಯ್ತು.

ಟೈಲರಿಂಗ್‌ ತರಬೇತಿಗೆ ಸಜ್ಜು
ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲಾ ಪಂಚಾಯತ್‌, ಚಿತ್ರದುರ್ಗದ ಸರ್ಕಾರಿ ಪಾಲಿಟೆಕ್ನಿಕ್‌ನ ಸಿ.ಸಿ. ಟೆಕ್‌ ಉಪಘಟಕದ ನೆರವಿನಲ್ಲಿ ಸುಮಾರು 25 ಮಹಿಳೆಯರಿಗೆ ಒಂದು ತಿಂಗಳ ಅವಧಿಯ ಟೈಲರಿಂಗ್‌ ತರಬೇತಿ ಕೊಡಿಸಿದರು.

ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ
ಶಾಲಾ ಮಕ್ಕಳಂತೆ ಶಿಸ್ತುಬದ್ಧವಾಗಿ ತರಬೇತಿಗೆ ಹಾಜರಾಗುತ್ತಿದ್ದ ಮಹಿಳೆಯರು ವಿವಿಧ ಬಗೆಯಲ್ಲಿ, ನೂತನ ವಿನ್ಯಾಸದಲ್ಲಿ ಬಟ್ಟೆ ಹೊಲಿಯಲು ಕಲಿತರು. ಈ ಮಹಿಳೆಯರಿಗೆ ಉದ್ಯೋಗ ನೀಡುವ ಜವಾಬ್ದಾರಿಯನ್ನೂ ವಿನೋತ್‌ ಪ್ರಿಯಾ ಅವರೇ ಹೊತ್ತರು. ಬೆಂಗಳೂರಿನ ಪ್ರತಿಷ್ಠಿತ ಬಟ್ಟೆ ಉಡುಪು ತಯಾರಿಕಾ ಕಂಪನಿ ಅರವಿಂದ್‌ ಮಿಲ್ಸ್‌ನ ಚಿತ್ರದುರ್ಗ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಿ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿದರು.

ಮಹಿಳೆಯರ ಕೌಶಲ್ಯ ಪರೀಕ್ಷಿಸಿದ ಕಂಪನಿಯ ಅಧಿಕಾರಿಗಳು, ಅವರಿಗೆ ಉದ್ಯೋಗ ಕೊಡಲು ಒಪ್ಪಿಕೊಂಡರು. ಕಳೆದ ಆಗಸ್ಟ್‌ 24 ರಂದು, ಮಹಿಳೆಯರಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಉದ್ಯೋಗ ಪತ್ರ ಸಿಕ್ಕಿದೆ. ಈಗ ಅವರೆಲ್ಲ ಚಂದದ ಬಟ್ಟೆಗಳನ್ನು ಹೊಲಿದು, ಭೇಷ್‌ ಅನ್ನಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್‌, ಅರವಿಂದ್‌ ಮಿಲ್ಸ್‌ನ ಎಚ್‌ಆರ್‌ ಮುಖ್ಯಸ್ಥ ಮಹಾಂತೇಶ್‌, ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಹೇಮಂತರಾಜ್‌, ಸಿ.ಸಿ. ಟೆಕ್‌ನ ವ್ಯವಸ್ಥಾಪಕ ಶಿವಕುಮಾರಸ್ವಾಮಿ ಅವರಪು ಜಿಲ್ಲಾಧಿಕಾರಿಗಳ ಆಶಯ ಪೂರ್ಣಗೊಳಿಸಲು ಶ್ರಮಿಸಿದರು. ನಿಜವಾದ ಜನಸ್ಪಂದನ ಎಂದರೆ ಇದೇ ಅಲ್ಲವೆ?

Advertisement

ಮಹಿಳೆಯರು ಕೇವಲ ಮನೆಯ ಕೆಲಸಕ್ಕಷ್ಟೇ ಸೀಮಿತವಾಗಬಾರದು. ಇತರರನ್ನು ಅವಲಂಬಿಸದೆ, ಸ್ವಾವಲಂಬಿಯಾಗಿ ಬಾಳಲು ಮುಂದಾಗಬೇಕು. ಯಾವುದೇ ವೃತ್ತಿಯ ತರಬೇತಿ ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ, ಇತರೆ ಇಲಾಖೆಗಳ ಸಹಯೋಗದಲ್ಲಿ ಉದ್ಯಮಶೀಲತಾ ಕಾರ್ಯಕ್ರಮದಡಿ ಕ್ಲಸ್ಟರ್‌ ಮಟ್ಟದಲ್ಲಿ ತರಬೇತಿ ಕೊಡಿಸಲು ಜಿಲ್ಲಾಡಳಿತಗಳು ಸಿದ್ಧವಿದೆ. ಟೈಲರಿಂಗ್‌ ತರಬೇತಿಯನ್ನು ಶ್ರದ್ಧೆಯಿಂದ ಕಲಿತ ಈ ಮಹಿಳೆಯರು ಇತರರಿಗೂ ಮಾದರಿಯಾಗಲಿ.
– ವಿನೋತ್‌ ಪ್ರಿಯಾ, ಜಿಲ್ಲಾಧಿಕಾರಿ

-ತುಕಾರಾಂ ರಾವ್‌ ಬಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next