ಈಗಂತೂ, ಬುದ್ಧಿವಾದ ಹೇಳಲು ಎಲ್ಲರೂ ಕ್ಯೂನಲ್ಲಿ ನಿಂತಿರುತ್ತಾರೆ. ಅದನ್ನೆಲ್ಲ ಕೇಳಿ ಮನಸ್ಸು ಕೆಡಿಸಿಕೊಳ್ಳಬೇಡ. ಯಾವುದು ಸರಿ, ಯಾವುದು ತಪ್ಪು ಅಂತ ನೀನೇ ಒಮ್ಮೆ ಯೋಚಿಸು.
ಬಟ್ಟಲು ಕಂಗಳ ಹುಡುಗ, ಹೇಗಿದ್ದೀಯಾ? ಎದುರಿಗೆ ಇದ್ದಾಗ ತಲೆ ಚಿಟ್ಟು ಹಿಡಿಸುವವಳು, ಈಗ ಪತ್ರದಲ್ಲೂ ಹಿಂಸೆ ನೀಡುತ್ತಾಳಲ್ಲ ಎಂದು ಓದದೇ ಇರಬೇಡ. ನಿನಗೆ ಹೇಳದ ಹಲವು ಗುಟ್ಟುಗಳನ್ನು ಹೇಳಬೇಕಿದೆ ಇಲ್ಲಿ. ಮೊಗೆದಷ್ಟೂ ನೀಡುವ ನಿನ್ನ ಪ್ರೀತಿಗೆ, ನಾನು ಮೇಣದಬತ್ತಿಯಂತೆ ಅದೆಷ್ಟು ಬಾರಿ ಕರಗಿಲ್ಲ ಹೇಳು? ಇನ್‌ಫ್ಯಾಕ್ಟ್, ಎಲ್ಲಕ್ಕಿಂತ ಹೆಚ್ಚಾಗಿ, ನನ್ನೊಂದಿಗೆ ನಾನೇ ಆಹ್ಲಾದದಿಂದ ಮಾತನಾಡಿದ್ದು, ಉರಿವ ನನ್ನ ಹೊಟ್ಟೆಯನ್ನು ತಂಪಾಗಿಸಿ ಬದುಕಿಸಿಕೊಂಡದ್ದು, ಬದುಕಿನಲ್ಲಿ ಜೀವಂತಿಕೆ ಕಾಯ್ದುಕೊಂಡಿದ್ದು, ಉರಿವ ಬಿಸಿಲನ್ನು ತಣ್ಣಗಾಗಿಸುವ ಕಲೆ ಸಿದ್ಧಿಸಿಕೊಂಡಿದ್ದು- ನನಗೆ ಜೊತೆಯಾದದ್ದು ನಿನ್ನ ಸಹವಾಸದ ನಂತರವೇ… ಇಷ್ಟೆಲ್ಲ ಕಲಿಸಿದವನಿಗೆ, ಅತೀ ಅನಿಸುವಷ್ಟು ಮುಗ್ಧತೆ, ಸೋಮಾರಿತನ! ಅದರಲ್ಲಿ ನನಗೂ ನೀನು ವರ್ಗಾಯಿಸಿದ್ದು ಎರಡನೆಯದ್ದನ್ನ. ಈ ಎರಡನ್ನು ಬಿಟ್ಟು
ಹೊರಗೆ ಬಾ ಮಾರಾಯ.
ಅಮ್ಮಾ ತಾಯಿ ಮುಚ್ಚುಬಾಯಿ, ಅದೆಷ್ಟೇ ನೀನು ಈ ವಿಷಯಗಳ ಬಗ್ಗೆ ಉಪನ್ಯಾಸ ಮಾಡೋದು?- ಎಂದು ಇದಕ್ಕೂ ಸಿಟ್ಟಾಗಿ ಕೆರಳಬೇಡ್ವೊ. ಈಗಂತೂ, ಬುದ್ಧಿವಾದ ಹೇಳಲು ಎಲ್ಲರೂ ಕ್ಯೂನಲ್ಲಿ ನಿಂತಿರುತ್ತಾರೆ. ಅದನ್ನೆಲ್ಲ ಕೇಳಿ ಮನಸ್ಸು ಕೆಡಿಸಿಕೊಳ್ಳಬೇಡ. ಯಾವುದು ಸರಿ, ಯಾವುದು ತಪ್ಪು ಅಂತ ನೀನೇ ಒಮ್ಮೆ ಯೋಚಿಸು. ನಿನ್ನ ಆತಂಕವೇನೆಂದು ನನಗೆ ತಿಳಿದಿಲ್ಲವೆಂದು ಭಾವಿಸಬೇಡ. ನನಗೂ ಹಲವು ಆತಂಕಗಳಿವೆ ಮಾರಾಯ. ಇನ್ನಾದರೂ ನೀನು ಪ್ರತಿದಿನವೂ ಸಿಗುವ ನಕ್ಷತ್ರವಾಗದೆ, ಅಂಗೈಗೆ ಸಿಗುವ, ಅರ್ಥಾತ್ ಕಾಲಿಗೆ ತೊಡರಿಕೊಳ್ಳುವ ಮಗುವಾಗಬೇಡ. ಬದಲಿಗೆ, ಹುಣ್ಣಿಮೆಯಲ್ಲಿ ಸಿಗುವ, ಅಮವಾಸ್ಯೆಯಲ್ಲಿ ಕರಗುವ ಚಂದಿರನಾಗು. ಆ ಬೆಳದಿಂಗಳಲ್ಲಿ ನಾವು ನಿನ್ನಿಷ್ಟದ ಅಡುಗೆಯನ್ನ ಸವಿಯೋಣ. ಹೇಗಿ ದ್ದರೂ ಸಿಗ್ತಿಯಲ್ಲ ಬಿಡು, ಎಂಬ ನಿರಾಳತೆ ಯನ್ನು ತುಸುದಿನವಾದರೂ ಮುಂದೂಡು. ನಡುವೆ ಕೊಂಚ ಅಂತರವಿರಲಿ. ಇಂತಿ ನಿನ್ನವಳು…
ಪಲ್ಲವಿ