ಆಳಂದ: ಬೀದಿ ವ್ಯಾಪಾರದಲ್ಲೂ ನೈಪುಣ್ಯತೆಯಿಂದ ದಿನನಿತ್ಯದ ಆರ್ಥಿಕ ನಿರ್ವಹಣೆ ಅರಿತರೆ ಕುಟುಂಬದ ಆರ್ಥಿಕ ಹೊರೆ ತಗ್ಗಿಸಿ ನಿಶ್ಚಿಂತವಾಗಿ ಜೀವನ ಸಾಗಬಹುದು ಎಂದು ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಹೇಳಿದರು.
ಪುರಸಭೆ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಬೀದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯಗಳಿದ್ದು ಅವುಗಳ ಲಾಭ ಪಡೆಯಬೇಕು. ಬ್ಯಾಂಕ್ ಗಳಿಂದ ಸಾಲ ಪಡೆದಂತೆ ಸಕಾಲಕ್ಕೆ ಪಾವತಿಸಿದರೆ ಪುನಃ ಸಾಲ ನೀಡುತ್ತಾರೆ. ಬ್ಯಾಂಕಿನೊಂದಿಗೆ ಲೆವಾದೇವಿ ಸಂಬಂಧ ಉತ್ತಮವಾಗಿಟ್ಟುಕೊಂಡು ಆರ್ಥಿಕ ವೃದ್ಧಿಗೊಳಿಸಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸರ್ಕಾರದ ಅಧಿನಿಯಮವಿದ್ದು, ಈ ನಿಯಮ ತಿಳಿದುಕೊಳ್ಳಬೇಕು. ವ್ಯಾಪಾರಿಗಳ ಸಮಸ್ಯೆಗಳನ್ನು ಗಮನಕ್ಕೆ ತಂದರೆ ನಿವಾರಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುರೇಖಾ ಮಾತನಾಡಿ, ಸಾರ್ವಜನಿಕರಿಗೆ ಇರುವ ಇಲಾಖೆ ಯೋಜನೆಗಳ ಮಾಹಿತಿ ಒದಗಿಸಿ ಈ ಕುರಿತು ನೆರೆ ಹೊರೆಯವರಿಗೆ ತಿಳಿಹೇಳಿ ಎಂದರು. ಕೌಶಲ್ಯ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ರಾಜಕುಮಾರ ಗುತ್ತೇದಾರ ಆರ್ಥಿಕ ಉಳಿತಾಯ ಕುರಿತು ವಿವರಿಸಿದರು. 2014ರ ಮತ್ತು 2020ರ ಸರ್ಕಾರದ ಅಧಿನಿಯಮ ಕುರಿತು ಹಾಗೂ ಬೀದಿಯಲ್ಲಿ ವ್ಯಾಪಾರ ಕೈಗೊಳ್ಳುವುದು, ಪುರುಷ ವ್ಯಾಪಾರಿಗಳು ಬ್ಯಾಂಕ್ ಖಾತೆ ಹೊಂದಿ ಉಳಿತಾಯ ಮಾಡಿಕೊಳ್ಳಬೇಕು ಎಂದರು.
ಬೀದಿ ವ್ಯಾಪಾರಿ ಸಂಘದ ಜಾವೇದ ಭಾಗವಾನ, ಫಾರುಕ್ ಭಾಗವಾನ್, ಸೈಫಾನ್ ಭಾಗವಾನ, ಸಿದ್ಧಮ್ಮ ಬಸವರಾಜ, ಗುರುನಾಥ ಕಳಸೆ, ಬಿಸ್ಮಿಲಾ ಭಾಗವಾನ, ಸಾಬವ್ವ ಇದ್ದರು. ಭೀಮಾಶಂಕರ ಬೆಳಮ ಸ್ವಾಗತಿಸಿ, ವಂದಿಸಿದರು.