ಮೈಸೂರು: ಮುಂಬರುವ ದಿನಗಳಲ್ಲಿ ನೀರಿಗಾಗಿ ಯುದ್ಧವೇ ನಡೆಯಲಿದೆ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಆದರೆ, ಮಳೆಯೇ ಇಲ್ಲದೆ ಇಸ್ರೇಲ್‌ನವರು ಬೆಳೆ ಬೆಳೆಯುತ್ತಾರೆ. ಅಂತಹ ದೇಶವನ್ನು ನೋಡಿ ನಾವು ಪಾಠ ಕಲಿಯಬೇಕಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು. ಜಲ ಸಂಗಮಕ್ಕಾಗಿ ಹಕ್ಕೊತ್ತಾಯ ಸಮಿತಿ ಶುಕ್ರವಾರ ಏರ್ಪಡಿಸಿದ್ದ ನದಿ ಜೋಡಣೆಗಾಗಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯಕ್ಕೆ ಒಂದು ಲಕ್ಷ ಸಹಿ ಸಂಗ್ರಹದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರು ಮಾನವನಿಗೆ ಅತ್ಯಮೂಲ್ಯವಾದ ವಸ್ತು. ಆದರೆ, ಭಾರತೀಯರಿಗೆ ಅದರ ಮಹತ್ವವೇ ತಿಳಿದಿಲ್ಲ. ಪ್ರಧಾನಿ ನರೇಂದ್ರಮೋದಿಯವರು ಇಸ್ರೇಲ್ ಪ್ರವಾಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ, ಇಸ್ರೇಲ್ ನವರು ಮಳೆ ಇಲ್ಲದಿದ್ದರೂ ದ್ರಾಕ್ಷಿ ಬೆಳೆದು ರಫ್ತು ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಇದು ನೀರಿನ ಬಳಕೆಯಿಂದ ಸಾಧ್ಯವಾಗಿದ್ದು, ನಾವು ನಮ್ಮಲ್ಲಿನ ನೀರಿನ ಉಪಯೋಗದ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ತಾವೊಮ್ಮೆ ಮಹಾರಾಷ್ಟ್ರ ಪ್ರವಾಸ ಮಾಡಿದಾಗ ಅಲ್ಲಿನ ರೈತರ ಕಬ್ಬು ಬೆಳೆ ಇಳುವರಿ ನೋಡಿ ಆಶ್ಚರ್ಯಚಕಿತನಾದೆ, ಕೇವಲ ಒಂದು ಎಕರೆಯಲ್ಲಿ 82 ಟನ್ ಕಬ್ಬು ಬೆಳೆದಿದ್ದರು. ಅದಕ್ಕೆ ನೀರಿನ ಬಳಕೆಯೇ ಮುಖ್ಯ ಕಾರಣವಾಗಿದೆ. ನಮ್ಮ ದೇಶದ ರೈತರು ಸೇರಿದಂತೆ ಎಲ್ಲರೂ ನೀರಿನ ಬಳಕೆಯ ಕುರಿತು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ಪೂರ್ವಿಕರು ನೀರಿಗೆ ತಮ್ಮದೇ ಆದ ಮಹತ್ವ ನೀಡಿದ್ದಾರೆ. ಇಂದಿಗೂ ದೇಶದ ಕೋಟ್ಯಂತರ ಜನರ ಮನೆಗಳಲ್ಲಿ ನೀರಿಗೆ ಪೂಜೆ ಮಾಡುವುದನ್ನು ಕಾಣಬಹುದು. ಸಣ್ಣದೊಂದು ಕಲಶದಲ್ಲಿ ಪ್ರತಿನಿತ್ಯ ನೀರು ಇಟ್ಟು ಪೂಜಿಸುವ ಪರಂಪರೆ ಇದೆ. ಹೀಗಾಗಿ ನಮ್ಮಲ್ಲಿರುವ ನೀರನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶುದ್ಧ ಕುಡಿಯುವ ನೀರಿಗಾಗಿ ನಾವೆಲ್ಲ ಬಾಟಲಿ ನೀರು ಕೇಳುತ್ತೇವೆ. ಆದರೆ, ಅದಕ್ಕೆ ಕಾಲಮಿತಿ ಇದೆ. ಆದರೆ, ನಮ್ಮ ಪೂರ್ವಿಕರು ಅಂದು ಕಲಶದಲ್ಲಿ ಶೇಖರಿಸಿದ ನೀರು ಇಂದಿಗೂ ಶುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಜಾಗೃತರಾಗಬೇಕು. ಇತರರಿಗೆ ನೀರಿನ ಅರಿವು ಮೂಡಿಸಬೇಕು ಎಂದು ಪ್ರತಿಪಾದಿಸಿದರು. ನದಿಗಳ ಜೋಡಣೆಯಾಗಲಿ: ಮಳೆ ಬಾರದೆ ಕೆಲವು ಕಡೆ ಬರವಿದ್ದರೆ, ಮತ್ತೆ ಕೆಲವು ಕಡೆ ಮಳೆ ಬಂದು ಅನಾಹುತವಾಗಿದೆ. ಇಂತಹ ಸ್ಥಿತಿಯಲ್ಲಿ ರಾಷ್ಟ್ರದ ಒಳಿತಿಗೆ ನದಿಗಳ ಜೋಡಣೆಯಾಗಲಿ ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಕೆ.ರಘುರಾಮಯ್ಯ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಜಲ ಸಂಗಮಕ್ಕಾಗಿ ಹಕ್ಕೊತ್ತಾಯ ಸಮಿತಿ ಸಂಚಾಲಕಿ ಎಚ್.ಎಲ್.ಯಮುನಾ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಟಿ.ಎನ್.ದಾಸೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.