ಅಂಕೋಲಾ : ತಾಲೂಕಿನ ಶಗಡಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಬಲಿ ಪಡೆಯುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದು, ಗದ್ದೆಗಳ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಗಡಗೇರಿ, ಬಿಳಿಸಿರಿ, ಉಳುವರೆ, ಕಾಮಗೆ, ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. 5 ರಿಂದ 6 ಚಿರತೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆ. ರಾತ್ರಿ 6 ರಿಂದ 9 ಗಂಟೆ ಸಮಯದಲ್ಲಿ ಚಿರತೆಗಳು ಗ್ರಾಮದೊಳಗೆ ಸಂಚರಿಸುತ್ತವೆ.
ಕಳೆದೊಂದು ತಿಂಗಳಿನಿಂದ 25 ಕ್ಕೂ ಹೆಚ್ಚು ನಾಯಿ, 30 ಕ್ಕೂ ಹೆಚ್ಚು ಧನಕರುಗಳನ್ನು ಚಿರತೆಗಳು ಕೊಂದು ತಿಂದಿವೆ. ಚಿರತೆಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ :ಕೋವಿಡ್ ಪಾಸಿಟಿವ್ ಬಂದವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ : ಜಿ.ಜಗದೀಶ್ ಆದೇಶ
ಊಳುವರೆ ಗ್ರಾಮದಲ್ಲಿ ಬೈಕ್ ಮೇಲೆ ಸಂಜೆ 7 ಗಂಟೆಯ ಹೊತ್ತಿಗೆ ಮನೆಗೆ ತೆರಳುತ್ತಿರುವ ವ್ಯಕ್ತಿಯೊಬ್ಬರನ್ನು ಕಳೆದೆ ಚಿರತೆ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಗ್ರಾಮಸ್ಥರು ಸಂಜೆ 7 ಗಂಟೆಗೆ ಬಾಗಿಲು ಹಾಕಿಕೊಂಡು ಮನೆಯ ಒಳಗೆ ಸೇರಿಕೊಳ್ಳುತ್ತಿದ್ದಾರೆ. ಜನರ ಓಡಾಟ ಕಡಿಮೆ ಆಗುತ್ತಿರುವುದರಿಂದ ಚಿರತೆಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಚಿರತೆಗಳನ್ನು ಕೂಡಲೇ ಸೆರೆಹಿಡಿಯಬೇಕು.
– ದೇವರಾಯ ನಾಯಕ, ಸಗಡಗೇರಿ ನಿವಾಸಿ
ಸಗಡಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಚಿರತೆ ಬರುವ ವಿಷಯ ತಿಳಿದಿದೆ. ಈಗಾಗಲೇ ನಮ್ಮ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮದಲ್ಲಿ ನಿಗಾ ಇಡಲು ಸೂಚಿಸಲಾಗಿದೆ. ಜನ ವಸತಿ ಪ್ರದೇಶಕ್ಕು ಬರುತ್ತಿದೆ ಎಂದು ಜನ ಹೇಳುತ್ತಿರುವ ಹಿನ್ನೇಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಧನ ಕರುಗಳು ಚಿರತೆ ದಾಳಿಯಿಂದ ಮೃತ ಪಟ್ಟರೆ ಅವುಗಳಿಗೂ ಅರಣ್ಯ ಇಲಾಖೆಯಿಂದ ಮಹಜರು ನಡೆಸಿ ಮಾಲಕರಿಗೆ ಪರಿಹಾರವನ್ನು ನೀಡುತ್ತೇವೆ.
– ಮಂಜುನಾಥ ನಾವಿ, ಎಸಿಎಪ್ ಅಂಕೋಲಾ