Advertisement

ಅಧಿಕ ಫ‌ಲ ನೀಡುವ ಅಧಿಕ ಮಾಸ ?

11:18 PM Jul 17, 2023 | Team Udayavani |

ನಮ್ಮ ಪ್ರಾಚೀನರು ಕರಾರುವಕ್ಕಾಗಿ ಕಂಡುಹಿಡಿದ ಕಾಲಮಾಪನ ಒಂದು ಅದ್ಭುತವೇ ಸರಿ.
ಕಲ್ಪ, ಮನ್ವಂತರ, ಯುಗ, ಸಂವತ್ಸರ, ಅಯನಗಳು, ಋತುಗಳು, ಮಾಸಗಳು, ಪಕ್ಷ, ತಿಥಿ, ವಾರ, ದಿನ, ಘಂಟೆ, ನಿಮಿಷ, ಸೆಕುಂಡು ಮತ್ತದಕ್ಕೂ ಸೂಕ್ಷ್ಮವುಳ್ಳ ಕಾಲಮಾಪನವನ್ನು ನಿಖರವಾಗಿ ದಾಖಲಿಸಿದ್ದಾರೆ.

Advertisement

ಸೌರಮಾನ ವರ್ಷ ಮತ್ತು ಚಾಂದ್ರಮಾನ ವರ್ಷ, ಅದರಲ್ಲಿ ದಿವಸಗಳು, 11 ದಿನಗಳ ವ್ಯತ್ಯಾಸ ಇತ್ಯಾದಿಯನ್ನೂ ವಿವರಿಸಿದ್ದಾರೆ. 11 ದಿನಗಳ ವ್ಯತ್ಯಾಸವನ್ನು ಮೂರು ವರ್ಷಗಳಿಗೊಮ್ಮೆ ಒಂದು ತಿಂಗಳನ್ನು ಹೆಚ್ಚುವರಿಯಾಗಿ ಸೇರಿಸಿ ಸಮದೂಗಿಸುವ ಪ್ರಕ್ರಿಯೆಯೇ ಅಧಿಕಮಾಸ. ಐದು ವರ್ಷಗಳಿಗೊಮ್ಮೆ ಕ್ಷಯಮಾಸವೂ ಘಟಿಸುತ್ತದೆ.
ಜುಲೈ 18ರಂದು ಆಷಾಢ ಮುಗಿದು ಶ್ರಾವಣ ಮಾಸದ ಆರಂಭ. ಈ ಬಾರಿ ಶ್ರಾವಣ ಮಾಸದಲ್ಲಿ ಎರಡು ತಿಂಗಳು ಜುಲೈ 18ರಿಂದ ಆಗಸ್ಟ್‌ 16ರ ವರೆಗೆ, ಅಧಿಕ ಶ್ರಾವಣ ಮಾಸ, ಆಗಸ್ಟ್‌ 17ರಿಂದ ಸೆಪ್ಟಂಬರ್‌ 15ರ ವರೆಗೆ ನಿಜ ಶ್ರಾವಣ ಮಾಸ. ಸೂರ್ಯ ಸಂಕ್ರಮಣ ಇಲ್ಲದ ಮಾಸ ಅಧಿಕ ಮಾಸ, ಸಂಕ್ರಾಂತಿಯಿಲ್ಲದೆ ಯಾವ ತಿಂಗಳಲ್ಲಿ ಎರಡು ಅಮಾವಾಸ್ಯೆಗಳು ಬರುತ್ತವೆಯೋ ಆ ಮಾಸ ಅಧಿಕ ಮಾಸ.

ಸೌರ ಸಂವತ್ಸರ ಅಂದರೆ ಸೌರಮಾನ ಪದ್ಧತಿಯಂತೆ ವರ್ಷಕ್ಕೆ 365 ದಿನಗಳು. ಚಾಂದ್ರಮಾನ ವರ್ಷ 354 ದಿವಸಗಳು. ನಡುವೆ 11 ದಿನಗಳ ಅಂತರ ಅಥವಾ ವ್ಯತ್ಯಾಸ. ಒಂದು ವರ್ಷಕ್ಕೆ 11 ದಿನಗಳು, ಮರುವರ್ಷಕ್ಕೆ 11 ದಿನಗಳು ಒಟ್ಟು ಎರಡು ವರ್ಷಕ್ಕೆ 22 ದಿನಗಳು. ಎಂಟು ತಿಂಗಳಿಗೆ 7 1/2 ದಿವಸ. ಚಾಂದ್ರಮಾಸದಲ್ಲಿ ಒಟ್ಟು 29 1/2 ದಿವಸ ಕಡಿಮೆಯಾಯ್ತು. ಸೌರ ಚಾಂದ್ರ ಮಾಸಗಳ ದಿನ ವ್ಯತ್ಯಾಸವನ್ನು ಸರಿದೂಗಿಸಲು 29 1/2 ದಿವಸಗಳನ್ನು ಅಧಿಕ ಮಾಸ ಎಂದು ಪರಿಗಣಿಸಲಾಯಿತು. ವಾಸಿಷ್ಠ ಸಿದ್ಧಾಂತದಂತೆ ಪ್ರತೀ 32 ತಿಂಗಳು, 16 ದಿನ, 8 ಘಟಿಗೆ ಅಧಿಕಮಾಸ ಘಟಿಸುತ್ತದೆ. (1 ಘಟಿ ಅಂದರೆ 24 ಮಿನಿಟು) ಅಧಿಕ ಮಾಸವನ್ನು ಮಲಮಾಸ, ಅಧಿಕ ಮಾಸ, ಅಸಂಕ್ರಾಂತ ಮಾಸ, ಮಲಿಂಮುÉಚಮಾಸ (ಸೂರ್ಯಸಂಕ್ರಾಂತಿ ಇಲ್ಲದ ಮಾಸ), ನಪುಂಸಕ ಮಾಸ, ಪುರುಷೋತ್ತಮ ಮಾಸ ಮತ್ತು ಕಾಲಮಾಸ ಎಂದೂ ಕರೆಯುವುದಿದೆ.ಮುಂದಿನ ಅಧಿಕ ಮಾಸ 2026ರಲ್ಲಿ. ಮೇ 17ರಿಂದ ಜೂನ್‌ 15ರ ವರೆಗೆ. ಅಧಿಕ ಜೇಷ್ಠಮಾಸ. ಪ್ರಭವ ಸಂವತ್ಸರದಲ್ಲಿ!

33ರ ಸಂಖ್ಯೆಗೆ ಅಧಿಕ
ಮಾಸದಲ್ಲಿ ಮಹತ್ವ !
33ರ ಸಂಖ್ಯೆಗೆ ಅಧಿಕ ಮಾಸದಲ್ಲಿ ಮಹತ್ವವಿದೆ. ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸ ನಿಯಾಮಕ. ಅಧಿಕಮಾಸವನ್ನು ಪುರುಷೋತ್ತಮ ಮಾಸ ಎಂದೂ ಕರೆಯುವುದಿದೆ. 11 – ಏಕಾದಶ ರುದ್ರರು, 12 – ದ್ವಾದಶಾದಿತ್ಯರು, 8 – ಅಷ್ಟಾವಸುಗಳು, ಪ್ರಜಾಪತಿ ಮತ್ತು ವಷಟ್ಕಾರ ಹೀಗೆ 33 ಅಧಿಕಮಾಸದಲ್ಲಿ ದೇವತಗಳು. ಇವರೆಲ್ಲರ ಅಂತರ್ಯಾಮಿ ಆ ಭಗವಂತ, ಪುರುಷೋತ್ತಮ. ಅಧಿಕಮಾಸದಲ್ಲಿ ಮಾಡುವ ಎಲ್ಲ ಸತ್ಕರ್ಮಗಳೂ 33 ದೇವತೆಗಳು ಮತ್ತು ಅವರೊಳಗಿರುವ ಪುರುಷೋತ್ತಮನಿಗೂ ಸಲ್ಲುತ್ತದೆ. 33 ಜನರಿಗೆ ದಾನ ನೀಡಿದರೆ ವಿಶೇಷ ಫ‌ಲ. ಅಧಿಕಮಾಸದಲ್ಲಿ ಫ‌ಲ ದಾನ, ಅಪೂಪ ದಾನ, ಬಾಗಿನ ದಾನ, ತಾಂಬೂಲ ದಾನ, ನಕ್ತ ಬೋಜನ, ಏಕಭುಕ್ತ (ಬೆಳಗ್ಗೆ ಉಪವಾಸ, ರಾತ್ರಿ ಭೋಜನ), ವಿಷ್ಣುಪಂಚಕ ವ್ರತ‌, ದೀಪಸೇವೆ, ಅಖಂಡ ದೀಪ, ಐಚ್ಛಿತ ವ್ರತ, ಮಾಸಸ್ನಾನ ವಿಶೇಷ. ಸೀಮಂತ, ಮಾಸಿಕ ಶ್ರಾದ್ಧ, ಸಪಿಂಡೀಕರಣ ಎರಡೂ ಮಾಸಗಳಲ್ಲಿ ಮಾಡಬಹುದು. ಅಧಿಕಮಾಸದಲ್ಲಿ ದೇವತಾ ಪ್ರತಿಷ್ಠೆ, ಗೃಹಪ್ರವೇಶ, ಉಪಾಕರ್ಮ, ವಿವಾಹ, ಯಾತ್ರೆ, ಕೂಡದು. ವಾರ್ಷಿಕ ಶ್ರಾದ್ಧ ಕರ್ಮ ಅಧಿಕ ಮಾಸದಲ್ಲಿ ಬಂದರೆ ಅದೇ ದಿನದಂದು ಮಾಡಬಹುದೆಂದಿದೆ. ಏಕೆಂದರೆ ಶ್ರಾದ್ಧ ಅದೇ ಮಾಸ, ತಿಥಿ, ಪಕ್ಷದಲ್ಲಿ ನಡೆಯಬೇಕು. ಮೊದಲ ಬಾರಿಗೆ ತೀರ್ಥಯಾತ್ರೆಯನ್ನು ಅಧಿಕ ಮಾಸದಲ್ಲಿ ಮಾಡಬಾರದು.

30 ದಿನಗಳ ಒಂದು
ಮಾಸ ಅಧಿಕ ಹೇಗೆ?
ಎರಡು ವರ್ಷ 8 ತಿಂಗಳು, ಅಂದರೆ ಒಟ್ಟು 32 ತಿಂಗಳಿಗೆ 29 1/2 ದಿವಸಗಳ ವ್ಯತ್ಯಾಸವುಂಟಾಗುತ್ತದೆ. 30 ದಿನಕ್ಕೆ ಇನ್ನೂ 1/2 ದಿವಸ ಕಡಿಮೆಯಾಗುತ್ತದೆ. ಇದನ್ನು ಸರಿದೂಗಿಸುವುದು ಹೇಗೆ? 32 ತಿಂಗಳುಗಳ (ಎರಡು ವರ್ಷ 8 ತಿಂಗಳು) ಬಳಿಕ ಬರುವ 33ನೇ ತಿಂಗಳ 16 ದಿನಗಳು ಮತ್ತು ನಾಲ್ಕು ಘಳಿಗೆಗಳನ್ನು ಸೇರಿಸಿದರೆ 30 ದಿನಗಳ ಒಂದು ತಿಂಗಳು ಅಥವಾ ಮಾಸ, ಅಧಿಕ ಮಾಸವಾಗಿ ಸೇರ್ಪಡೆಯಾಗುತ್ತದೆ. ಅಧಿಕ ಮಾಸ 33 ತಿಂಗಳಿನಲ್ಲಿ ಬರುವುದು ಹೆಚ್ಚು. ಆದರೆ ನಿಯಮವೇನೂ ಇಲ್ಲ. 29, 30, 31, ಕೆಲವೊಮ್ಮೆ 35 ತಿಂಗಳಿಗೆ ಬರುವ ಸಾಧ್ಯತೆಗಳೂ ಇವೆ. 5 ವರ್ಷಕ್ಕೆರಡು ಅಧಿಕಮಾಸ ಬರುತ್ತದೆ ಎಂದು ಮಹಾಭಾರತದಲ್ಲಿ ಉಲ್ಲೇಖ. 30ನೇ ತಿಂಗಳಲ್ಲಿ ಬರುತ್ತದೆ ಎಂದು ಕಾಠಕಗೃಹ್ಯ ಸೂತ್ರದಲ್ಲಿದೆ.

Advertisement

-ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next