ಉಡುಪಿ: ಅಧಿಕ ಕೆಲಸದೊತ್ತಡದಿಂದ ಮುಕ್ತಿಗೊಳಿಸಲು, ಮೂಲಭೂತ ಸೌಲಭ್ಯ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಗೊಂಡಿದೆ.
ಜಿಲ್ಲೆಯ ಗ್ರಾಮಾಡಳಿತಾಧಿಕಾರಿಗಳು, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 174 ವಿಎ ಅವರು ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ, ಮಾತನಾಡಿ ಇ-ಆಫೀಸ್, ಭೂಮಿ. ಆಧಾರ್ ಸೀಡ್, ಲ್ಯಾಂಡ್‌ಬೀಟ್, ಹಕ್ಕುಪತ್ರ, ನವೋದಯ ಸಹಿತ 21 ಆ್ಯಪ್‌ಗ್ಳಲ್ಲಿ ಕೆಲಸ ಮಾಡುವ ಒತ್ತಡ ಇದೆ. ಮಾತೃ ಇಲಾಖೆ ಎಲ್ಲ ಕೆಲಸಗಳೊಂದಿಗೆ ಸರಕಾರದ ಆದೇಶದಂತೆ ಇತರೆ ಇಲಾಖೆ ಹಲವು ಕೆಲಸಗಳನ್ನು ನಿರ್ವಹಿಸುತ್ತ ಇದ್ದೇವೆ. 15ರಿಂದ 20 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸರಕಾರ ಮನವಿಗೆ ಇದೂವರೆಗೆ ಸ್ಪಂದಿಸಿಲ್ಲ. ಸುಸಜ್ಜಿತ ಕಚೇರಿ ಇಲ್ಲ, ಕಂಪ್ಯೂಟರ್ ಸೌಕರ್ಯವಿಲ್ಲ. ಇದಲ್ಲ ಸೌಕರ್ಯವನ್ನು ಅಗತ್ಯವಾಗಿ ಮಾಡಿಕೊಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಮಾಡಬೇಕು. ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಸರಕಾರ ಮನವಿಗೆ ಸ್ಪಂದಿಸದಿದ್ದರೇ ಸೋಮವಾರವೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದರು.
ಉಡುಪಿ ತಾಲೂಕು ಸಂಘದ ಉಪಾಧ್ಯಕ್ಷೆ ರೇಷ್ಮಾ ಮಾತನಾಡಿ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸ್ವಂತ ಮೊಬೈಲ್‌ನಲ್ಲಿ ವೈಯಕ್ತಿಕ ಡೇಟಾ ಬಳಸಿಕೊಂಡು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಎಲ್ಲ ವಿಷಯಗಳ ಪ್ರಗತಿಯನ್ನು ಒಂದೇ ಬಾರಿ ಕೇಳುತ್ತಾರೆ. ಇದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ, ಸೌಕರ್ಯಗಳ ಜೊತೆಗೆ ಕಾಲಾವಕಾಶ ನೀಡಬೇಕು ಎಂದರು.
ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ, ಪದಾಧಿಕಾರಿಗಳಾದ ಪ್ರಮೋದ್ ಎಸ್. ವಿದ್ಯಾಶ್ರೀ, ವಿಘ್ನೇಶ್ ಉಪಾಧ್ಯ, ನವೀನ್ ಕುಮಾರ್, ಆನಂದ್ ಡಿ. , ತಾಲೂಕು ಅಧ್ಯಕ್ಷರಾದ ಕಾರ್ತಿಕೇಯ ಭಟ್, ಡೇನಿಯಲ್, ರಾಘವೇಂದ್ರ, ಗಣೇಶ್ ಕುಲಾಲ್, ಪ್ರಶಾಂತ್, ಗಣೇಶ್, ಶಿವರಾಯ ಎಸ್. ಉಪಸ್ಥಿತರಿದ್ದರು.
ಗ್ರಾಮ ಆಡಳಿತ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಮುಷ್ಕರದಲ್ಲಿ ಭಾಗವಹಿಸಿರುವುದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಾಗಕ್ಕೆ ಸಂಬಂಧಿಸಿದ ಭೂ ಪರಿವರ್ತನೆ ಕೆಲಸಗಳು, ಜನನ ಮತ್ತು ಮರಣ ಪ್ರಮಾಣ ಪತ್ರ, ಪಿಂಚಣಿ ಸೇವೆ ಪಡೆಯಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಎರಡು ದಿನಗಳಲ್ಲಿಯೂ ಸೇವೆ ಸಿಗದ ಪರಿಣಾಮ ತುರ್ತು ದಾಖಲಾತಿ, ಕಂದಾಯ ಸೇವೆ ವ್ಯತ್ಯಯದಿಂದ ಜನ ಸಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಸರಕಾರ ಶೀಘ್ರ ವಿಎ ಅವರ ಮನವಿಗೆ ಸ್ಪಂದಿಸಿ ಜನ ಸಮಾನ್ಯರ ಕೆಲಸಕ್ಕೆ ಅಡ್ಡಿಯಾಗದಂತೆ ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕಚೇರಿಯಲ್ಲಿಯೂ ನೇಮಕಗೊಂಡ ವಿಎಗಳು ಮುಷ್ಕರದಲ್ಲಿ ಭಾಗವಹಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲೂಕು ಕಚೇರಿ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಿದೆ.