ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ಪಂದ್ಯಾವಳಿ ರದ್ದಾದರೆ ತಾನು 8ನೇ ಒಲಿಂಪಿಕ್ಸ್‌ಗಾಗಿ ಮತ್ತೆ 4ವರ್ಷ ಕಾಲ ಕಾಯುವುದಿಲ್ಲ ಎಂದು ಭಾರತದ ಟೆನಿಸ್ ಸ್ಟಾರ್ ಲಿಯಾಂಡರ್ ಪೇಸ್ ಹೇಳಿದ್ದಾರೆ.
1992ರಿಂದ ಮೊದಲ್ಗೊಂಡು 2016ರ ವರೆಗಿನ ಎಲ್ಲ 7 ಒಲಿಂಪಿಕ್ಸ್ ನಲ್ಲೂ ಪೇಸ್ ಸ್ಪರ್ಧಿ ಸುತ್ತಲೇ ಬಂದಿದ್ದಾರೆ. ಸರ್ವಾಧಿಕ 7 ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟು ಹಾಗೂ ವಿಶ್ವದ ಏಕಮಾತ್ರ ಟೆನಿಸಿಗನೆಂಬ ದಾಖಲೆ ಪೇಸ್ ಅವರದು.
ಟೋಕಿಯೋವೇ ತನ್ನ ಕೊನೆಯ ಒಲಿಂಪಿಕ್ಸ್ ಎಂಬುದಾಗಿ ಅವರು ಕಳೆದ ವರ್ಷವೇ ಘೋಷಿಸಿದ್ದಾರೆ.
ಟಿನ್ನಿಸ್ ಇತಿಹಾಸದಲ್ಲಿ ಡಬಲ್ಸ್ ವಿಭಾಗದ ಅತ್ಯುತ್ತಮ ಆಟಗಾರರ ಸಾಲಿಗೆ ಲಿಯಾಂಡರ್ ಪೇಸ್ ಸೇರುತ್ತಾರೆ. 18 ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಪೇಸ್ ಗೆದ್ದಿದ್ದಾರೆ. ಅದರಲ್ಲಿ ಎಂಟು ಪ್ರಶಸ್ತಿಗಳು ಡಬಲ್ಸ್ ನಿಂದ ಬಂದಿದ್ದರೆ, ಉಳಿದ ಹತ್ತು ಮಿಕ್ಸೆಡ್ ಡಬಲ್ಸ್ ನಲ್ಲಿ ಬಂದಿದೆ.
ಭಾರತದ ಟೆನ್ನಿಸ್ ತಾರೆಯರಾದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೊತೆ ಪೇಸ್ ಹಲವಾರು ಕೂಟಗಳಲ್ಲಿ ಭಾಗವಹಿಸಿದ್ದಾರೆ. ಮಿಕ್ಸೆಡ್ ಡಬಲ್ಸ್ ನಲ್ಲಿ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜೊತೆಗೆ ಹಲವು ಕೂಟಗಳಲ್ಲಿ ಯಶಸ್ಸು ಕಂಡಿದ್ದಾರೆ.