Advertisement

ಅಡಿಕೆಗೆ ಎಲೆಚುಕ್ಕೆ ರೋಗ ಬಾಧೆ: ಪರಿಹಾರಕ್ಕಾಗಿ ಕೇಂದ್ರಕ್ಕೆ 225 ಕೋ.ರೂ. ಪ್ರಸ್ತಾವನೆ

01:23 AM Jan 02, 2025 | Team Udayavani |

ಉಡುಪಿ: ಅಡಿಕೆ ಕೃಷಿಕರನ್ನು ಕಂಗೆಡಿಸಿರುವ ಎಲೆಚುಕ್ಕೆ/ಹಳದಿ ಎಲೆ ರೋಗ ತಡೆಗೆ ಸಂಬಂಧಿಸಿ ಸುಮಾರು 54 ಸಾವಿರ ಹೆಕ್ಟೇರ್‌ನಲ್ಲಿ ಗಿಡ ಸಂರಕ್ಷಣೆಗಾಗಿ 225 ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ)ಯ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಅದು ಪರಿಶೀಲನೆ ಹಂತ ದಲ್ಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ತೋಟಗಾರಿಕೆ ಇಲಾಖೆ ಹಾಗೂ ಕೃಷಿಕರ ಹಂತದಲ್ಲಿ ಹಲವು ಕ್ರಮ ಗಳು ತೆಗೆದುಕೊಂಡಾಗ್ಯೂ ಪ್ರಸ್ತುತ ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದ ಅಡಿಕೆ ಬೆಳೆಯುವ ಪ್ರಮುಖ 7 ಜಿಲ್ಲೆಗಳ 53,997 ಹೆಕ್ಟೇರ್‌ ಪ್ರದೇಶ ದಲ್ಲಿ ರೋಗ ಕಾಣಿಸಿಕೊಂಡಿರುವುದು ಬೆಳೆಗಾರರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ರೋಗ ಬಾಧಿತ ಗಿಡದ ಎಲೆ ಸಂಪೂರ್ಣ ಒಣಗಿ ಇಳುವರಿ ಕುಸಿಯುತ್ತದೆ.

ಸಮಿತಿಯ ಶಿಫಾರಸಿನಂತೆ ಫೈಟೋಸ್ಯಾನಿಟರಿ (ರೋಗ ಬಾಧಿತ ಸಸ್ಯದ ಭಾಗವನ್ನು ತೆಗೆದು ಮತ್ತು ನಾಶಪಡಿಸುವುದು) ಕ್ರಮಗಳ ಅಳವಡಿಕೆ, ಪೋಷಕಾಂಶ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಬೆಳೆಗಾರರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.

ತಜ್ಞರ ಸಮಿತಿ ಭೇಟಿ
ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರ ನೇಮಿಸಿರುವ ವೈಜ್ಞಾನಿಕ ತಜ್ಞರನ್ನು ಒಳಗೊಂಡ ಸಮಿತಿಯು ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದ.ಕ. ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯ ಪರಿಹಾರಕ್ಕೆ ಕೆಲವು ಶಿಫಾರಸುಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.

ಕಳೆದ ವರ್ಷ ಸಹಾಯಧನ
2023-24ನೇ ಸಾಲಿನಲ್ಲಿ ನಷ್ಟ ಅನುಭವಿಸಿದ ಪ್ರತೀ ರೈತರಿಗೆ ಪ್ರತೀ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ ಗರಿಷ್ಠ 1.5 ಹೆಕ್ಟೇರ್‌ ವರೆಗೆ 6 ಸಾವಿರ ರೂ.ಗಳ ಸಸ್ಯ ಸಂರಕ್ಷಣ ಔಷಧಗಳನ್ನು 6,250 ಹೆಕ್ಟೇರ್‌ ಪ್ರದೇಶಕ್ಕೆ ವಿತರಿಸಲಾಗಿದೆ. 12,300 ರೈತರಿಗೆ 2.50 ಕೋ.ರೂ. ಸಹಾಯಧನ ನೀಡಲಾಗಿದೆ.

Advertisement

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು
ಎಲೆಚುಕ್ಕೆ ರೋಗ ಬಾಧೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಿದ್ದರೆ ಉಡುಪಿಯಲ್ಲಿ ಅತೀ ಕಡಿಮೆಯಿದೆ. ಚಿಕ್ಕಮಗಳೂರು – 28,788 ಹೆಕ್ಟೇರ್‌, ಶಿವಮೊಗ್ಗ – 11,950 ಹೆಕ್ಟೇರ್‌, ಉ.ಕ. ಜಿಲ್ಲೆಯ 8,604 ಹೆಕ್ಟೇರ್‌, ದ.ಕ. ಜಿಲ್ಲೆಯ 3,623 ಹೆಕ್ಟೇರ್‌, ಹಾಸನದ 360 ಹೆಕ್ಟೇರ್‌, ಉಡುಪಿಯ 123 ಹೆಕ್ಟೇರ್‌ ಹಾಗೂ ಕೊಡಗಿನ 529 ಹೆಕ್ಟೇರ್‌ನಲ್ಲಿ ರೋಗ ಕಾಣಿಸಿಕೊಂಡಿದೆ. ಕಳೆದ ಬಾರಿಯೂ ಉಡುಪಿಯ 100 ಹೆಕ್ಟೇರ್‌ ಹಾಗೂ ದ.ಕ. ಜಿಲ್ಲೆಯ 3 ಸಾವಿರ ಹೆಕ್ಟೇರ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳ ಲಾಗುತ್ತಿದೆ. ತಜ್ಞರ ಸಮಿತಿಯ ಶಿಫಾರಸಿನಂತೆ ರೈತರಿಗೆ ಸಸ್ಯ ಸಂರಕ್ಷಣೆ ಔಷಧ ವಿತರಿಸುತ್ತಿ ದ್ದೇವೆ. ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಎಸ್‌.ಎಸ್‌. ಮಲ್ಲಿಕಾರ್ಜುನ್‌,
ತೋಟಗಾರಿಕೆ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next