Advertisement
ಮುಗುಳ್ನಕ್ಕು ಮಾತು ಬದಲಿಸಿದೆ.. ಮಾರನೆಯ ದಿನವೇ ಕಾಕತಾಳೀಯವೇನೋ ಎನ್ನುವಂತೆ ಮತ್ತೆ ಮನೆಗೆ ಬಂದರು ಅಂಕಲ್. ಜೊತೆಗೆ ಮಗನೂ ಇದ್ದ. ಅಪ್ಪನೊಂದಿಗೆ ಮಾತಾಡುತ್ತಾ, ಮರಕ್ಕೆ ಗುದ್ದಿ ಅವರ ಮಗ ಹಾಳು ಮಾಡಿದ್ದ ಬೈಕಿನ ಫೋಟೋ ತೋರಿಸುತ್ತಿದ್ದರು. ಅದನ್ನು ನೋಡಿದ ನಾನು, “ಅಂಕಲ್, ಬೈಕು ಇಷ್ಟು ಹಾಳಾಗಿದೆ. ಮಾರಿಬಿಡಬಾರದೆ? ಸಂಪೂರ್ಣ ಜಜ್ಜಿಕೊಂಡಿದೆಯಲ್ಲಾ’ ಅಂದೆ. “ಅದನ್ನು ಮಾರೋದೇ?…’ ಅಂತ ಸ್ವಲ್ಪ ಧ್ವನಿ ಏರಿಸಿದರು. “ಅದು ನನ್ನ ಮೊದಲ ಗಾಡಿ. ಅದನ್ನು ಬೀದಿಗಿಳಿಸಲು ಪಟ್ಟ ಪಾಡು, ಅದರೊಂದಿಗೆ ಸಾಗಿದ ಆಯಸ್ಸಿನ ಭಾಗ, ಕಳೆದಿರುವ ಅಸಂಖ್ಯ ಕ್ಷಣಗಳ ಕುರುಹಾಗಿ ಅದು ಕೊನೆಯವರೆಗೂ ನನ್ನ ಜೊತೆಗಿರುತ್ತದೆ’ ಎಂದರು.
Related Articles
Advertisement
ಹೈಸ್ಕೂಲ್‌ನಲ್ಲಿದ್ದಾಗ ನಮ್ಮ ಮಾಸ್ತರರೊಬ್ಬರು ಅವರ ಡ್ರಾಯರ್‌ನಲ್ಲಿ ಅತ್ಯಂತ ಜತನದಿಂದ ನವಿಲುಗರಿಯೊಂದನ್ನು ಕಾಯ್ದಕೊಂಡಿದ್ದರು. ಒಂದೆರಡು ಬಾರಿ ಸ್ಟಾಫ್ರೂಮ್‌ಗೆ ಹೋದಾಗ ಅವರು ಮಾರ್ದವವಾಗಿ ಅದನ್ನು ದಿಟ್ಟಿಸುತ್ತಾ ಕುಳಿತಿದ್ದ ನೆನಪು. “ನಿಮ್ಮ ನವಿಲುಗರಿ ಮರಿ ಹಾಕಲಿಲ್ವಾ, ಸರ್?’ ಅಂತ ನಾವು ಛೇಡಿಸಿದ್ದೆವು. ಆಗ ಅವರು ಅವೆಷ್ಟೋ ನೆನಪುಗಳನ್ನು ಒಂದೇ ಕಿರುನಗೆಯಲ್ಲಿ ನಮ್ಮತ್ತ ಸೂಸುತ್ತಿದ್ದರು. ಅವರ ನವಿಲುಗರಿ ಮರಿ ಹಾಕದಿದ್ದರೂ, ಅದರಿಂದ ಜಿನುಗುವ ನೆನಪುಗಳು ಅವರನ್ನು ಆಗಾಗ್ಗೆ ಹಗುರಾಗಿಸುತ್ತಿದ್ದುದು ಮಾತ್ರ ನಿಜ.
ಕರವಸ್ತ್ರ, ಉಂಗುರ, ನವಿಲುಗರಿ, ಬರೀ ವಸ್ತುಗಳಾಗಿರುವುದಿಲ್ಲ. ನೆನಪುಗಳ ಬಿಕ್ಕಳಿಕೆ, ಹರಿದ ಕಣ್ಣೀರು, ಆಡಿದ ಮಾತು, ಜಗಳ ಮರೆತು ನಕ್ಕಿದ್ದು…ಹೀಗೆ ಅದೆಷ್ಟೋ ಭಾವಗಳ ಬೆಚ್ಚನೆಯ ಖಜಾನೆಯದು. ಭಾರತ ಎಷ್ಟೇ ಮುಂದುವರಿದಿದ್ದರೂ, ಈಗಲೂ ಜನ ಬರುವುದು ಹಂಪಿ-ಬೇಲೂರು-ಹಳೇಬೀಡು, ಅಜಂತಾ, ಎಲ್ಲೋರಾದಂಥ ಗತವೈಭವಗಳನ್ನು ನೋಡಲೆಂದೇ. ಪೂರ್ವ-ಪಶ್ಚಿಮ ಜರ್ಮನಿಗಳನ್ನು ಬೇರ್ಪಡಿಸಿದ 155 ಕಿ.ಮೀ ಉದ್ದದ ಬರ್ಲಿನ್ ಗೋಡೆ 1999ರಲ್ಲಿ ನೆಲಸಮವಾಯಿತು. ಪ್ರವಾಸಿಗರು ಆ ಗೋಡೆಯ ತುಣುಕುಗಳನ್ನು ತಮ್ಮೊಡನೆ ಒಯ್ಯುತ್ತಾರೆ. ಆ ಅವಶೇಷಗಳಿಗೆ ಇಂದು ಭಾರೀ ಬೆಲೆ ಇದೆ. ಈ ಕಲ್ಲು-ಕಬ್ಬಿಣದ ಅವಶೇಷಗಳು ಇತಿಹಾಸದ ತುಣುಕುಗಳೇ ಮತ್ತು ಬರ್ಲಿನ್ ಮಹಾಗೋಡೆಯ ಭಾಗಗಳೇ..
ಈ ನವಿಲುಗರಿ, ಒಣಗಿದ ಕೆಂಪು ಗುಲಾಬಿ, ಪೆಂಡೆಂಟ್, ಕೀ ಚೈನ್ ಕೂಡಾ ನಮ್ಮ ಬದುಕಿನ ಹಂಪಿ-ಬರ್ಲಿನ್ ಗೋಡೆಗಳು… ಅಂಕಲ್ ಮತ್ತವರ ಮಗ ಹೊರಟು ನಿಂತರು. ಹೋಗುವಾಗ ಅವರ ಮಗ ಆ ಮುರಿದ ಸ್ಕೂಟಿಯ ಮೇಲಿದ್ದ ‘mere humsafar’ ಎಂಬ ಸಾಲಿನ ಫೋಟೊ ತೆಗೆದುಕೊಂಡ. ಅಂಕಲ್, ಅವರ ಜಜ್ಜಿಹೋದ ಬೈಕ್ ಮೇಲೆ ನೆನಪುಗಳ ಪಯಣ ಸಾಗಿಸುತ್ತಿದ್ದಂತೆ ಕಂಡರು…