Advertisement
ಪಕ್ಷದ ರಾಜ್ಯ ನಾಯಕತ್ವ ಕುರಿತು ಅಭಿಪ್ರಾಯ ಪಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದ್ದು, ಮಂಗಳವಾರ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅಭಿಪ್ರಾಯ ತಿಳಿಸಲಿದ್ದಾರೆ. ಸಿದ್ದರಾಮಯ್ಯ ಅವರ ದೆಹಲಿ ಭೇಟಿಯ ನಡುವೆಯೇ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ನಡೆ ನೋಡಿ ಪರ್ಯಾಯ ಆಯ್ಕೆಯ ಬಗ್ಗೆಯೂ ಹೈಕಮಾಂಡ್ ಗಮನಕ್ಕೆ ತರಲು ಆಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಆದರೆ, ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಈಗಾಗಲೇ ಎಂಟು ವರ್ಷ ಕೆಲಸ ಮಾಡಿದ್ದು, ಈಗ ಆರೋಗ್ಯದ ಸಮಸ್ಯೆಯಿಂದ ಅಧ್ಯಕ್ಷರಾಗಿ ರಾಜ್ಯ ಪ್ರವಾಸ ಮಾಡಲು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಸೂಚಿಸಿದವರ ಕೈಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೋಗಬಾರದು ಎನ್ನುವ ಕಾರಣಕ್ಕೆ ಮೂಲ ಕಾಂಗ್ರೆಸ್ಸಿಗರು ಡಿ.ಕೆ.ಶಿವಕುಮಾರ್ ನೇಮಕಕ್ಕೆ ಹೈಕ ಮಾಂಡ್ ಮೇಲೆ ಒತ್ತಡ ಹೇರಿದ್ದು, ಒಂದು ವೇಳೆ, ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಕೆಯ ನಂತ ರವೂ ಡಿ.ಕೆ.ಶಿವಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿ ಸಿದರೆ, ಸಿದ್ದರಾಮಯ್ಯ ಆಪ್ತರಿಗೆ ಮಾತ್ರ ಸ್ಥಾನ ದೊರಕಿಸಿ ಕೊಡದಂತೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಖರ್ಗೆ ಅಂತಿಮ ಅಸ್ತ್ರ: ಮೂಲ ಕಾಂಗ್ರೆಸ್ ನಾಯಕರು ಹೇಗಾದರೂ ಮಾಡಿ ಕೆಪಿಸಿಸಿಯನ್ನು ಸಿದ್ದರಾಮಯ್ಯ ಹಿಡಿತದಿಂದ ತಪ್ಪಿಸಲು ಶತ ಪ್ರಯತ್ನ ನಡೆಸಿದ್ದು, ಡಿ.ಕೆ.ಶಿವಕುಮಾರ್‌ಗೆ ತಪ್ಪಿದರೆ, ಪಕ್ಷದ ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆಯವರನ್ನು ಕೆಪಿಸಿಸಿ ಅಧ್ಯಕ್ಷರನಾಗಿ ನೇಮಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಖರ್ಗೆಯವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೆ, ಎರಡು ಪ್ರಮುಖ ಹುದ್ದೆಗಳು ಇಬ್ಬರೂ ನಾಯಕರಿಗೆ ದೊರೆತಂತಾಗುತ್ತದೆ. ಆ ಮೂಲಕ ಪಕ್ಷದಲ್ಲಿ ಇಬ್ಬರೂ ಸಮಾನ ಶಕ್ತಿಯ ನಾಯಕರು ಪಕ್ಷವನ್ನು ಸಂಘಟಿಸುವುದರ ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಅನುಕೂಲವಾಗುತ್ತದೆ ಎನ್ನುವ ವಾದ ಮಂಡನೆಗೆ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯ ರಾಜಕಾರಣಕ್ಕೆ ವಾಪಸ್ ಕಳುಹಿಸಲು ಕಾಂಗ್ರೆಸ್ ಹೈಕಮಾಂಡ್ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಸಿದ್ದುಗೆ ವಿರೋಧಿಸಿದ್ದೇ ಡಿಕೆಗೆ ಮುಳುವಾಯ್ತಾ?: ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದಾಗ ಬಹುತೇಕ ಮೂಲ ಕಾಂಗ್ರೆಸ್ ನಾಯಕರು ಖುಷಿ ಪಟ್ಟಿದ್ದೇ ಹೆಚ್ಚು. ಅವರ ರಾಜೀನಾಮೆಯಲ್ಲಿ ಆದಷ್ಟು ಬೇಗ ಅಂಗೀಕರಿಸುವಂತೆ ಕೆಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡವನ್ನೂ ಹೇರಿದ್ದರು ಎನ್ನಲಾಗುತ್ತಿದೆ.
ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಮೂಲಕ ಸಿದ್ದರಾಮಯ್ಯ ಅವರನ್ನು ಎರಡೂ ಹುದ್ದೆಗಳಿಂದ ಬಿಡುಗಡೆಗೊಳಿಸಬೇಕು ಎಂಬ ಅಭಿಪ್ರಾಯದ ಪರವಾಗಿ ಹೈಕಮಾಂಡ್ ಮುಂದೆ ಸಲಹೆ ನೀಡಿದ್ದರು ಎನ್ನಲಾಗುತ್ತಿದೆ. ಆರಂಭದಲ್ಲಿ ಡಿ.ಕೆ.ಶಿವಕುಮಾರ್‌ರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸದ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಡಿ.ಕೆ.ಶಿವಕುಮಾರ್ ತಮ್ಮ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾದ ನಂತರ ತಮ್ಮ ಆಪ್ತರಾದ ಎಂ.ಬಿ.ಪಾಟೀಲರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂದಿಟ್ಟು, ಡಿ.ಕೆ.ಶಿವಕುಮಾರ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿ ದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಇಂದು ಸೋನಿಯಾ-ಸಿದ್ದು ಭೇಟಿ: ಪಕ್ಷದ ರಾಜ್ಯ ನಾಯಕತ್ವದ ಕುರಿತು ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಯಾರಿಗೆ ನೀಡಬೇಕು, ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ವಿಭಾಗವಾರು ಮೂರು ಕಾರ್ಯಾಧ್ಯಕ್ಷರ ನೇಮಕ ಹಾಗೂ ವಿಧಾನ ಮಂಡಲದ ಎರಡೂ ಸದನಗಳ ವಿರೋಧ ಪಕ್ಷದ ಉಪ ನಾಯಕ ಹಾಗೂ ಮುಖ್ಯ ಸಚೇತಕರ ಹುದ್ದೆಗಳ ನೇಮಕದ ಬಗ್ಗೆಯೂ ಸಿದ್ದರಾಮಯ್ಯ ಸೋನಿಯಾ ಗಾಂಧಿ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿ, ಮಂಗಳವಾರ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಅವರ ಭೇಟಿಯ ನಂತರ ಡಿ.ಕೆ.ಶಿವಕುಮಾರ್ ಕೂಡ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸೋನಿಯಾ ಗಾಂಧಿಯವರು ಜ.15 ರ ನಂತರ ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಅದಕ್ಕೂ ಮೊದಲೇ ರಾಜ್ಯ ಕಾಂಗ್ರೆಸ್ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
* ಶಂಕರ ಪಾಗೋಜಿ