Advertisement
ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸುತ್ತಿರುವುದರಿಂದ ರಾಮನಗರ ವಿಧಾನಸಭೆ, ಮಂಡ್ಯ ಲೋಕಸಭೆ ಬಹುತೇಕ ಜೆಡಿಎಸ್‌ಗೆ ಸಿಗಲಿದ್ದು, ರಾಮನಗರದ ಉಸ್ತುವಾರಿ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಮಂಡ್ಯ ಕ್ಷೇತ್ರದ ಉಸ್ತುವಾರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕಾಂಗ್ರೆಸ್ ಜಮಖಂಡಿ, ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಜಮಖಂಡಿಗೆ ಸಿದ್ದರಾಮಯ್ಯ, ಬಳ್ಳಾರಿಗೆ ಡಿ.ಕೆ.ಶಿವಕುಮಾರ್, ಶಿವಮೊಗ್ಗಕ್ಕೆ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯನ್ನೂ ಎದುರಿಸಲು ನಿರ್ಧರಿಸಿರುವುದರಿಂದ ಮೂರೂ ಕ್ಷೇತ್ರಗಳ ಉಪ ಚುನಾವಣೆ ಒಂದು ರೀತಿಯಲ್ಲಿ ಟೆಸ್ಟ್ ಇದ್ದಂತೆ. ಈ ಚುನಾವಣೆಯ ಫಲಿತಾಂಶದಿಂದ ಮತದಾರರ “ಪಲ್ಸ್’ ಏನಿರಬಹುದು ಎಂಬುದು ಗೊತ್ತಾಗಲಿದೆ. ಬಿಜೆಪಿಯ ಕೇಂದ್ರ ನಾಯಕರು ಸಹ ಇಂಥದ್ದೊಂದು “ಪಲ್ಸ್’ ತಿಳಿಯುವ ಸಲುವಾಗಿಯೇ ನಾಲ್ಕು ತಿಂಗಳ ಅವಧಿ ಇದ್ದರೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಆಗಲಿ ಎಂದು ಬಯಸಿದ್ದಾರೆ. ಈ ಚುನಾವಣೆಯ ಫಲಿತಾಂಶ ನೋಡಿಕೊಂಡು ಬಿಜೆಪಿ 2019ರ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಿಗೆ ತಂತ್ರಗಾರಿಕೆ ರೂಪಿಸಲಿದೆ ಎಂದು ಹೇಳಲಾಗುತ್ತಿದೆ.
Related Articles
Advertisement
ಪ್ರಚಾರಕ್ಕೆ ತಂಡ ರಚನೆಉಪ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಪ್ರಚಾರಕ್ಕಾಗಿ ದೇವೇಗೌಡ, ಕುಮಾರಸ್ವಾಮಿ, ಎಚ್.ವಿಶ್ವನಾಥ್, ಮಧು ಬಂಗಾರಪ್ಪ, ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ ಅವರನ್ನೊಳಗೊಂಡ ತಂಡ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ದಿನೇಶ್‌ಗುಂಡೂರಾವ್, ಈಶ್ವರ್ ಖಂಡ್ರೆ, ಸಿ.ಎಂ.ಇಬ್ರಾಹಿಂ ಅವರನ್ನೊಳಗೊಂಡ ತಂಡ ರಚನೆಯಾಗಲಿದೆ ಎಂದು ತಿಳಿದುಬಂದಿದೆ.. ಐದು ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಎಐಸಿಸಿ ಆಧ್ಯಕ್ಷ ರಾಹುಲ್‌ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮೈತ್ರಿ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಕೊಡದೆ ಸಿದ್ದರಾಮಯ್ಯ ಸಹಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಒಮ್ಮತದ ತೀರ್ಮಾನ ಕೈಗೊಂಡು ಒಟ್ಟಾಗಿ ಪ್ರಚಾರ ಮಾಡಿ ಒಗ್ಗಟ್ಟು ಪ್ರದರ್ಶಿಸಿ ಉತ್ತಮ ಫಲಿತಾಂಶ ಬರುವಂತೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬಿಎಸ್‌ಪಿ ಬೆಂಬಲ ಸಿಗುತ್ತಾ?
ಉಪ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಬಿಎಸ್‌ಪಿ ಬೆಂಬಲ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಗಳಿಗೆ ಕೊಡಿಸುವ ಭರವಸೆಯನ್ನೂ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಎಸ್‌ಪಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ರಾಜ್ಯದ ಮಟ್ಟಿಗೆ ಮೈತ್ರಿ ಮುಂದುವರಿಸುವಂತೆ ದೇವೇಗೌಡರು ಮಾಯಾವತಿಯವರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ, ಪಿತೃಪಕ್ಷ ಮುಗಿದ ನಂತರ ಬುಧವಾರದಿಂದ ಉಪ ಚುನಾವಣೆ “ಅಖಾಡ’ ಪ್ರವೇಶಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯತಂತ್ರದೊಂದಿಗೆ ಸಜ್ಜಾಗುತ್ತಿವೆ. – ಎಸ್.ಲಕ್ಷ್ಮಿನಾರಾಯಣ