ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಶುಕ್ರವಾರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ, ಬಿಜೆಪಿಯ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಮುಖಾಮುಖಿಯಾದರೂ ಪರಸ್ಪರ ಮಾತನಾಡದೆ ಮೌನವಾಗಿ ತೆರಳಿದ ಪ್ರಸಂಗ ನಡೆಯಿತು.
ಯಡಿಯೂರಪ್ಪ ಅವರ 78ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧವಳಗಿರಿ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ್ದ ಬಿ.ಎನ್.ಬಚ್ಚೇಗೌಡ ಅವರು ಕೆಲಹೊತ್ತು ಮಾತುಕತೆ ನಡೆಸಿದರು. ಇದೇ ವೇಳೆ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಕೂಡ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದರು.
ಅಷ್ಟೊತ್ತಿಗೆ ಅಲ್ಲಿಂದ ಹೊರಟ ಬಿ.ಎನ್. ಬಚ್ಚೇಗೌಡ ಅವರಿಗೆ ಎಂ.ಟಿ.ಬಿ. ನಾಗರಾಜ್ ಎದುರಾದರೂ ಇಬ್ಬರೂ ಪರಸ್ಪರ ಮಾತನಾಡಲಿಲ್ಲ. ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಜಯಗಳಿಸಿದ ಬಳಿಕ ಪರಾಜಿತ ಎಂ.ಟಿ.ಬಿ.ನಾಗರಾಜ್ ಅವರು ಹಲವು ಬಾರಿ ಬಿ.ಎನ್.ಬಚ್ಚೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಅವರ ವಿರುದ್ಧ ಕ್ರಮ ಜರುಗಿಸುವಂತೆಯೂ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದರು. ಆ ಬಳಿಕ ಬಿ.ಎನ್.ಬಚ್ಚೇಗೌಡ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಶುಕ್ರವಾರದ ಭೇಟಿ ಮಹತ್ವ ಪಡೆದುಕೊಂಡಿದೆ ಎಂಬ ಮಾತುಗಳಿವೆ.
ಸೌಜನ್ಯದ ಭೇಟಿ: ಭೇಟಿ ಕುರಿತು “
ಉದಯವಾಣಿ’ಗೆ ಪ್ರತಿಕ್ರಿಯಿಸಿದ ಬಿ.ಎನ್.ಬಚ್ಚೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಶುಭ ಕೋರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಶುಕ್ರವಾರ ಭೇಟಿಯಾಗಿ ಶುಭ ಕೋರಿದ್ದು, ಇದೊಂದು ಸೌಜನ್ಯದ ಭೇಟಿ. ಕೆಲಹೊತ್ತು ಅವರೊಂದಿಗೆ ಮಾತುಕತೆ ನಡೆಸಿದ್ದು, ವಿಶೇಷವೇನಿಲ್ಲ ಎಂದು ಹೇಳಿದರು.