Advertisement

ದೊಡ್ಡಗೌಡರ “ಕೈ’ಬಿಟ್ಟ ನಾಯಕರು

06:36 AM May 24, 2019 | Team Udayavani |

ತುಮಕೂರು: ಮಾಜಿ ಪ್ರಧಾನಿ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡ, ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ ವಿರುದ್ಧ ಹೀನಾಯ ಸೋಲುಕಂಡಿದ್ದಾರೆ.

Advertisement

ಮೈತ್ರಿ ಧರ್ಮದಂತೆ ಹಾಲಿ ಸಂಸದರಾಗಿದ್ದ ಕಾಂಗ್ರೆಸ್‌ನ ಮುದ್ದಹನುಮೇಗೌಡರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಸೇರಿ ಕಾಂಗ್ರೆಸ್‌ನ ಕೆಲ ಮುಖಂಡರ ತೀವ್ರ ವಿರೋಧ ನಡುವೆಯೂ ಸ್ವಕ್ಷೇತ್ರ ಹಾಸನವನ್ನು ಬಿಟ್ಟು ಪಕ್ಕದ ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ಗೆ ಪಕ್ಷದ ನಾಲ್ವರು ಶಾಸಕರ ಬಲ ಇದ್ದ ಕಾರಣ ಕಣ ತೀವ್ರ ಪೈಪೋಟಿಯಿಂದ ಕೂಡಿತ್ತು.

ಜೆಡಿಎಸ್‌ನ ಮೂರು, ಕಾಂಗ್ರೆಸ್‌ನ ಒಬ್ಬ ಶಾಸಕರ ಬಲ ನಂಬಿಕೊಂಡು ತುಮಕೂರಿನಿಂದ ಸ್ಪರ್ಧಿಸಿದ್ದ ದೇವೇಗೌಡರು ಕೇವಲ 12,887 ಮತಗಳಿಂದ ರೋಚಕ ಸೋಲು ಕಂಡಿದ್ದು, ರಾಜ್ಯ ರಾಜಕೀಯದಲ್ಲಿ ಕಾರ್ಮೋಡವೇ ಕವಿದಂತಹ ವಾತಾವರಣ ಸೃಷ್ಟಿಸಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಂಸದರಾಗಿದ್ದ ಜಿ.ಎಸ್‌.ಬಸವರಾಜ್‌ ಐದನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ದೇವೇಗೌಡರನ್ನು ತುಮಕೂರು ಕ್ಷೇತ್ರದಲ್ಲಿ ಸೋಲಿಸಿದ್ದು ಅವರ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಗಳು ತುಮಕೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದಿಲ್ಲ ಎನ್ನುವ ನಂಬಿಕೆ ಈವರೆಗೂ ಜಿಲ್ಲಾ ರಾಜಕೀಯ ವಲಯದಲ್ಲಿ ಇತ್ತು. ಈಗ ಅದು ದೂರವಾಗಿ, ಹೊಸ ಸಂಪ್ರಾದಾಯಕ್ಕೆ ಬಸವರಾಜು ನಾಂದಿಯಾಡಿದ್ದಾರೆ.

ಪ್ರಾರಂಭದ ಮತ ಎಣಿಕೆ 2 ಸುತ್ತಿನಲ್ಲಿಯೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುನ್ನಡೆಯಲ್ಲಿದ್ದರು, ಅ ನಂತರ ಮತಎಣಿಕೆ ನಡೆಯುವಾಗ ನಿರಂತರವಾಗಿ 17 ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ನಿರಂತರ 15ರಿಂದ 20 ಸಾವಿರ ಮುನ್ನಡೆಯನ್ನು ಕಾಯ್ದುಕೊಂಡು ಬಂದರು. ಕೊನೆಗೆ 12887 ಮತಗಳ ಅಂತರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿ ಗೆಲ್ಲುವಿನ ನಗೆ ಬೀರಿದರು.

Advertisement

ಜಿಲ್ಲಾ ಜೆಡಿಎಸ್‌ನಲ್ಲಿ ತಲ್ಲಣ: ಮಾಜಿ ಪ್ರಧಾನಿ ಸೋತಿರುವುದು ಜಿಲ್ಲಾ ಜೆಡಿಎಸ್‌ ನಾಯಕರನ್ನು ತೀವ್ರ ಚಿಂತೆಗೀಡುಮಾಡಿದೆ. ಉಪಮುಖ್ಯಮಂತ್ರಿ ಜಿ.ಪರ ಮೇಶ್ವರ್‌, ಸಚಿವ ಶ್ರೀನಿವಾಸ್‌ ಸೇರಿದಂತೆ ಹಲವು ಘಟಾನುಘಟಿ ನಾಯಕರಿದ್ದರೂ, ಇಡೀ ದೇಶ ಕ್ಷೇತ್ರದತ್ತ ತಿರುಗಿ ನೋಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಮಾಡದೇ ತಮ್ಮ ಸರ್ವೋತ್ಛನಾಯಕನನ್ನು ಸೋಲಲು ಬಿಟ್ಟಿದ್ದು ಜಿಲ್ಲಾ ಜೆಡಿಎಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.

ಕೈ ಹಿಡಿಯದ ಜೆಡಿಎಸ್‌ ಕ್ಷೇತ್ರಗಳು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಎಂದು ಭಾವಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಈ ಫ‌ಲಿತಾಂಶ ನಿರಾಸೆ ಮೂಡಿ ಸಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಧುಗಿರಿ, ಗುಬ್ಬಿ, ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್‌, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಇದ್ದರು. ಆದರೆ, ಅವರ ಪಕ್ಷದ ಶಾಸಕರು ಇರುವ ಕ್ಷೇತ್ರಗಳಲ್ಲೇ ನಿರೀಕ್ಷಿಸಿದ ಬಹುಮತ ದೊರೆತಿಲ್ಲ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಚಿಕ್ಕನಾಯಕನಹಳ್ಳಿ, ತುರುವೇಕೆರೆಯಲ್ಲಿ ಬಿಜೆಪಿ ಶಾಸಕರು ಇದ್ದರೂ ಜೆಡಿಎಸ್‌ಗೆ 6 ಸಾವಿರ ಮುನ್ನಡೆ ಸಿಕ್ಕಿದೆ.

ಹೇಮೆ ನೀರು ಹರಿಸದ್ದಕ್ಕೆ ಸೋಲು?: ಕಲ್ಪತರುನಾಡು ತುಮಕೂರು ಸದಾ ಬರಗಾಲದಿಂದ ತತ್ತರಿಸಿರುವ ಜಿಲ್ಲೆ. ಮಳೆಬಾರದೇ ಕೆರೆ ಕಟ್ಟೆಗಳು ಖಾಲಿ ಇವೆ. ಈ ಭಾಗಕ್ಕೆ ಹೇಮಾವತಿ ನೀರೇ ಆಶ್ರಯ. ಜಿಲ್ಲೆಗೆ 24.5 ಟಿಎಂಸಿ ನೀರು ಹರಿಸಬೇಕು. ಆದರೆ, ಪತ್ರಿವರ್ಷ ನಿಗದಿಯಾಗಿರುವಷ್ಟು ನೀರು ಹರಿದು ಬರುತ್ತಿಲ್ಲ. ಇದಕ್ಕೆ ಕಾರಣ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಎನ್ನುವುದು ಜಿಲ್ಲೆಯಲ್ಲಿ ಜನಜನಿತವಾಗಿದೆ. ಈ ಚುನಾವಣೆಯಲ್ಲಿ ಕ್ಷೇತ್ರ ಮತದಾರರು ಇದನ್ನು ಪ್ರಮುಖವಾಗಿ ಪರಿಗಣಿಸಿದರು. ಜೆಡಿಎಸ್‌ ಭದ್ರಕೋಟೆಯಾಗಿರುವ ಈ ಜಿಲ್ಲೆಯಲ್ಲಿ ದೇವೇಗೌಡರು ಸೋಲಲು ಇದು ಒಂದು ಕಾರಣವಾಗಿದೆ.

ಕೆ.ಎನ್‌.ರಾಜಣ್ಣಗೆ ಬಿಜೆಪಿ ಜೈಕಾರ: ಲೋಕಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟಗೊಳ್ಳುತ್ತ¤ಲೇ, ಮತ ಎಣಿಕೆ ನಡೆದ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಮುಂಭಾಗ ದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ಜೊತೆಗೆ ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಮುನ್ನಡೆ ಸಾಧಿಸಲು ಕಾಂಗ್ರೆಸ್‌ನ ಬಂಡಾಯ ನಾಯಕ ಕೆ.ಎನ್‌.ರಾಜಣ್ಣ ಕಾರಣ ಎಂದು ಅವರ ಪರ ಬಿಜೆಪಿ ಕಾರ್ಯಕರ್ತರು ಜೈಕಾರ ಹಾಕಿದರು. ಇದು ನೆರೆದಿದ್ದ ಕಾಂಗ್ರೆಸ್‌ , ಜೆಡಿಎಸ್‌ ಮುಖಂಡರಿಗೆ ಇರಿಸು ಮುರಿಸು ಉಂಟುಮಾಡಿತು.

ಮೋದಿ ಜಾರಿಗೆ ತಂದ ಕಾರ್ಯಕ್ರಮಗಳು, ಪಕ್ಷ ನಿಷ್ಠೆ ಜೊತೆಗೆ ಕಾರ್ಯ ಕರ್ತರು ಸಂಘಟತರಾಗಿ ಪ್ರಚಾರ ಮಾಡಿದ್ದರ ಫ‌ಲವಾಗಿ ನಾನು ಗೆಲ್ಲುವು ಸಾಧಿಸಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ ಮುಂದೆ ನಾನು ಗೆಲ್ಲುವುದು ಸುಲಭವಾಗಿರಲಿಲ್ಲ, ಮತದಾರರು, ಕಾರ್ಯಕರ್ತರ ಸಹಕಾರದಿಂದ ಹುಲಿಯನ್ನು ಸೋಲಿಸಿದ್ದೇನೆ. ಮಣ್ಣಿನ ಮಗ ಹಾಸನಕ್ಕೆ ಅನುಕೂಲ ಮಾಡಿ ಜಿಲ್ಲೆಗೆ ವಂಚಿಸಿದರು, ಇದನ್ನು ಜನ ಗಮನಿ ಸಿದ್ದಾರೆ. ಆದರೂ ಅವರ ಬಗ್ಗೆ ನನಗೆ ಗೌರವಿದೆ
-ಜಿ.ಎಸ್‌.ಬಸವರಾಜು, ಬಿಜೆಪಿ ವಿಜೇತ ಅಭ್ಯರ್ಥಿ

ತುಮಕೂರು (ಬಿಜೆಪಿ)
-ವಿಜೇತರು ಜಿ.ಎಸ್‌.ಬಸವರಾಜು
-ಪಡೆದ ಮತ 5,94,011
-ಎದುರಾಳಿ ಎಚ್‌.ಡಿ.ದೇವೇಗೌಡ(ಜೆಡಿಎಸ್‌)
-ಪಡೆದ ಮತ 5,81,624
-ಗೆಲುವಿನ ಅಂತರ 12,887

ಕಳೆದ ಬಾರಿ ಗೆದ್ದವರು: ಮುದ್ದಹನುಮೇಗೌಡ (ಕಾಂಗ್ರೆಸ್‌)

ಗೆಲುವಿಗೆ 3 ಕಾರಣ
-“ಕೈ’ ಕೆಲ ಬಂಡಾಯ ನಾಯಕರು ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದ್ದು
-ಜಿಲ್ಲೆಯಲ್ಲಿ ನಾಲ್ವರು ಬಿಜೆಪಿ ಶಾಸಕರು ಇದದ್ದು
-ಜಿಲ್ಲೆಗೆ ಹೇಮಾವತಿ ನೀರು ಹರಿಸಲು ದೇವೇಗೌಡ ಕುಟುಂಬ ಅಡ್ಡಿ ಪಡೆಸುತ್ತಿದ್ದೆ ಎಂಬ ಆರೋಪ ಸದ್ಬಳಕೆ ಮಾಡಿಕೊಂಡಿದ್ದು.

ಸೋಲಿಗೆ 3 ಕಾರಣ
-ಮುದ್ದಹನುಮೇಗೌಡ್ರಿಗೆ ಟಿಕೆಟ್‌ ತಪ್ಪಿದ್ದು, ಕೆ.ಎನ್‌.ರಾಜಣ್ಣ ಸೇರಿ ಕೆಲ “ಕೈ’ ನಾಯಕರ ಬಂಡಾಯವೆದ್ದಿದ್ದು
-ಗೆಲ್ತಾರೆ ಎಂಬ ದೃಢವಾದ ನಂಬಿಕೆ ಮೇಲೆ ಬಿರುಸಿನ ಪ್ರಚಾರ ಮಾಡದ್ದು
-ನಿರೀಕ್ಷೆ ಇಟ್ಟಿದ್ದ ಮಧುಗಿರಿ, ಕೊರ ಟಗೆರೆ, ತು.ಗ್ರಾಮಾಂತರ, ಗುಬ್ಬಿ ಕ್ಷೇತ್ರ ಕೈ ಹಿಡಿಯದೇ ಇದದ್ದು.

Advertisement

Udayavani is now on Telegram. Click here to join our channel and stay updated with the latest news.

Next