ಹೊಸದಿಲ್ಲಿ: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಜೈಲು ಸೇರಿದ್ದ ನಾಯಕರು ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಒಡಿಶಾದ ಕಲಹಂಡಿ ಜಿಲ್ಲೆಯ ಭವಾನಿಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ,ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿರುವ ವಿರೋಧ ಪಕ್ಷಗಳ ಸಭೆಯನ್ನು ಉಲ್ಲೇಖಿಸಿ ಮಾತನಾಡಿದ ನಡ್ಡಾ, ಇಂದು ರಾಜಕೀಯದಲ್ಲಿ ವಿಚಿತ್ರವಾದ ಸಂಗತಿಗಳು ನಡೆಯುತ್ತಿವೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಜೈಲಿಗೆ ಕಳಿಹಿಸಿದ್ದ ನಾಯಕರು ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ಜತೆ ಕೈಜೋಡಿಸಿದ್ದಾರೆ ಎಂದರು.
”ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಚಳವಳಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ನಾಯಕರಾಗಿದ್ದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಮಿತ್ರಪಕ್ಷ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಬ್ಬರನ್ನೂ ಬಂಧಿಸಲಾಗಿತ್ತು” ಎನ್ನುವುದನ್ನು ನೆನಪಿಸಿದರು. ಈ ಅವಧಿಯಲ್ಲಿ ಪ್ರಸಾದ್ 22 ತಿಂಗಳು ಜೈಲುವಾಸ ಅನುಭವಿಸಿದ್ದರೆ, ಕುಮಾರ್ 20 ತಿಂಗಳು ಜೈಲಿನಲ್ಲಿದ್ದರು.
“ನಾನು ಉದ್ಧವ್ ಠಾಕ್ರೆ ವಿರೋಧ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಪಾಟ್ನಾ ತಲುಪಿದ್ದನ್ನು ನೋಡಿದೆ. ಅವರ ತಂದೆ, ‘ಹಿಂದೂ ಹೃದಯ ಸಾಮ್ರಾಟ್’ ಬಾಳಾಸಾಹೇಬ್ ಠಾಕ್ರೆ ಅವರು ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದ್ದರು. ಬಾಳಾಸಾಹೇಬ್ ಅವರು ಕಾಂಗ್ರೆಸ್‌ಗೆ ಸೇರುವ ಬದಲು ಪಕ್ಷವನ್ನು ವಿಸರ್ಜಿಸುವುದಾಗಿ ಒಮ್ಮೆ ಹೇಳಿದ್ದರು. ಈಗ, ಅವರ ಮಗ ‘ದುಕಾನ್’ ಅನ್ನು ಮುಚ್ಚುತ್ತಿದ್ದಾರೆ” ಎಂದು ನಡ್ಡಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಕುರಿತು ವಿಶ್ವ ನಾಯಕರ ಹೊಗಳಿಕೆಯನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.