ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಅನೇಕ ರಾಜಕಾರಣಿಗಳ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬಂದಿದ್ದು, ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ನರೇಂದ್ರ ಮೋದಿ, ಜಯಲಲಿತಾ, ಎನ್.ಟಿ ರಾಮರಾಮ್ (ಎನ್‌ಟಿಆರ್) ಹೀಗೆ ಹುಡುಕುತ್ತ ಹೋದರೆ ಹಲವು ರಾಜಕಾರಣಿಗಳ ಬಯೋಪಿಕ್‌ಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಆದರೆ ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡದಲ್ಲಿ ಮಾತ್ರ ಇಲ್ಲಿನ ರಾಜಕಾರಣಿಗಳ ಕಥೆ ಸಿನಿಮಾವಾದ ನಿದರ್ಶನ ಇಲ್ಲವೆಂದೇ ಹೇಳಬಹುದು. ಈ ಹಿಂದೆ ಕೂಡ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಕೆಲವು ರಾಜಕಾರಣಿಗಳ ಬಯೋಪಿಕ್ ತೆರೆಗೆ ತರುವ ಪ್ರಯತ್ನ ನಡೆದಿತ್ತಾದರೂ, ಕೊನೆಗೆ ಆ ಪ್ರಯತ್ನ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿತ್ತು.
ಸದ್ಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಾಗಲೇ, ಕರ್ನಾಟಕ ಮಾಜಿ ಸಿಎಂ ಮತ್ತು ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಹೌದು, ಶ್ರೀರಾಮ ನವಮಿ ಹಬ್ಬದ ಸಂದರ್ಭದಲ್ಲಿ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ಎಂದು ಹೇಳಲಾದ “ಲೀಡರ್ ರಾಮಯ್ಯ’ ಎಂಬ ಹೆಸರಿನ ಸಿನಿಮಾದ ಟೈಟಲ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಇನ್ನು “ಲೀಡರ್ ರಾಮಯ್ಯ’ಸಿನಿಮಾದ ಟೈಟಲ್‌ಗೆ “ಎ ಕಿಂಗ್ ರೈಸ್ಡ್ ಬೈ ದ ಪೀಪಲ್’ ಎಂಬ ಅಡಿಬರಹವಿದ್ದು, ಪೋಸ್ಟರ್‌ನಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸುತ್ತಿರುವ ಚಿತ್ರವಿದೆ.
ಈ ಹಿಂದೆ “ಕಥಾ ಲೇಖನ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಸತ್ಯರತ್ನಂ ಈ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಎಂ. ಎಸ್ ಕ್ರಿಯೇಟಿವ್ ವರ್ಕ್ಸ್’ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ಲೀಡರ್ ರಾಮಯ್ಯ’ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ಸಿದ್ದರಾಮಯ್ಯ ಪಾತ್ರವನ್ನು ತಮಿಳು ನಟ ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಿದ್ದರಾಮಯ್ಯ ಅವರ ಹೋರಾಟ, ರಾಜಕೀಯ ಜೀವನ ಚಿತ್ರಣ ಈ ಸಿನಿಮಾದಲ್ಲಿದೆ ಎನ್ನಲಾಗಿದೆ.
ಸದ್ಯ “ಲೀಡರ್ ರಾಮಯ್ಯ’ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾದ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.