ಮೈಸೂರು: ಮೈಸೂರಿನ ಜನನಿಬಿಡ ಪ್ರದೇಶದಲ್ಲಿ ತೆರೆಯಲಾಗಿರುವ ಮದ್ಯದ ಅಂಗಡಿ ತೆರವುಗೊಳಿಸುವ ಜೊತೆಗೆ ಅಂಗಡಿಯ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಮಹಾ ನಗರ ಪಾಲಿಕೆ ವಾರ್ಡ್ ಸಂಖ್ಯೆ 1ರ ವ್ಯಾಪ್ತಿಯಲ್ಲಿನ ಲಕ್ಷ್ಮೀಕಾಂತ ನಗರದ ಚಿತ್ರ ರೆಸಿಡೆನ್ಸಿಯ ವಾಣಿಜ್ಯ ಸಂಕೀರ್ಣದಲ್ಲಿ ತೆರೆಯಲಾಗಿರುವ ಮದ್ಯದ ಅಂಗಡಿ ತೆರವಿಗೆ ಒತ್ತಾಯಿಸಿ ಸ್ಥಳೀಯರು ನಡೆಸಿದ ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಪಾಲಿಕೆ ಸದಸ್ಯರು ಭಾಗವಹಿಸಿ, ಮದ್ಯದ ಅಂಗಡಿ ತೆರವಿಗೆ ಒತ್ತಾಯಿಸಿದರು.
ಲಕ್ಷ್ಮೀಕಾಂತ ನಗರದಲ್ಲಿನ ಉದ್ಯಾನ ಮತ್ತು ಶಾಲೆಯ ಎದುರೇ ಮದ್ಯದ ಅಂಗಡಿ ತೆರೆಯಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಉದ್ಯಾನದಲ್ಲಿ ಮಹಿಳೆಯರು ಮತ್ತು ವಯೋವೃದ್ಧರು ವಾಯುವಿಹಾರ ಮಾಡುತ್ತಾರೆ. ಜೊತೆಗೆ ಶಾಲಾ ಮಕ್ಕಳು ಇಲ್ಲೇ ಆಟವಾಡುತ್ತಾರೆ.
ಈ ಮದ್ಯದ ಅಂಗಡಿಯಿಂದಾಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಬ್ಯೂಟಿ ಪಾರ್ಲರ್, ದಿನಸಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳ ವ್ಯಾಪಾರದ ಮೇಲೂ ಕೂಡ ಪರಿಣಾಮ ಬೀರಲಿದೆ. ಆದ್ದರಿಂದ ಕೂಡಲೇ ಮದ್ಯದ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಶಾಸಕ ಎಲ್.ನಾಗೇಂದ್ರ ಆಗ್ರಹಿಸಿದರು.
ಹೋರಾಟ ತೀವ್ರ: ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು, ಮದ್ಯದ ಅಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಾ ನಗರಪಾಲಿಕೆ ಸದಸ್ಯರಾದ ಲಕ್ಷ್ಮೀಶಿವಣ್ಣ, ಸುಬ್ಬಯ್ಯ, ಕೆವಿ.ಶ್ರೀಧರ್,ಪ್ರೇಮಾ ಶಂಕರೇಗೌಡ, ವೇದಾವತಿ, ಪ್ರಮೀಳಾ ಭರತ್, ಪಾಲಿಕೆ ಮಾಜಿ ಸದಸ್ಯರಾದ ಶಿವಣ್ಣ, ಮಹಾದೇವಪ್ಪ, ಚಾಮರಾಜ ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ. ಕಿರಣ್‌ಗೌಡ, ಮೂರ್ತಿ, ಗೋವಿಂದ, ಜಗದೀಶ್, ವಾಣೀಶ್, ನಂದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.