Advertisement
ಧಾರವಾಡಕ್ಕೆ ಬಂದವರೆಲ್ಲರೂ ಲೈನ್‌ಬಜಾರ್ ಪೇಡಾವನ್ನ ಹೇಗೆ ಸವಿದು ಹೋಗುತ್ತಾರೋ, ಹಾಗೆಯೇ ಇಲ್ಲಿನ ಬಸಪ್ಪ ಖಾನಾವಳಿಯಲ್ಲಿನ ರೊಟ್ಟಿಯನ್ನ ಮತ್ತು ಎಲ್‌ಇಎ ಕ್ಯಾಂಟೀನ್‌ನಲ್ಲಿನ ತುಪ್ಪದ ಅವಲಕ್ಕಿ, ಚುರುಮುರಿ,ಮಿರ್ಚಿಯನ್ನ ಕೂಡ ಸವಿದು ಸಂಭ್ರಮಿಸಿ ಹೋಗುತ್ತಾರೆ.
Related Articles
Advertisement
ಹಾಗಂತ ಈ ಕ್ಯಾಂಟೀನ್‌ನಲ್ಲಿ ಹೈಟೆಕ್ ಖುರ್ಚಿ,ಟೇಬಲ್‌ಗಳು, ಟಿಶ್ಯುಪೇಪರ್‌ಸ್ಟ್ಯಾಂಡ್‌ಗಳು, ಮಸ್ತ್ ಬಟ್ಟೆ ಹಾಕಿಕೊಂಡು ಕೆಲಸ ಮಾಡುವ ಸರ್ವರ್‌ಗಳೇನು ಇಲ್ಲ. ಶತಮಾನಗಳ ಹಿಂದೆ ಕಟ್ಟಿದ ಮಣ್ಣಿನ ಮನೆ,ಅದರಲ್ಲಿ ಒಂದಿಷ್ಟು ಹಳೆಯದಾದ ಖುರ್ಚಿ, ಟೇಬಲ್‌ಗಳು ಮಾತ್ರ ಇವೆ. ಆದರೆ ಕ್ಯಾಂಟೀನ್ ಆರಂಭಗೊಂಡ ದಿನದಿಂದ ಇಂದಿನವರೆಗೂ ರುಚಿ,ಸ್ವಾದದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಸಾಂಸ್ಕೃತಿಕ ನಂಟು: ಕ್ಯಾಂಟೀನ್‌ಗೆ ಸಾಹಿತ್ಯ,ರಾಜಕೀಯ,ಸಿನಿಮಾ ಮತ್ತು ಸಾಂಸ್ಕೃತಿಕ ಒಡನಾಟವೂ ಇದೆ. ಸಂಜೆ ಹೊತ್ತು ಕವಿಗಳೆಲ್ಲ ಸೇರಿಕೊಂಡು ಹತ್ತು ಕವಿತೆಗಳನ್ನು ವಾಚಿಸಿ ಒಂದು ಕವಿಗೋಷ್ಠಿ ಮಾಡಿ ಮೇಲಕ್ಕೆದ್ದರು ಅಂದ್ರೆ, ಅವರೆಲ್ಲ ನೇರವಾಗಿ ಎಲ್‌ಇಎ ಕ್ಯಾಂಟೀನ್ ಹಾದಿ ಹಿಡಿಯುತ್ತಾರೆ ಎಂದೇ ಅರ್ಥ.
ಇವರೆಲ್ಲಾ ತಿಂದಿದ್ದಾರೆ..!: ಡಾ|ಡಿ.ಸಿ.ಪಾವಟೆ,ಡಾ|ಬಸವರಾಜ ಕಟ್ಟಿಮನಿ,ಡಾ|ಸದಾಶಿವ ಒಡೆಯರ, ಡಾ|ಹಿರೇಮಲ್ಲೂರು ಈಶ್ವರನ್‌ಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದುಕೊಂಡು ಉಪನ್ಯಾಸ ಮಾಡುತ್ತಿದ್ದ ಎಲ್ಲಾ ಹಿರಿಯರಿಗೂ ಆಗೊಮ್ಮೆ ಈಗೊಮ್ಮೆ ಮಂಡಕ್ಕಿ ಅವಲಕ್ಕಿ ರುಚಿ ಬೇಕಾಗಿಯೇ ಇತ್ತು. ಇನ್ನು ಡಾ|ಎಂ.ಎಂ.ಕಲಬುರ್ಗಿ ಅವರಿಗಂತೂ ಈ ಹೋಟೇಲ್‌ನ ಚುರುಮುರಿ,ಅವಲಕ್ಕಿ ಅಂದ್ರೆ ಪಂಚಪ್ರಾಣವಾಗಿತ್ತು.
ವರಕವಿ ದ.ರಾ.ಬೇಂದ್ರೆ,ಶಂ.ಭಾ.ಜೋಷಿ, ಬಸವರಾಜ ರಾಜ ಗುರು, ಮಧುರ ಚೆನ್ನರು ಸೇರಿದಂತೆ ಅನೇಕ ದೊಡ್ಡ ಕವಿಗಳು ಇಲ್ಲಿನ ಚುರುಮುರಿ, ತುಪ್ಪದ ಅವಲಕ್ಕಿಯ ರುಚಿ ಸವಿದಿದ್ದಾರೆ. ಎಲ್‌ಇಎ ಕ್ಯಾಂಟೀನ್ ಎಂದರೆ ಒಂದರ್ಥದಲ್ಲಿ ಜಿಲ್ಲೆಯ ರಾಜಕೀಯ ವಿಚಾರಗಳ ಚರ್ಚಾಕೂಟದ ವೇದಿಕೆಯೂ ಎನ್ನಬಹುದು. ಜಿಲ್ಲೆಯ ಎಲ್ಲಾ ಪಕ್ಷಗಳ ಮುಖಂಡರು ಸಂಜೆ ಹೊತ್ತಿಗೆ ಇಲ್ಲಿಗೆ ಚಹಾ ಮತ್ತು ಚುರುಮುರಿ ಸವಿಯಲು ಬರುತ್ತಾರೆ. ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಿ, ನಗುಮೊಗದೊಂದಿಗೆ ಬೀಳ್ಗೊಡುತ್ತ ಸಾಗುತ್ತಾರೆ.
ಪಾಕಪ್ರವೀಣ ಶಿವಪ್ಪ ಅವರ ಕೊಡುಗೆ: 1950 ರಲ್ಲಿ ಆರಂಭಗೊಂಡ ಎಲ್‌ಇಎ ಕ್ಯಾಂಟೀನ್ ಮೊದಲು ಶಿವಪ್ಪ ಕ್ಯಾಂಟೀನ್ ಎಂದೇ ಪ್ರಸಿದ್ದಿಯಾಗಿತ್ತು. ಶಿವಪ್ಪ ಮರಳಪ್ಪನವರ ಎನ್ನುವವರೇ ಮಾಲೀಕರಾಗಿದ್ದರಿಂದ ಎಲ್ಲರೂ ಹೋಟೆಲನ್ನು ಅವರ ಹೆಸರಿನಿಂದಲೇ ಕೆರೆಯುತ್ತಿದ್ದರು. ಮಹಾರಾಷ್ಟ್ರದ ತಿಂಡಿಗಳೇ ಆಗ ಇಲ್ಲಿ ಫೇಮಸ್ಸಾಗಿದ್ದವು.
ಸಾಂಗ್ಲಿಯ ಬಡಂಗ(ಚುರುಮುರಿ)ನ್ನ ತರೆಸಿಕೊಂಡು ಇಲ್ಲಿ ಮಾರುತ್ತಿದ್ದ ಹೊಟೇಲ್‌ಗಳು ಸಾಕಷ್ಟಿದ್ದವು. ಆದರೆ ಸ್ಥಳೀಯ ತಿಂಡಿ,ತಿನಿಸಿಗೆ ಅಷ್ಟೊಂದು ಪ್ರಾಧಾನ್ಯತೆ ಇಲ್ಲದೇ ಇರುವ ಹೊತ್ತಿನಲ್ಲಿ ಶಿವಪ್ಪ ಅವರು ಸ್ವತಃ ತಮ್ಮ ಪಾಕ ಪ್ರಾವಿಣ್ಯತೆಯನ್ನು ಮೆರೆದು, ಧಾರವಾಡದ ಸುತ್ತ ಬಳೆಯುವ ದೇಶಿ ತಳಿಯ ಭತ್ತದಿಂದ ಬಂದ ಅಕ್ಕಿಯನ್ನ ಹದಗೊಳಿಸಿ ತಯಾರಿಸುತ್ತಿದ್ದ ಚುರುಮುರಿ,
ಅವಲಕ್ಕಿಯನ್ನೇ ಬಳಸಿಕೊಂಡು ಸ್ವಾದಿಷ್ಟ ರುಚಿಯಲ್ಲಿ ತುಪ್ಪದ ಅವಲಕ್ಕಿ ಮತ್ತು ಬಳ್ಳೊಳ್ಳಿ ಚುರುಮುರಿಯನ್ನ ಸಿದ್ದಗೊಳಿಸಿದ್ದೇ ಅವರ ಯಶಸ್ಸಿನ ಹಿಂದಿರುವ ಗುಟ್ಟು. ಇಂದು ನಾಲ್ಕು ಅತೀ ದೊಡ್ಡ ಹೊಟೇಲ್‌ಗಳು, ಲಾಡ್ಜ್ಗಳು ಸೇರಿದಂತೆ ಅನೇಕ ವ್ಯಾಪಾರದಲ್ಲೂ ಇವರ ಮಕ್ಕಳು ತೊಡಗಿದ್ದರೂ, ಎಲ್‌ಇಎ ಕ್ಯಾಂಟೀನ್‌ನ ಸ್ವರೂಪ ಮಾತ್ರ ಬದಲಾಗಿಲ್ಲ.
ರಾಜಕುಮಾರು ಬಂದಿದ್ರು….: ಹಿರಿಯ ರಾಜಕಾರಣಿಯಾಗಿದ್ದ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಬಂಗಾರಪ್ಪ,ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಅವರಿಂದ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರೆಗೆ, ವರನಟ ಡಾ|ರಾಜ್‌ಕುಮಾರ್,ಶಂಕರನಾಗ್, ಪ್ರಭಾಕರ್, ಅಶೋಕ್, ಮುಖ್ಯಮಂತ್ರಿ ಚಂದ್ರು, ಸುಧೀರ್, ಕಲ್ಪನಾ,ಮಂಜುಳಾ,ಜಯಮಾಲಾ ಸೇರಿದಂತೆ, ಇಂದಿನ ಚಿತ್ರರಂಗದ ಯುವ ನಾಯಕರ ವರೆಗೂ ಎಲ್ಲರೂ ಎಲ್‌ಇಎ ಕ್ಯಾಂಟೀನ್ ತುಪ್ಪದ ಅವಲಕ್ಕಿ,ಚುರುಮುರಿ ಮಿರ್ಚಿ ರುಚಿಯನ್ನು ಸವಿದಿದ್ದಾರೆ.
ಮೊಬೈಲ್: 97403 19918.
* ಬಸವರಾಜ ಹೊಂಗಲ್