ಬೆಂಗಳೂರು : ಇನ್ಫೋಸಿಸ್ ನಿರ್ದೇಶಕರ ಮಂಡಳಿಯೊಂದಿಗಿನ ಸಮರವನ್ನು ಕೊನೆಗೊಳಿಸಿರುವುದಾಗಿ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಇದರೊಂದಿಗೆ, ಐಟಿ ದಿಗ್ಗಜ ಇನ್ಫೋಸಿಸ್ ಲಿಮಿಟೆಡ್‌ನ ಶೇರು ಧಾರಣೆ ಇಂದು ಮುಂಬಯಿ ಶೇರು ಪೇಟೆಯಲ್ಲಿ ಶೇ.0.75ರಷ್ಟು ಏರಿ 975 ರೂ.ಗಳಲ್ಲಿ ಸ್ಥಿರತೆಯನ್ನು ಕಂಡಿದೆ.
ದೇಶದ ಎರಡನೇ ಅತೀ ದೊಡ್ಡ ಐಟಿ ಕಂಪೆನಿ ಎನಿಸಿರುವ ಇನ್‌ಫೋಸಿಸ್ ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಂದು ಕಂಪೆನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿರುವ ಆರ್ ಶೇಷಸಾಯಿ ಅವರ ಮೇಲೆ ತನಗೆ ಸಂಪೂರ್ಣ ವಿಶ್ವಾಸ, ನಂಬಿಕೆ ಇದೆ ಎಂಬುದನ್ನು ಪುನರಚ್ಚುರಿಸಿದರು.
ಅಂತೆಯೇ ಕೆಲವೊಂದು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿವಾದ ಕುರಿತಂತೆ ಇನ್‌ಫೋಸಿಸ್ ಆಡಳಿತ ನಿರ್ದೇಶಕರ ಮಂಡಳಿಯ ವಿರುದ್ಧದ ಸಮರವು ಕೊನೆಗೊಂಡಿರುವುದಾಗಿ ನಾರಾಯಣ ಮೂರ್ತಿ ಹೇಳಿದರು. ಅಧ್ಯಕ್ಷ ಶೇಷಸಾಯಿ ಅವರ ಮೇಲೆ ಕಂಪೆನಿಯು ದೃಢವಾದ ವಿಶ್ವಾಸವನ್ನು ಇರಿಸಿದ್ದು ಅದು ಪ್ರಶ್ನಾತೀತವಾಗಿದೆ ಎಂದು ಮೂರ್ತಿ ಸ್ಪಷ್ಟಪಡಿಸಿದರು.
ಕಳೆದ ತಿಂಗಳಲ್ಲಿ ಇನ್‌ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ನಂದನ್ ನಿಲೇಕಣಿ ಅವರು ಕಂಪೆನಿಯ ಆಡಳಿತ ವೈಖರಿಯ ಬಗ್ಗೆ ಕೆಲವೊಂದು ವಿಷಯಗಳಲ್ಲಿ ತಮ್ಮ ಅಸಮಾಧಾನವನ್ನು ತೋರ್ಪಡಿಸಿ ನಿರ್ದೇಶಕರ ಮಂಡಳಿಗೆ ಪತ್ರ ಬರೆದಿದ್ದು ಅದು ಕಾರ್ಪೊರೇಟ್ ವಲಯದಲ್ಲಿ , ಟಾಟಾ ಸನ್ಸ್ ವಿವಾದದ ಬಳಿಕದ ಎರಡನೇ ದೊಡ್ಡ ವಿವಾದವಾಗಿ ಸುದ್ದಿ ಮಾಡಿತ್ತು.
ಇನ್‌ಫೋಸಿಸ್ ಆಡಳಿತ ನಿರ್ದೇಶಕರ ಮಂಡಳಿಯೊಂದಿಗಗಿನ ಸಮರ ಕೊನೆಗೊಳಿಸಿರುವುದಾಗಿ ಹೇಳಿರುವ ನಾರಾಯಣ ಮೂರ್ತಿ ಅವರಿಂದು, ಇನ್‌ಫೋಸಿಸ್ ಮಂಡಳಿಯು ಸಭ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿರುವುದಾಗಿ ಹೇಳಿರುವರೆಂದು ವರದಿಯಾಗಿದೆ.