Advertisement

ಲೆ|ಫ‌ಯಾಜ್‌ ಹತ್ಯೆ ಭಯ ಮೂಡಿಸುವ ಪ್ರಯತ್ನ: ವಾಸ್ತವಿಕ ಕ್ರಮ ಅಗತ್ಯ

09:25 AM May 11, 2017 | |

ಕೆಲವೇ ತಿಂಗಳುಗಳ ಹಿಂದೆ ಭಾರತೀಯ ಮಿಲಿಟರಿ ಸೇರಿದ್ದ ಉಮರ್‌ ಫ‌ಯಾಜ್‌ ಹತ್ಯೆ ದೇಶಭಕ್ತ ಕಾಶ್ಮೀರಿ ಯುವಕರಲ್ಲಿ ಭಯ ಹುಟ್ಟಿಸುವ ಪ್ರಯತ್ನ. ಪಾಕಿಸ್ಥಾನ ಮತ್ತು ಅದು ಬೆಂಬಲಿಸುವ ಉಗ್ರರ ಇಂತಹ ತಡೆಯುವ ವಾಸ್ತವಿಕ ಕ್ರಮಗಳನ್ನು ಸರಕಾರ ಅನುಸರಿಸಬೇಕು.

Advertisement

ಭಯೋತ್ಪಾದನೆ ತಾಂಡವವಾಡುತ್ತಿರುವ ಕಾಶ್ಮೀರ ಕಣಿವೆಯ ಕುಲ್‌ಗಾಂವ್‌ನಲ್ಲಿ ಯುವ ಸೇನಾಧಿಕಾರಿ ಲೆಫ್ಟಿನೆಂಟ್‌ ಉಮರ್‌ ಫ‌ಯಾಜ್‌ ಅವರನ್ನು ಉಗ್ರರು ಅಪಹರಿಸಿ ಗುಂಡಿಕ್ಕಿ ಕೊಂದಿರುವ ಘಟನೆ ಆಘಾತಕಾರಿಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ಥಾನಿ ಸೈನಿಕರು ಗಡಿ ದಾಟಿ ಬಂದು ಇಬ್ಬರು ಯೋಧರ ರುಂಡ ಕತ್ತರಿಸಿ ಹಾಕಿದ್ದರು. ಈ ಘಟನೆ ಮಾಸುವ ಮೊದಲೇ ಉಗ್ರರು ಸೇನಾಧಿಕಾರಿಯನ್ನು ಹತ್ಯೆ ಮಾಡಿರುವುದು ಕಳವಳಕಾರಿ. ಕಾಶ್ಮೀರದಲ್ಲಿ ಲಾಗಾಯ್ತಿನಿಂದ ಭದ್ರತಾ ಪಡೆಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳಿಗೆ ಇನ್ನೊಂದು ಸೇರ್ಪಡೆ ಎಂದು ಈ ಘಟನೆಯನ್ನು ತೇಲಿಸಿ ಬಿಡುವ ಹಾಗಿಲ್ಲ. ಹಾಗೇನಾದರೂ ಮಾಡಿದರೆ ಉಗ್ರರಿಗೆ ನಮ್ಮ ಸೇನೆ ದುರ್ಬಲ ಎಂಬ ಸಂದೇಶ ನೀಡಿದಂತಾಗುತ್ತದೆ. ಸಂದರ್ಭ ಬಂದಾಗ ನೋಡಿಕೊಳ್ಳುವ ಎಂಬ ಧೋರಣೆಯನ್ನು ಬದಿಗಿಟ್ಟು ತಕ್ಷಣಕ್ಕೆ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದಿಟ್ಟತನವನ್ನು ತೋರಿಸಬೇಕು. 

ಫ‌ಯಾಜ್‌ ಇತ್ತೀಚೆಗಷ್ಟೇ ಸೇನೆಗೆ ಸೇರಿದ ಉತ್ಸಾಹಿ ಯುವಕ. ಹಿಜ್ಬುಲ್‌ ಕಮಾಂಡರ್‌ ವಾನಿ ಹುಟ್ಟಿದ ನಾಡಿನಲ್ಲೇ ಫ‌ಯಾಜ್‌ ಜನಿಸಿದ್ದಾರೆ. ವಾನಿ ಉಗ್ರ ಸಂಘಟನೆಗೆ ಕಮಾಂಡರ್‌ ಆಗಿ ಕಾಶ್ಮೀರದ ದಿಕ್ಕುತಪ್ಪಿದ ಪುಂಡನಾದರೆ ಫ‌ಯಾಜ್‌ ಸೇನೆ ಸೇರಿ ಲೆಫ್ಟಿನೆಂಟ್‌ ಆಗುವ ಮೂಲಕ ಯುವಕರಿಗೆ ಮಾದರಿಯಾಗಿದ್ದರು. ಕಣಕಣದಲ್ಲೂ ಭಾರತ ದ್ವೇಷ ತುಂಬಿಕೊಂಡಿರುವ ಕಾಶ್ಮೀರ ಕಣಿವೆಯ ಯುವಕರ ನಡುವೆ ಫ‌ಯಾಜ್‌ರಂತಹ ಅಪ್ಪಟ ದೇಶಭಕ್ತರೂ ಇದ್ದಾರೆ ಎನ್ನುವುದೇ ಸಮಾಧಾನ ಕೊಡುವ ಸಂಗತಿ. ಆದರೆ ಇಂತಹ ದೇಶಭಕ್ತರಿಗೆ ರಕ್ಷಣೆಯಿಲ್ಲ ಎಂಬ ವಾತಾವರಣ ಸೃಷ್ಟಿಯಾದರೆ ಮುಂದಿನ ದಿನಗಳಲ್ಲಿ ಕಾಶ್ಮೀರದ ಯುವಕರು ಸೇನೆ ಅಥವಾ ಪೊಲೀಸ್‌ ಪಡೆಗೆ ಸೇರಲು ಹಿಂದೇಟು ಹಾಕಬಹುದು. ಹೀಗಾಗಿ ಕೇವಲ ಹೇಳಿಕೆಗಳನ್ನು ಕೊಡುವ ಬದಲು ದೃಢ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಡಬೇಕು. 

ಕಳೆದ ಡಿಸೆಂಬರ್‌ನಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಫ‌ಯಾಜ್‌ ಎದುರು ಉಜ್ವಲ ಭವಿಷ್ಯವಿತ್ತು. ಡೆಹ್ರಾಡೂನ್‌ನ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯಿಂದ ತೇರ್ಗಡೆ ಯಾಗಿ ಯೋಧರಾಗಿದ್ದ ಫ‌ಯಾಜ್‌ ಉತ್ತಮ ಕ್ರೀಡಾಪಟುವೂ ಹೌದು. ಜಮ್ಮುವಿನ ಅಖೂ°ರ್‌ನಲ್ಲಿ ಕರ್ತವ್ಯದಲ್ಲಿದ್ದ ಅವರು ಸೇನೆಗೆ ಸೇರಿದ ಬಳಿಕ ಸೋದರ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಇದೇ ಮೊದಲ ಬಾರಿ ರಜೆ ಹಾಕಿದ್ದರು. ಮೊದಲ ರಜೆಯೇ ಕೊನೆಯ ರಜೆಯೂ ಆದದ್ದು ಮಾತ್ರ ದುರಂತ. ಮದುವೆ ಮನೆಯಿಂದಲೇ ಉಗ್ರರ ತಂಡವೊಂದು ಅವರನ್ನು ಅಪಹರಿಸಿತ್ತು. ಕಾಶ್ಮೀರದಲ್ಲಿ ಇಂತಹ ಘಟನೆಗಳು ಮಾಮೂಲಿಯಾಗಿರುವುದರಿಂದ ಬಂಧುಗಳು ಕೆಲ ಹೊತ್ತಿನ ಬಳಿಕ ಉಗ್ರರು ಅವರನ್ನು ಬಿಡುಗಡೆ ಮಾಡಬಹುದು ಎಂದು ಭಾವಿಸಿ ಪೊಲೀಸರಿಗೂ ವಿಷಯ ತಿಳಿಸಿರಲಿಲ್ಲ. ಇಂದು ಬೆಳಗ್ಗೆ ಫ‌ಯಾಜ್‌ ಮೃತದೇಹ ಸಿಕ್ಕಿದಾಗಲೇ ತಾವೆಂತಹ ತಪ್ಪು ಮಾಡಿದ್ದೇವೆ ಎನ್ನುವುದು ಅವರಿಗೆ ಅರಿವಾದದ್ದು. 

ಬುರಾನ್‌ ವಾನಿ ಹತ್ಯೆಯಾದ ಬಳಿಕ ಕಾಶ್ಮೀರದ ಸ್ಥಿತಿ ತೀರಾ ಹದಗೆಟ್ಟಿದೆ. ಪುಲ್ವಾಮ, ಶೋಪಿಯಾನ್‌, ಅನಂತನಾಗ್‌ ಮತ್ತು ಕುಲ್‌ಗಾಂವ್‌ ಜಿಲ್ಲೆಗಳಲ್ಲಂತೂ ನಿತ್ಯ ಎಂಬಂತೆ ಕಲ್ಲು ತೂರಾಟ, ಉಗ್ರ ದಾಳಿಗಳು ನಡೆಯುತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರು ಕೂಡ ಯಾವುದೇ ಹೆದರಿಕೆಯಿಲ್ಲದೆ ಭದ್ರತಾ ಪಡೆ ಸಿಬ್ಬಂದಿಯ ಮೇಲೆ ಕಲ್ಲು ತೂರುವ ಕೃತ್ಯದಲ್ಲಿ ಭಾಗಿಗಳಾಗುತ್ತಿರುವುದು ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಕಾನೂನಿನ ಕೈಗಳಿಂದ ಬಂಧಿಸಲ್ಪಟ್ಟಿರುವ ಭದ್ರತಾ ಸಿಬ್ಬಂದಿ ಅಸಹಾಯಕರಾಗಿರುವುದನ್ನು ನೋಡುವಾಗ ಕಳವಳವಾಗುತ್ತಿದೆ. ಅವರಿಗೆ ಹಣ, ಶಸ್ತ್ರಾಸ್ತ್ರ ಒದಗಿಸಿ ನೆರವಾಗುತ್ತಿರುವುದು ಪಾಕಿಸ್ಥಾನ ಎನ್ನುವುದು ಗೊತ್ತಿದ್ದರೂ ಸರಕಾರ ಏನೂ ಮಾಡದೆ ಕುಳಿತಿರುವುದು ಸರಿಯಲ್ಲ. ಕಾಶ್ಮೀರವನ್ನು ಬುಟ್ಟಿಗೆ ಹಾಕಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲ ವಿಫ‌ಲಗೊಂಡ ಬಳಿಕ ಪಾಕಿಸ್ಥಾನ ಈಗ ಸ್ಥಳೀಯ ಜನರನ್ನೇ ಭಾರತದ ವಿರುದ್ಧ ಎತ್ತಿ ಕಟ್ಟುವ ಕುಟಿಲ ತಂತ್ರವನ್ನು ಮಾಡಿದೆ. ಕಾಶ್ಮೀರದ ಜನತೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ, ಭಾರತದ ಜತೆಗೆ ಗುರುತಿಸಿಕೊಳ್ಳಲು ಅವರು ಇಷ್ಟಪಡುವುದಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಕನಸು ಕಾಣುತ್ತಿದೆ ಧೂರ್ತ ಪಾಕಿಸ್ಥಾನ. ಈ ಪರಿಸ್ಥಿತಿಯಲ್ಲಿ ಕಾಶ್ಮೀರದ ಯುವಕರನ್ನು ಉಗ್ರರ ಕಪಿಮುಷ್ಟಿಯಿಂದ ಹೊರತರಬೇಕಾಗಿರುವುದು ಅಲ್ಲಿನ ಸರಕಾರ ಮತ್ತು ರಾಜಕೀಯ ಪಕ್ಷಗಳ ಕೆಲಸ. ಅವಕಾಶವಾದ ರಾಜಕೀಯ ಪಕ್ಷಗಳಿಗೆ ಈ ವಿಚಾರ ಎಂದಿಗಾದರೂ ಅರ್ಥವಾದೀತೆ?

Advertisement
Advertisement

Udayavani is now on Telegram. Click here to join our channel and stay updated with the latest news.

Next