Advertisement

ನೀಲಗುಂದ ಶ್ರೀಗಳಿಂದ ಐಕ್ಯಮಂಟಪಕ್ಕೆ ಶಿಲಾನ್ಯಾಸ

06:09 PM Nov 26, 2022 | Team Udayavani |

ಹರಪನಹಳ್ಳಿ: ನೀಲಗುಂದ ಗುಡ್ಡದ ವಿರಕ್ತಮಠದ ಮ.ನಿ.ಪ್ರ ಚನ್ನಬಸವಶಿವ ಯೋಗಿಗಳು ತಮ್ಮ ಮಠದ ಆವರಣದಲ್ಲಿ ತಾವು ಲಿಂಗೈಕ್ಯರಾದ ನಂತರ ತಮ್ಮ ಅಂತ್ಯಕ್ರಿಯೆಗಾಗಿ ಕತೃಗದ್ದುಗೆ ನಿರ್ಮಾಣಕ್ಕೆ ಗುರುವಾರ ಶಿಲನ್ಯಾಸ ಮಾಡಿದರು.

Advertisement

25 ಅಡಿ ಅಗಲ ಹಾಗೂ 47 ಅಡಿ ಉದ್ದದ ಐಕ್ಯಮಂಟಪ ಅದರ ಮೇಲ್ಭಾಗ ಮಠದ ಮೂಲಪುರುಷ ಲಿಂಗೈಕ್ಯ ಚನ್ನಬಸವ ಶಿವಯೋಗಿಯವರ ಮೂರ್ತಿ ಸ್ಥಾಪಿಸಲು 1ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿದ್ದು ತಮಿಳುನಾಡು ಶಿಲ್ಪಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಡಲಾಗಿದೆ.

ನೀಲಗುಂದ ಮಠ ಹಾಳು ಬಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಹುಬ್ಬಳ್ಳಿ ಮೂರು ಸಾವಿರ ಮಠದ ಮುಜಗಂರವರಿಗೆ ನಮ್ಮ ಮಠಕ್ಕೆ ಸ್ವಾಮಿಯೊಬ್ಬರನ್ನು ನೀಡಿರಿ ಎಂದು ಕೇಳಿಕೊಂಡಾಗ ಮುಜಗಂ ಶ್ರೀಗಳ ಆದೇಶದ ಮೇರೇಗೆ ನೀಲಗುಂದ ಮಠಕ್ಕೆ 37 ವರ್ಷಗಳ ಹಿಂದೆ ಈಗಿನ ಚನ್ನಬಸವ ಶಿವಯೋಗಿಗಳು ಆಗಮಿಸಿದರು. ಅಲ್ಲಿಂದ ಈವರೆಗೆ ನೀಲಗುಂದ ಗುಡ್ಡದ ವಿರಕ್ತಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ದ್ದಾರೆ. ಐಟಿಐ ಕಾಲೇಜು, ಪ್ರಾಥಮಿಕ ಶಾಲೆ, ಉಚಿತ ವಸತಿ ಪ್ರಸಾದ ನಿಲಯ, ದಾಸೋಹ, ಧರ್ಮಪ್ರಚಾರ, ಪುರಾಣ ಪ್ರವಚನ ಮಾಡುತ್ತಾ ಈ ಸ್ವಾಮೀಜಿ ಸಾಗಿದ್ದಾರೆ.

ಈ ಕುರಿತು ಮಾತನಾಡಿದ ಚನ್ನ ಬಸವಶಿವಯೋಗಿಗಳು ಈ ಮಠದಲ್ಲಿ ನನಗೂ ಪೂರ್ವದಲ್ಲಿ ನಾಲ್ಕು ಜನ ಸ್ವಾಮೀಗಳು ಪೀಠಾಧಿ ಪತಿಗಳಾಗಿ ಸೇವೆ ಸಲ್ಲಿಸಿ ಲಿಂಗೈಕ್ಯರಾಗಿದ್ದಾರೆ. ಆದರೆ ಒಬ್ಬರದೂ ಕತೃಗದ್ದುಗೆ ಇಲ್ಲ. ಆದ್ದರಿಂದ ನೀವು ಬೇರೆಡೆ ಹೋಗಬೇಡಿ ಕೊನೆವರೆಗೂ ಇಲ್ಲಿಯೇ ಇರಿ ಎಂದು ಬೇರೆ ಬೇರೆ ಸ್ವಾಮಿಗಳು, ಭಕ್ತರ ಆಶಯದಂತೆ ನಾನು ಕೊನೆ ಉಸಿರುವವರೆಗೂ ಇಲ್ಲಿಯೇ ಇರಲು ನಿರ್ಣಯ ಕೈಗೊಂಡಿದ್ದು, ಅದಕ್ಕಾಗಿ ನನ್ನ ಐಕ್ಯಮಂಟಪವನ್ನು ಸ್ವತಃ ನಾನೇ ನಿರ್ಮಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ನನಗೀಗ 67 ವಯಸ್ಸು, ಲಿಂಗೈಕ್ಯವಾಗುವುದು ಯಾವಾಗ ಎಂದು ಹೇಳಲಿಕ್ಕೆ ಆಗುವುದಿಲ್ಲ, ಆದ್ದರಿಂದ ಕೆಳಗಡೆ ನನ್ನ ಇಷ್ಟದ ಪ್ರಕಾರ ಕತೃಗದ್ದುಗೆ, ಮೇಲ್ಭಾಗ ಮಠದ ಮೂಲ ಪುರುಷ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಮೂರ್ತಿ ಇರುವ ಗುಡಿ ನಿರ್ಮಿಸಲಾಗುವುದು.

Advertisement

ನನಗಾಗಿ ನಿರ್ಮಿಸುವ ಐಕ್ಯಮಂಟಪದಲ್ಲಿ ನಾನು ಇರುವವರೆಗೂ ನಿತ್ಯ ಅನುಷ್ಠಾನ ಮಾಡುತ್ತೇನೆ. ಲಿಂಗೈಕ್ಯನಾದ ನಂತರ ಭಕ್ತರು, ಇತರ ಸ್ವಾಮಿಗಳು ನನ್ನ ದೇಹವನ್ನು ಈ ಐಕ್ಯಮಂಠಪದಲ್ಲಿ ಇಟ್ಟು ಕತೃಗದ್ದುಗೆ ಮಾಡುತ್ತಾರೆ ಎಂದು ಹೇಳಿದರು. ತಮ್ಮ ಲಿಂಗೈಕ್ಯದ ನಂತರ ಹೇಗೆ ತಮ್ಮ ಸಮಾಧಿ ಇರಬೇಕು ಎಂದು ನಿರ್ಧರಿಸಿ ಈಗಲೇ ಐಕ್ಯಮಂಟಪ ನಿರ್ಮಿಸುತ್ತಿರುವುದು ಭಕ್ತರಿಗೆ ಅಚ್ಚರಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next