ಮಹಾನಗರ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4 ಕೋ.ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ
ಕಾಮಗಾರಿಗಳಿಗೆ ರವಿವಾರ ಶಾಸಕ ಜೆ.ಆರ್. ಲೋಬೋ ಹಾಗೂ ಮೇಯರ್ ಕವಿತಾ ಸನಿಲ್ ಶಿಲಾನ್ಯಾಸ ನೆರವೇರಿಸಿದರು.
ಮೇಯರ್ ಮಾತನಾಡಿ, ಪಾಲಿಕೆಯಿಂದ ಮುಖ್ಯಮಂತ್ರಿಗಳ 100 ಕೋ. ರೂ. ಅನುದಾನ ಹಾಗೂ ಪ್ರೀಮಿಯಂ ಎಫ್.ಎ.ಆರ್. ಸಹಿತ ವಿವಿಧ ಆಶ್ರಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಂಗಳೂರಿನ ಸಮಗ್ರ ಬೆಳವಣಿಗೆಗಾಗಿ ವಿವಿಧೆಡೆ ಹಲವು ರೀತಿಯ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.
ಶಾಸಕ ಲೋಬೋ ಮಾತನಾಡಿ, ಮಂಗಳೂರಿನ ಜನರಿಗೆ ಸಮರ್ಪಕ ಮೂಲಸೌಕರ್ಯ ದೊರೆಯುವಂತೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.
75 ಲಕ್ಷ ರೂ. ವೆಚ್ಚದಲ್ಲಿ ಕಂಕನಾಡಿ ಫಾದರ್ ಮುಲ್ಲರ್ ವೃತ್ತದಿಂದ ಪಂಪ್‌ವೆಲ್ ಸರ್ಕಲ್( ಹಳೆಯ ಪೋಸ್ಟ್ ಆಫೀಸ್ ರಸ್ತೆ) ರಸ್ತೆಯಲ್ಲಿ ಶಿಥಿಲಗೊಂಡಿರುವ ಒಳಚರಂಡಿ ಜಾಲ ಬದಲಾವಣೆ ಕಾಮಗಾರಿ, 98 ಲಕ್ಷ ರೂ.ವೆಚ್ಚದಲ್ಲಿ ಕದ್ರಿ ದೇವಸ್ಥಾನ ರಸ್ತೆ ಅಗಲಗೊಳಿಸುವುದು ಹಾಗೂ ಪೂರಕ ಕಾಮಗಾರಿ, 50 ಲಕ್ಷ ರೂ.ವೆಚ್ಚದಲ್ಲಿ ಜಿ.ಎಚ್. ಎಸ್.ರಸ್ತೆಯಲ್ಲಿ ಕೃಷ್ಣಭವನ ಜಂಕ್ಷನ್‌ನಿಂದ ಹೊಟೇಲ್ ವಿಮಲೇಶ್‌ವರೆಗೆ ಮುಖ್ಯ ರಸ್ತೆ ಅಭಿವೃದ್ಧಿ, 25 ಲಕ್ಷ ರೂ. ವೆಚ್ಚದಲ್ಲಿ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಭೂಗತ ಒಳಚರಂಡಿ ಕೊಳವೆ ವಿಸ್ತರಣೆ ಕಾಮಗಾರಿ, 140 ಲಕ್ಷ ರೂ. ವೆಚ್ಚದಲ್ಲಿ ಹ್ಯಾಮಿಲ್ಟನ್ ವೃತ್ತದಿಂದ ಹಳೆ ಬಂದರುವರೆಗೆ ಮುಖ್ಯ ರಸ್ತೆ ಅಭಿವೃದ್ಧಿಗೆ ರವಿವಾರ ಶಿಲಾನ್ಯಾಸ ನೆರವೇರಿತು.
ಉಪ ಮೇಯರ್ ರಜನೀಶ್, ಮುಖ್ಯಸಚೇತಕ ಎಂ.ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಆಯುಕ್ತ
ಮಹಮ್ಮದ್ ನಝೀರ್, ಸ್ಥಳೀಯ ಕಾರ್ಪೊರೇಟರ್‌ಗಳು ಉಪಸ್ಥಿತರಿದ್ದರು.