Advertisement

ಲಕ್ಷ್ಮೀಂದ್ರನಗರ: ಹೈವೇ ಕ್ರಾಸಿಂಗ್‌ಗೆ ಹೆಚ್ಚಿದ ಬೇಡಿಕೆ

03:57 PM May 30, 2019 | Team Udayavani |

ಉಡುಪಿ: ಉಡುಪಿ- ಮಣಿಪಾಲ ಹೆದ್ದಾರಿಯ (ರಾ.ಹೆದ್ದಾರಿ 169ಎ ಮಲ್ಪೆ-ತೀರ್ಥಹಳ್ಳಿ) ಕಾಮಗಾರಿಯಲ್ಲಿ ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಕ್ರಾಸಿಂಗ್‌ ನಿರ್ಮಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.

Advertisement

ಒಂದು ಹಂತದ ಕಾಮಗಾರಿ ಮುಗಿದಿದೆ. ಆದರೆ ಸಿಂಡಿಕೇಟ್‌ ಸರ್ಕಲ್‌ನಿಂದ ಲಕ್ಷ್ಮೀಂದ್ರ ನಗರ-ಪಶುಪತಿವರೆಗೆ ಎಲ್ಲಿಯೂ ಕ್ರಾಸಿಂಗ್‌ಗೆ ಅವಕಾಶ ನೀಡಿಲ್ಲ. ಇದು ಇಲ್ಲಿನ ನಿವಾಸಿಗಳು, ವ್ಯಾಪಾರಿಗಳು, ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

7 ರಸ್ತೆಗಳ ಸಂಪರ್ಕ
ರಸ್ತೆಯ ಒಂದು ಬದಿಯಲ್ಲಿ ಲಕ್ಷ್ಮೀಂದ್ರನಗರ, ಇನ್ನೊಂದು ಬದಿ ಯಲ್ಲಿ ವಿ.ಪಿ.ನಗರವಿದೆ. ಇದಕ್ಕೆ ಹೊಂದಿಕೊಂಡಂತೆ ಎರಡೂ ಬದಿ ವಿಶಾಲ ಪ್ರದೇಶವಿದೆ. ಹೆಚ್ಚು ಜನವಸತಿ ಪ್ರದೇಶವಿದು. ದಿನವೊಂದಕ್ಕೆ 2,000ಕ್ಕೂ ಅಧಿಕ ಮಂದಿ ಎರಡು ಪ್ರದೇಶಗಳ ನಡುವೆ ಓಡಾಟ ನಡೆಸುತ್ತಾರೆ. ವಿ.ಪಿ.ನಗರಕ್ಕಿಂತಲೂ ಲಕ್ಷ್ಮೀಂದ್ರನಗರ ಭಾಗದ ಪ್ರದೇಶ ಹೆಚ್ಚು ಸಮಸ್ಯೆ ಎದುರಿಸುತ್ತಿದೆ. ಯಾಕೆಂದರೆ ಈ ಭಾಗದಲ್ಲಿ 7 ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗೆ ಹೊಂದಿಕೊಂಡಿವೆ. ಇಷ್ಟು ರಸ್ತೆಗಳು ಇದ್ದೂ ಕ್ರಾಸಿಂಗ್‌ಗೆ ಅವಕಾಶ ನೀಡಿಲ್ಲ.

ಹಿಂದೆ ಇತ್ತು
ಈ ಹಿಂದೆ ಉಡುಪಿ-ಮಣಿಪಾಲ ರಸ್ತೆ ಅಗಲಗೊಂಡಾಗ ಲಕ್ಷ್ಮೀಂದ್ರನಗರದಲ್ಲಿ ಕ್ರಾಸಿಂಗ್‌ ಇತ್ತು. ಒಂದು ಅಪಘಾತವಾದ ಬಳಿಕ ಅದನ್ನು ಮುಚ್ಚಲಾಯಿತು. ಆದರೆ ಆಗ ರಸ್ತೆ ಅಷ್ಟು ವೈಜ್ಞಾನಿಕವಾಗಿ ನಿರ್ಮಾಣಗೊಂಡಿರಲಿಲ್ಲ.

ಕ್ರಾಸಿಂಗ್‌ನ ಅಗಲ ಕೂಡ ಕಡಿಮೆ ಇತ್ತು. ಈಗ ಕಾಂಕ್ರೀಟ್‌ಗೊಂಡ ರಸ್ತೆ ಇದೆ. ಹಿಂದಿಗಿಂತ ಹೆಚ್ಚು ಸಮತಟ್ಟಾಗಿದೆ. ಇಲ್ಲಿ ಕನಿಷ್ಠ 100 ಮೀಟರ್‌ ಅಗಲದ ಕ್ರಾಸಿಂಗ್‌ ಇಟ್ಟರೆ ಅಪಾಯ ಉಂಟಾಗದು. ಅದಕ್ಕೆ ಪೂರಕವಾಗಿ ಸೂಕ್ತ ಎಚ್ಚರಿಕಾ ಫ‌ಲಕ ಅಳವಡಿಸಬೇಕು. ವೇಗಮಿತಿ ನಿಗದಿಪಡಿಸಿ ವೇಗ ನಿಯಂತ್ರಕ ಅಳವಡಿಸಬೇಕು. ಪಾದಚಾರಿಗಳು ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್‌ ಹಾಕಬೇಕು. ಈ ಬಗ್ಗೆ ಪೊಲೀಸರು ಮತ್ತು ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರು ಸಮೀಕ್ಷೆ ನಡೆಸಬೇಕು ಎನ್ನುತ್ತಾರೆ ಸ್ಥಳೀಯರು.

Advertisement

ಮದುವೆ ಮನೆಯವರೇ ಮಣ್ಣು ಹಾಕಿದರು !
ಕಾಮಗಾರಿಯಿಂದಾಗಿ ಇಲ್ಲಿನ 7 ಸಂಪರ್ಕ ರಸ್ತೆಗಳ ಪೈಕಿ 6 ರಸ್ತೆಗಳು ಮುಖ್ಯ ರಸ್ತೆಯಿಂದ (ಹೆದ್ದಾರಿ) ಸಂಪರ್ಕ ಕಡಿದುಕೊಂಡಿವೆ. ಇಲ್ಲಿನ ಒಂದು ಮನೆಯಲ್ಲಿ ಮದುವೆ ಇದ್ದುದರಿಂದ ಆ ಮನೆಯವರು ತಿಂಗಳ ಹಿಂದೆ ಲಕ್ಷ್ಮೀಂದ್ರನಗರ 4ನೇ ಕ್ರಾಸ್‌ ಸಂಪರ್ಕ ಜಾಗಕ್ಕೆ ಮಣ್ಣು ಹಾಕಿದ್ದರು. ಉಳಿದ ರಸ್ತೆಯವರು ಕೂಡ ಇದರ ಮೂಲಕವೇ ತೆರಳುತ್ತಿದ್ದಾರೆ!. ಇನ್ನೊಂದು ರಸ್ತೆ (3ನೇ ಕ್ರಾಸ್‌) ಪೆರಂಪಳ್ಳಿಗೆ ನೇರ ಸಂಪರ್ಕ ಸಾಧಿಸುತ್ತದೆ. ಈಗ ಈ ರಸ್ತೆ ಸಂಪರ್ಕ ಕಡಿದುಕೊಂಡಿದೆ.

ಎಂಡ್‌ ಟು ಎಂಡ್‌ ಚರಂಡಿ ಮಾಡಿ
ರಸ್ತೆಯ ಮಾರ್ಜಿನ್‌ನ ಜಾಗದ ಕೊನೆಯಲ್ಲಿ (ಎಂಡ್‌ ಟು ಎಂಡ್‌) ಚರಂಡಿ/ಫ‌ುಟ್‌ಪಾತ್‌ ನಿರ್ಮಿಸಿದರೆ ಹೆದ್ದಾರಿಗೆ ಹೆಚ್ಚುವರಿ ಜಾಗ ಸಿಗುತ್ತದೆ. ಇದರಿಂದ ವಾಹನಗಳ ನಿಲುಗಡೆಗೂ ಅವಕಾಶವಾಗುತ್ತದೆ. ಲಕ್ಷ್ಮೀಂದ್ರ ನಗರದಲ್ಲಿ ಸ್ವಾಧೀನಪಡಿಸಿದ ಜಾಗವಿದ್ದರೂ ರಸ್ತೆಯ ತೀರಾ ಅಂಚಿಗೆ ಫ‌ುಟ್‌ಪಾತ್‌, ಚರಂಡಿ ನಿರ್ಮಿಸಲಾಗಿದೆ. ಇದರಿಂದ ಬಸ್‌ಗಳ ನಿಲುಗಡೆಗೂ ಸಮಸ್ಯೆಯಾಗಲಿದೆ.

ಎಂಜಿಎಂ ಕಾಲೇಜಿನ ಮಹಿಳಾ ಹಾಸ್ಟೆಲ್‌ ಎದುರಿರುವ ಅಂಗಡಿ ಜಾಗದಲ್ಲಿ ರಸ್ತೆ ಪಕ್ಕ ಜಾಗ ಬಿಟ್ಟು ಚರಂಡಿ/ಫ‌ುಟ್‌ಪಾತ್‌ ನಿರ್ಮಿಸಲಾಗಿದೆ. ಇದರಿಂದ ಅಲ್ಲಿ ಸ್ಥಳಾವಕಾಶ ಸಿಕ್ಕಿದೆ. ಹಾಗೇ ಇಲ್ಲೂ ಮಾಡಿದರೆ 30 ಅಡಿಯಷ್ಟು ಹೆಚ್ಚು ಜಾಗ ಲಭ್ಯವಾಗುತ್ತದೆ. ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯರಾದ ಸುರೇಂದ್ರ ಶೆಟ್ಟಿ ಮತ್ತು ಶೇಖರ್‌ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಶಾಸಕರ ಭೇಟಿ
ವಿವಿಧ ಬೇಡಿಕೆಗಳಿಗೆ ಸಂಬಂಧಿಸಿ ಸುಮಾರು 20 ಮಂದಿ ಶಾಸಕ ಕೆ.ರಘುಪತಿ ಭಟ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಕ್ರಮದ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಳೆಗಾಲಕ್ಕೆ ಮೊದಲೇ ಚರಂಡಿ ನಿರ್ಮಿಸಿ
ಹೆದ್ದಾರಿ ಕಾಮಗಾರಿಯಿಂದಾಗಿ ಇಲ್ಲಿನ ಬಹುತೇಕ ಎಲ್ಲ ಚರಂಡಿ ಮುಚ್ಚಿ ಹೋಗಿವೆ. ಲಕ್ಷ್ಮೀಂದ್ರನಗರ ಭಾಗದಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಇದು ಈ ಮಳೆಗಾಲದ ಮೊದಲು ಆಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಇಲ್ಲಿ ತಾತ್ಕಾಲಿಕವಾಗಿ ಮಣ್ಣಿನ ಚರಂಡಿಗೆ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
– ಸುರೇಂದ್ರ ಶೆಟ್ಟಿ , ಸ್ಥಳೀಯರು, ಲಕ್ಷ್ಮೀಂದ್ರನಗರ

ಅಪಘಾತ ಸಾಧ್ಯತೆ
ಜಿಲ್ಲಾಧಿಕಾರಿಯವರೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖ ಖುದ್ದಾಗಿ ಪರ್ಕಳದಿಂದ ಕಲ್ಸಂಕದ ವರೆಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲಕ್ಷ್ಮೀಂದ್ರ ನಗರ ತಗ್ಗು ಪ್ರದೇಶದಲ್ಲಿ ಯು ಟರ್ನ್ ನೀಡಿದರೆ ಅಲ್ಲಿ ಅಪಘಾತವಾಗುವ ಅಪಾಯ ಇರುವುದರಿಂದ ಸ್ವಲ್ಪ ಮುಂದಕ್ಕೆ ಅವಕಾಶ ನೀಡಲಾಗಿದೆ.

ನಗರ ವ್ಯಾಪ್ತಿಯಲ್ಲಿ ಕನಿಷ್ಠ 500 ಮೀಟರ್‌ ಅಂತರದಲ್ಲಿ ಕ್ರಾಸಿಂಗ್‌/ಯು-ಟರ್ನ್ ನೀಡಲು ಅವಕಾಶ ವಿದೆ. ಆದರೆ ಅಪಘಾತದ ಅಪಾಯ ಇರುವಲ್ಲಿ ಇಂಥ ಕ್ರಾಸಿಂಗ್‌ ನೀಡಲಾಗದು. ಜಿಲ್ಲಾಧಿಕಾರಿಯವರೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
-ಸಂಚಾರ ಪೊಲೀಸ್‌ ಠಾಣಾಧಿಕಾರಿ, ಉಡುಪಿ ನಗರ

Advertisement

Udayavani is now on Telegram. Click here to join our channel and stay updated with the latest news.

Next