ಘಟಪ್ರಭಾ: ಮಲ್ಲಾಪುರ ಪಿ.ಜಿ ಪಟ್ಟಣದ ಗ್ರಾಮ ದೇವತೆ ಲಕ್ಷ್ಮಿದೇವಿಯ ಗುಡಿಯಲ್ಲಿ ನೂತನ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪನೆಯನ್ನು ಉಪ್ಪಾರ ಸಮಾಜದ ಮುಖಂಡರ ವಿರೋಧದಿಂದ ಕೈಬಿಡಲಾಗಿದೆ.
ಗ್ರಾಮದಲ್ಲಿ ಮುರ್ತಿ ಪ್ರತಿಷ್ಠಾಪನೆ ಕುರಿತು ಲಿಂಗಾಯತ ಹಾಗೂ ಉಪ್ಪಾರ ಸಮಾಜದ ದೇವಿಯ ಭಕ್ತರ ನಡುವೆ ಭಿನ್ನಾಭಿಪ್ರಾಯವಿದ್ದು, ಕಳೆದ 6 ತಿಂಗಳಿಂದ ಎರಡೂ ಸಮಾಜದವರು 10 ವರ್ಷಗಳ ಹಿಂದಿನ ವೈಷಮ್ಯ ಮರೆತು ಜೂ. 5ರಿಂದ 10ರ ತನಕ ಜಾತ್ರೆಯನ್ನು ಅದ್ದೂರಿಯಾಗಿ ನೆರವೇರಿಸಲು ತೀರ್ಮಾನಿಸಿದ್ದರು. ಅಲ್ಲದೇ ಇದೇ ಸಂದರ್ಭದಲ್ಲಿ ಗುಡಿಯಲ್ಲಿ ನೂತನ ಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಹ ನಿರ್ಧರಿಸಿ ಹೊಸ ಮೂರ್ತಿ ತಯಾರಿಸಿ ತರಲಾಗಿತ್ತು.
ಬುಧವಾರ ಸಂಜೆ ಮೆರವಣಿಗೆಯಲ್ಲಿ ಮೂರ್ತಿಯನ್ನು ತಂದು ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬುಧವಾರ ಉಪ್ಪಾರ ಸಮಾಜದ ಕೆಲ ಮುಖಂಡರು ಹಿಂದೆ ನಮಗೆ ಟಗರು ಮೂರ್ತಿ ಕುಳ್ಳಿರಿಸಲು ಒಪ್ಪಿಗೆ ನೀಡಿಲ್ಲ. ಕಾರಣ ಈಗ ನೂತನ ಲಕ್ಷ್ಮಿ ಮೂರ್ತಿ ಕುಳ್ಳಿರಿಸಲು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿ ಠಾಣೆ ಮೆಟ್ಟಿಲೇರಿದ್ದರಿಂದ ಘಟಪ್ರಭಾ ಠಾಣೆಯಲ್ಲಿ ಗೋಕಾಕ ಡಿವೈಎಸ್‌ಪಿ ಸಮ್ಮುಖದಲ್ಲಿ ಎರಡು ಗುಂಪಿನವರ ಮಧ್ಯೆ ಚರ್ಚೆ ನಡೆದರೂ ಮೂರ್ತಿ ಪ್ರತಿಷ್ಠಾಪನೆ ಮೂಡದ ಹಿನ್ನೆಲೆಯಲ್ಲಿ ಮೂರ್ತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆಯನ್ನು ಮುಂದೂಡಲಾಗಿದೆ.
ಶತಮಾನಗಳ ಇತಿಹಾಸವಿರುವ ಲಕ್ಷ್ಮಿ ದೇವಿ ಗುಡಿಯಲ್ಲಿ ಮೊದಲು ಕಲ್ಲಿನ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. 2011ರಲ್ಲಿ ನಿಂತಿರುವ ಲಕ್ಷ್ಮಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ ಪಟ್ಟಣ ಸದಾ ಸಮೃದ್ಧಿ ಮತ್ತು ಶಾಂತ ರೀತಿಯಿಂದ ಇರಬೇಕು. ಆದ್ದರಿಂದ ಗ್ರಾಮ ದೇವತೆಯು ಕುಳಿತಿರುವ ಭಂಗಿಯಲ್ಲಿರಬೇಕೇ ವಿನಾ ನಿಂತಿರಬಾರದೆಂದು ನಿರ್ಧರಿಸಿ, ಕುಳಿತ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲವರು ವಿರೋಧ ಮಾಡಿದ್ದರಿಂದ ಮೂರ್ತಿ ಪ್ರತಿಷ್ಠಾಪನೆಯನ್ನು ರದ್ದು ಪಡಿಸಲಾಗಿದೆಯೆಂದು ಹಿರಿಯರಾದ ಸುಭಾಸ ಹುಕ್ಕೇರಿ ತಿಳಿಸಿದ್ದಾರೆ. ಮೂರ್ತಿಯನ್ನು ಪ್ರತಿಷ್ಠಾಪಿಸಲು ನಮ್ಮ ಸಮಾಜದಿಂದ ಸಂಪೂರ್ಣ ವಿರೋಧವಿದೆ. ಏಕೆಂದರೆ ಈಗ ನೂತನ ಮೂರ್ತಿಯ ಪ್ರತಿಷ್ಠಾಪನೆ ಬಗ್ಗೆ ನಮ್ಮ ಸಮಾಜದವರಿಗೆ ಯಾರೂ ಮುಂಚಿತವಾಗಿ ತಿಳಿಸಿಲ್ಲ. ಅಲ್ಲದೇ ಈ ಹಿಂದೆ ನಮ್ಮ ಸಮಾಜಕ್ಕೆ ಟಗರು ಮೂರ್ತಿ ಕುಳ್ಳಿರಿಸಲು ಅವರು ಒಪ್ಪಿಗೆ ನೀಡಿರಲಿಲ್ಲ ಎಂದು ಉಪ್ಪಾರ ಸಮಾಜದ ಯುವ ಮುಖಂಡ ಸಂಜೀವ ನಾಯಿಕ ತಿಳಿಸಿದ್ದಾರೆ.