ಬೆಂಗಳೂರು: ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಸೆಡ್ಡುಹೊಡೆದಿದ್ದ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷಗಿರಿಯಿಂದ ಕೆಳಗಿಳಿಸಲು ತೆರೆಮರೆಯ ಕಸರತ್ತು ನಡೆದಿದೆ.
ಒಬ್ಬರಿಗೆ ಒಂದೇ ಹುದ್ದೆ ಅಸ್ತ್ರ ಪ್ರಯೋಗಿಸಿ ಬೆಳಗಾವಿ ಗ್ರಾಮಾಂತರ ಶಾಸಕಿಯೂ ಆಗಿರುವ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಜಾರಕಿಹೊಳಿ ಸಹೋದರರು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ತೆಗೆಯಬೇಕು ಎಂಬ ಬೇಡಿಕೆ ಸಹ ಇಟ್ಟಿದ್ದರು. ಇದೀಗ ಆ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಲಕ್ಷ್ಮೀ ಹೆಬ್ಟಾಳ್ಕರ್ ಜಾಗಕ್ಕೆ ಕುರುಬ ಸಮಾಜಕ್ಕೆ ಸೇರಿರುವ ಡಾ. ನಾಗಲಕ್ಷ್ಮೀ ಚೌಧರಿ ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಬಂಡಾಯಕ್ಕೆ ಕಾರಣವಾಗಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ರಾಜ್ಯಾಧ್ಯಕ್ಷರ ಸ್ಥಾನದಿಂದ ಕೆಳಗಿಳಿಸಬೇಕೆಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಸೋಮವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಕೆಳಗಿಳಿಸಲು ಕಾರಣವನ್ನೂ ನೀಡಿರುವ ಮಹಿಳಾ ಕಾರ್ಯಕರ್ತೆಯರು, ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಇದೆ. ಲಕ್ಷ್ಮೀ ಹೆಬ್ಟಾಳ್ಕರ್ ಅವರು ಶಾಸಕಿ ಆಗಿರುವುದರಿಂದ ಮಹಿಳಾ ಘಟಕದ ಅಧ್ಯಕ್ಷರ ಹುದ್ದೆಯಿಂದ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಬದಲಾಯಿಸುವ ಪ್ರಯತ್ನದ ನಡುವೆಯೇ ಅವರನ್ನು ಬದಲಾಯಿಸಿ ಡಾ. ನಾಗಲಕ್ಷ್ಮೀ ಚೌಧರಿ ಅವರನ್ನು ನೇಮಿಸುವಂತೆ ಮನವಿ ಸಲ್ಲಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಲಕ್ಷ್ಮೀ ಹೆಬ್ಟಾಳ್ಕರ್ ಜಾರಕಿಹೊಳಿ ಸಹೋದರರಿಗೆ ಸವಾಲಾಗಿ ಪರಿಣಮಿಸಿದ್ದು, ಅವರನ್ನು ನಿಯಂತ್ರಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಎದುರು ನೇರವಾಗಿಯೇ ಹೇಳಿದ್ದರು. ಬೆಳಗಾವಿ ಬ್ಯಾಂಕ್ ಗಲಾಟೆ ಹಿನ್ನೆಲೆಯಲ್ಲಿಯೇ ಸಮ್ಮಿಶ್ರ ಸರ್ಕಾರದ ಅಸ್ಥಿತ್ವಕ್ಕೆ ಕುತ್ತು ಬರುವ ಸ್ಥಿತಿ ನಿರ್ಮಾಣವಾಗಿತ್ತು.
ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ನಿಯಮ ಇರುವುದರಿಂದ ಹಾಲಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ನೀಡಬೇಕು. ಅಧಿಕಾರ ಒಬ್ಬರ ಬಳಿಯೇ ಕೇಂದ್ರಿಕೃತವಾಗುವುದು ಸರಿಯಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ.
– ಪ್ರಭಾವತಿ, ಕಾಂಗ್ರೆಸ್ ಕಾರ್ಯಕರ್ತೆ