ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಮೇ 5ರ ವರೆಗೂ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕಳೆದ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರದ ವೇಳೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಹಾಗಾಗಿ ಕೆಲವು ದಿನ ಮನೆಯಲ್ಲೇ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಕೋವಿಡ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಮೇ 5ರ ವರೆಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ, ಸಾರ್ವಜನಿಕರನ್ನು ಭೇಟಿ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.
ಹಾಗಾಗಿ ಮೇ 5 ರವರೆಗೆ ಸಾರ್ವಜನಿಕರು ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ವೈದ್ಯರ ಸಲಹೆಯಂತೆ ತಮ್ಮ ಹಾಗೂ ತಮ್ಮ ಕುಟುಂಬದ ಭೇಟಿಗೆ ಬರಬಾರದು. ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತರಾಗಿರಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ವಿನಂತಿಸಿದ್ದಾರೆ.
ಕೊರೊನಾವನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲೇ ಇರಬೇಕು. ಹೊರಗೆ ಬರಬೇಕಾದ ಅನಿವಾರ್ಯತೆ ಬಂದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಕೆಲವು ದಿನ ಲಾಕ್ ಡೌನ್ ಮಾಡಬೇಕು. ಇಲ್ಲವಾದಲ್ಲಿ ಇಂತಹ ಗಂಭೀರ ಪರಿಸ್ಥಿತಿಯಂದ ಜನರನ್ನು ಕಾಪಾಡುವುದು ಕಷ್ಟ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ನಮ್ಮ ಕುಟುಂಬದ ಸದಸ್ಯರು ಹಾಗೂ ಸಹಾಯಕರು ಸೇರಿ 18 ಜನರಿಗೆ ಕೊರೋನಾ ಬಂದಿತ್ತು. ಕೆಲವರು ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು ಕೆಲವರಿಗೆ 6 ದಿನಗಳ ಹಿಂದೆ ಪರಿಸ್ಥಿತಿ ನೋಡಿ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಹಾಗಾಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದಿದ್ದೇವೆ ಎಂದು ಅವರು ಹೇಳಿದರು.